ಸಿನಿಮಾ ಲೇಖನ

ಶೆಟ್ರಂಗಡಿಯ ಅಕ್ಕಿ ಎಲ್ಲರೂ ಕಂಡಂತೆ

ಟಿವಿ ಚಾನೆಲ್ ನಿರೂಪಕರಾದ ಗೌರೀಶ್ ಅಕ್ಕಿ ಮತ್ತು ಶೀತಲ್ ಶೆಟ್ಟಿ ಅವರಿಗೆ ವರ್ಗಾವಣೆಯಾಗಿದೆಯೇ? ಅವರಿಬ್ಬರೂ ತಮ್ಮ ತಮ್ಮ ಟಿವಿ ಚಾನೆಲ್ ಬಿಟ್ಟು ಇಂಡಿಯನ್ ಎಕ್ಸ್‌ಪ್ರೆಸ್‌ಗೋ ಅಥವಾ ಕನ್ನಡ ಪ್ರಭಕ್ಕೋ ಸೇರಿಕೊಂಡಿದ್ದಾರೆಯೇ ಎಂಬ ಕುತೂಹಲ ಮೊನ್ನೆ ಹಲವರಿಗಿತ್ತು. ಅದಕ್ಕೆ ಕಾರಣ ಗೌರೀಶ್ ಅಕ್ಕಿ ಮತ್ತು ಶೀತಲ್ ಶೆಟ್ಟಿ ಇಬ್ಬರೂ ಇಂಡಿಯನ್ ಎಕ್ಸ್‌ಪ್ರೆಸ್ ಬಿಲ್ಡಿಂಗ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡದ್ದು. ಆದರೆ ಅವರ ಜೊತೆಗೆ ಯಾವಾಗ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ನಾಯಕ ಕಮ್ ಉಳಿದವರು ಕಂಡಂತೆ ಚಿತ್ರ ನಿರ್ದೇಶಕ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡರೋ ಆಗ ಎಲ್ಲರ ಕುತೂಹಲಕ್ಕೆ ತೆರೆಬಿತ್ತು. ಅಕ್ಕಿ ಮತ್ತು ಶೆಟ್ಟಿ ಎರಡಕ್ಕೂ ಇರುವ ನಂಟು ಅಲ್ಲಿ ಗೋಚರಿಸಿತ್ತು.
ಅದು ಉಳಿದವರು ಕಂಡಂತೆ ಚಿತ್ರದ ಚಿತ್ರೀಕರಣ. ಈಗಾಗಲೇ ತಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ ರಕ್ಷಿತ್ ಶೆಟ್ಟಿ ಅಂದು ಪತ್ರಿಕಾ ಕಚೇರಿಯಲ್ಲಿ ನಡೆಯಬೇಕಾದ ಒಂದಷ್ಟು ದೃಶ್ಯಗಳ ಚಿತ್ರೀಕರಣಕ್ಕಾಗಿ ಅಲ್ಲಿಗೆ ಬಂದಿದ್ದರು.
ಎಲ್ಲರಿಗೂ ಗೊತ್ತಿದ್ದಂತೆ ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಅವರಲ್ಲದೆ ಈ ಚಿತ್ರದಲ್ಲಿ ಕಿಶೋರ್, ರಿಶಬ್ ಶೆಟ್ಟಿ, ಲಿಖಿತ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಒಂದು ಇಂಟರೆಸ್ಟಿಂಗ್ ಎಪಿಸೋಡ್‌ನಲ್ಲಿ ಗೌರೀಶ್ ಅಕ್ಕಿ ಮತ್ತು ಶೀತಲ್ ಶೆಟ್ಟಿ ಕೂಡ ಅಭಿನಯಿಸುತ್ತಿದ್ದಾರೆ. ಶೀತಲ್ ಅವರಿಗೆ ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಚಿತ್ರದ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೇಸ್ ಒಂದನ್ನು ಅನಾವರಣಗೊಳಿಸುವ ಜವಾಬ್ದಾರಿ ಶೀತಲ್ ಅವರದ್ದು. ಈ ಚಿತ್ರದಲ್ಲಿ ಶೀತಲ್ ಕೆಲಸ ಮಾಡುವ 80ರ ದಶಕದ ಪತ್ರಿಕೆಯೊಂದರ ಮುಖ್ಯ ಸಂಪಾದಕರಾಗಿ ಗೌರೀಶ್ ಅಕ್ಕಿ ಕಾಣಿಸಿಕೊಂಡಿದ್ದಾರೆ.
ಕೇಸ್‌ಗೆ ಸಂಬಂಧಪಟ್ಟಂತೆ ಈ ಇಬ್ಬರ ನಡುವಿನ ಗಂಭೀರ ಸಂವಾದದ ದೃಶ್ಯದ ಜೊತೆಗೆ, ಕ್ಯಾಮರಾ, ಆನ್‌ಸ್ಪಾಟ್ ಡಬ್ಬಿಂಗ್, ಲೈಟಿಂಗ್ ಎಲ್ಲವನ್ನೂ ನಿಭಾಯಿಸುತ್ತಿದ್ದ ರಕ್ಷಿತ್ ಅಂದು ಅಕ್ಕಿ ಮತ್ತು ಶೆಟ್ಟಿ ಅವರ ನಡುವಿನ ಲೈಟ್ ಹಾರ್ಟ್ ದೃಶ್ಯವನ್ನು ಕೂಡ ನಿರ್ದೇಶಿಸುತ್ತಿದ್ದರು. 'ಫಾರ್ಟಿ, ಮೈ ಶರ್ಟ್ ಸೈಜ್, ಐ ಥಿಂಕ್ ಇಟ್ಸ್ ಫಾರ್ಟಿ' ಎನ್ನುತ್ತ ಗೌರೀಶ್ ತಮ್ಮ ನಟನೆಯ ವರಸೆ ತೋರಿಸುತ್ತಿದ್ದರು. ನಿರೂಪಕರಾಗಿ ತಮ್ಮ ವಿಶಿಷ್ಟ ಶೈಲಿಯಿಂದಲೇ ಹೆಸರು ಮಾಡಿರುವ ಅವರು ಅಂದು ತಮ್ಮ ಅಭಿನಯದಲ್ಲಿ ಹೊಸ ಖದರ್ ತೋರಿಸುತ್ತಿದ್ದರು.
ಮಾತಾಡ್ ಮಾತಾಡು ಮಲ್ಲಿಗೆ, ಕಳ್ಳರ ಸಂತೆ, ಮೈನಾ ಮುಂತಾದ ಚಿತ್ರಗಳಲ್ಲಿ ನಟರಾಗಿ ಬಣ್ಣ ಹಚ್ಚಿದ್ದ ಗೌರೀಶ್ ಅಕ್ಕಿ ಅವರಿಗೆ ಅಭಿನಯ ಹೊಸತಲ್ಲ.
ಆದರೆ ಇಲ್ಲಿಯವರೆಗೆ ಬಹುತೇಕ ನಿರೂಪಕರಾಗಿ ಕಾಣಿಸಿಕೊಂಡಿದ್ದ ಅವರ ಮುಖದಲ್ಲೇ ಈ ಚಿತ್ರದಲ್ಲಿ ಅವರಿಗೊಂದು ವಿಶೇಷ ಪಾತ್ರ ಇದೆ ಎಂಬುದು ಗೋಚರಿಸುತ್ತಿತ್ತು.
 ನಟನೆಯನ್ನು ಎಂಜಾಯ್ ಮಾಡುತ್ತ ಅಭಿನಯಿಸಿದಂತೆ ಕಾಣುತ್ತಿದ್ದ ಗೌರೀಶ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು. 'ನಾನು ಮೊದಲ ಬಾರಿಗೆ ನಿರೂಪಕನಾಗಿ ಅಲ್ಲದೆ ಕಾಣಿಸಿಕೊಂಡಿದ್ದು ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರದಲ್ಲಿ. ಈ ಹಿಂದೆ ಚಾರ್‌ಮಿನಾರ್ ಚಿತ್ರದಲ್ಲೂ ಅಭಿನಯಿಸಿದ್ದೆ. ಅದರ ನಾಸ್ಟಾಲ್ಜಿಕ್ ಕಥೆ ನನಗೆ ಇಷ್ಟವಾಗಿತ್ತು. ಬಸವಣ್ಣ ಚಿತ್ರದಲ್ಲಿ ದೇವರನ್ನು ನಂಬದ ಅರ್ಚಕರ ಹಿರಿಯಮಗನಾಗಿ ಅಭಿನಯಿಸಿದ್ದೇನೆ. ಅಲ್ಲಿ ನನ್ನದು ವಿಜ್ಞಾನಿಯ ಪಾತ್ರ. ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ಪೂರ್ಣಪ್ರಮಾಣದ ಪಾತ್ರ. ಇನ್ನು ಉಳಿದವರು ಕಂಡಂತೆ ಚಿತ್ರದಲ್ಲಿ ನಾನು ಫ್ರೆಷ್ ಆಗಿ ಕಾಣಿಸುತ್ತೇನೆ ಎಂದರೆ ಅದಕ್ಕೆ ಕಾರಣ ನಿರ್ದೇಶಕ ರಕ್ಷಿತ್ ಶೆಟ್ಟಿ.  80ರ ದಶಕದಲ್ಲಿ ಪತ್ರಿಕೋದ್ಯಮ ಹೇಗಿತ್ತು ಅನ್ನೋದನ್ನ ನಾನೂ ನೋಡಿಲ್ಲ, ರಕ್ಷಿತ್ ಕೂಡ ನೋಡಿಲ್ಲ. ಆದರೆ ಅವರ  ಅಬ್ಸರ್ವೇಶನ್ ಅದ್ಭುತ. ವಿವರಗಳನ್ನು ಗಮನಿಸುವ ಅವರ ಸಾಮರ್ಥ್ಯ ನೋಡಿದರೆ ನಾವೀಗ ನೋಡುತ್ತಿರುವ ಹೊಸ ಜಮಾನಾದ ಸೂಕ್ಷ್ಮ ಸಂವೇದನಾಶೀಲ ಸಿನಿಮಾ ನಿರ್ದೇಶಕರಲ್ಲಿ ರಕ್ಷಿತ್ ಕೂಡ ಒಬ್ಬರಾಗುತ್ತಾರೆ ಎನ್ನುವ ನಂಬಿಕೆ ನನ್ನದು. ಕಥೆಯ ಆಯ್ಕೆ ಮತ್ತು ಅದನ್ನು ಹೇಳುವ ಅವರ ಶೈಲಿ ನನ್ನನ್ನು ಇಂಪ್ರೆಸ್ ಮಾಡಿತು. ಒಂದು ಕಮರ್ಷಿಯಲ್ ಚಿತ್ರ ಎಂದರೆ ಹೇಗಿರಬೇಕು ಎನ್ನುವುದನ್ನು ರಕ್ಷಿತ್ ಶೆಟ್ಟಿ ಈ ಚಿತ್ರದ ಮೂಲಕ ಹೇಳಿದ್ದಾರೆ ಎಂದು ನನಗನಿಸುತ್ತಿದೆ.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್