ಸಿನಿಮಾ ಲೇಖನ

Story ಕಥೆ

ಯಾಕೆ ನಮ್ಮಲ್ಲಿ ಹೊಸ ಕಥೆಗಳೇ ಇಲ್ಲವೆ? ಒಂಚೂರು ಖಾರ, ಕೊಂಚ ಬೇಸರ ಈ ಎರಡನ್ನೂ ಮಿಕ್ಸ್ ಮಾಡಿಕೊಂಡು...

ಯಾಕೆ ನಮ್ಮಲ್ಲಿ ಹೊಸ ಕಥೆಗಳೇ ಇಲ್ಲವೆ?
ಒಂಚೂರು ಖಾರ, ಕೊಂಚ ಬೇಸರ ಈ ಎರಡನ್ನೂ ಮಿಕ್ಸ್ ಮಾಡಿಕೊಂಡು ಹೀಗೆ ಪ್ರಶ್ನೆ ಎಸೆದಿದ್ದು ನಟ ಆದಿತ್ಯ. 'ಡೆಡ್ಲಿ ಸೋಮ'ನ ಇಮೇಜ್‌ನ ಈ ಹೀರೋಗೆ ಇಂಥ ಪ್ರಶ್ನೆ ಮೂಡಲು ಕಾರಣ 'story'ಗಳ ಕಥೆ! ಅವರ ಈ ಬೇಸರಕ್ಕೆ ಒಂದಿಷ್ಟು ಪೀಠಿಕೆ ಹಾಕುವುದಾದರೆ... ಚಿತ್ರರಂಗದಲ್ಲಿ ಒಂದು ಕಾಯಿಲೆ ಇದೆ. ಅದೇನೆಂದರೆ, ಒಬ್ಬ ನಟ, ನಟಿ ಒಂದು ಚಿತ್ರದಲ್ಲಿ ಮಿಂಚಿದರೆ ಮುಂದೆ ಅಂಥದ್ದೇ ಕಥೆ, ಪಾತ್ರಗಳು ಅವರನ್ನು ಪದೇಪದೇ ಹುಡುಕಿಕೊಂಡು ಬರುತ್ತವೆ. 'ಅಯ್ಯೋ ಒಂದೇ ರೀತಿ ಇದೆ' ಎಂದು ಕೆಲವರು ರಿಜೆಕ್ಟ್ ಮಾಡುತ್ತಾರೆ. ಮತ್ತೆ ಕೆಲವರು ಕಥೆ, ಪಾತ್ರ, ಚಿತ್ರ ಹೇಗಿದ್ದರೆ ನನಗೇನು ಎಂದು ಬಾಗಿಲವರೆಗೂ ಬಂದ ಅವಕಾಶಗಳನ್ನು ಅಪ್ಪಿಕೊಳ್ಳುತ್ತಾರೆ. ಇಲ್ಲಿ ಪ್ರಶ್ನೆ ಅದಲ್ಲ, ನಟ ಶಿವಣ್ಣ ಮಚ್ಚು ಹಿಡಿದು ಚಿತ್ರವೊಂದರಲ್ಲಿ ಗೆದ್ದರೆ ಮತ್ತೆ ಅವರನ್ನು ಅಂಥ ಹತ್ತಾರು ಮಚ್ಚಿನ ಕಥೆಗಳು ಹುಡುಕಿಕೊಂಡು ಹೋಗುತ್ತವೆಯೇ? ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಮೆಜೆಸ್ಟಿಕ್‌', 'ದಾಸ', 'ಅಯ್ಯ', 'ಕಲಾಸಿಪಾಳ್ಯ' ಇಮೇಜ್‌ನಿಂದ ಹೊರಬಂದು 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ'ನಾಗಿ ಮಿಂಚಿದರೆ ಮುಂದೆ ಒಂದಿಷ್ಟು ವೀರರ ಚರಿತ್ರೆಯ ಪುಟಗಳು ದರ್ಶನ್ ಎದುರು ಕಥೆಗಳಾಗುತ್ತವೆಯೇ? ಈ ಪ್ರಶ್ನೆಗಳಿಗೆ 'ಹೌದು' ಎನ್ನುತ್ತಾರೆ ಕೆಲವರು. ಪುನೀತ್, ಸುದೀಪ್, ಅಜಯ್ ರಾವ್, ಗಣೇಶ್, ಯೋಗಿ, ಯಶ್... ಹೀಗೆ ಎಲ್ಲರದ್ದೂ ಒಂದೇ 'story' ಕಥೆ.
ಒಂದು ಕಥೆ ಹಿಟ್ ಆದ ಕೂಡಲೇ ಅಂಥದ್ದೇ ಹತ್ತಾರು ಕಥೆಗಳು ಹುಟ್ಟಿಕೊಂಡು ಪದೇ ಪದೇ ತಮ್ಮನ್ನು ಪೀಡಿಸುತ್ತವೆ ಎಂಬುದು ನಟ ಆದಿತ್ಯರ ಬೇಸರದ ಮಾತು.
ಅವರ ಪ್ರಕಾರ 'ಡೆಡ್ಲಿಸೋಮ'ದ ನಂತರ 'ಡೆಡ್ಲಿ' ಇಮೇಜ್‌ನಿಂದ ಹೊರಬರಲು ಅವರು ಸಾಕಷ್ಟು ಕಸರತ್ತು ಮಾಡಿದರಂತೆ. ಹಾಗೆ ಹೊರಬಂದು ಅಭಿನಯಿಸಿದ ಚಿತ್ರಗಳು ನಿರೀಕ್ಷಿಸಿದ ಮಟ್ಟಕ್ಕೆ ಗೆಲ್ಲಲಿಲ್ಲ ಎಂಬುದು ಬೇರೆ ವಿಚಾರ. 'ಸುಮನಾ ಕಿತ್ತೂರು ನಿರ್ದೇಶನದ 'ಎದೆಗಾರಿಕೆ' ಚಿತ್ರ ತುಂಬಾ ಚೆನ್ನಾಗಿತ್ತು. ಅದರ ಬಗ್ಗೆ ಎರಡು ಮಾತಿಲ್ಲ. ಆ ಚಿತ್ರ ಎಲ್ಲ ಕಡೆ ಸುದ್ದಿ ಮಾಡುತ್ತಿದಂತೆಯೇ ಅಂಥದೇ ಕಥೆಗಳು ಹುಟ್ಟಿಕೊಂಡವು. ನಂಬಿ, 'ಎದೆಗಾರಿಕೆ' ಚಿತ್ರದ ನಂತರ ನಾನು ಕನಿಷ್ಠ 20 ಕಥೆಗಳನ್ನು ಕೇಳಿದ್ದೇನೆ. ಎಲ್ಲ ಕಥೆಗಳ ತಿರುಳೂ ಒಂದೇ. ಅಂಡರ್‌ವರ್ಲ್ಡ್, ಗನ್ನು, ಮಚ್ಚು, ಲಾಂಗ್ ಸಂಸ್ಕೃತಿ. ಒಂದೇ ಒಂದು ಕಥೆ ಕೂಡ ನನಗೆ ಭಿನ್ನವಾಗಿ ಕಾಣಿಸಲಿಲ್ಲ. ಯಾಕೆ, ಒಬ್ಬ ಹೀರೋ ಯಾವುದಾದರೂ ಒಂದು ಚಿತ್ರದಲ್ಲಿ ಗೆದ್ದರೆ ಅಂಥದ್ದೇ ಚಿತ್ರಕಥೆಗಳನ್ನು ಮಾಡಿಕೊಂಡು ಬರುತ್ತೀರಾ? ಭೂಗತ ಲೋಕ, ಮಾಫಿಯಾ ಅಡ್ಡೆಗಳು ಬಿಟ್ಟರೆ ನಮ್ಮಲ್ಲಿ ಹೊಸ ರೀತಿಯ ಕಥೆಗಳೇ ಇಲ್ಲವೇ? ನಾನು ಮಚ್ಚು ಬಿಡಕ್ಕೆ ರೆಡಿಯಾಗಿದ್ದರೂ ಮತ್ತೆ ಮತ್ತೆ ನನ್ನ ಕೈಗೆ ಮಚ್ಚು ಕೊಡುತ್ತಿದ್ದಾರೆ. ತೆರೆ ಮೇಲೆ ಲಾಂಗ್ ಹಿಡಿದು ಓಡೋದು ಬಿಟ್ಟು ನನಗೆ ಬೇರೆ ಏನೂ ಗೊತ್ತಲ್ಲವೇ? ಎನ್ನುವ ಅನುಮಾನ ಕಾಡುತ್ತಿದೆ' ಎನ್ನುತ್ತಾರೆ ಆದಿತ್ಯ.
ಅಂಡರ್‌ವರ್ಲ್ಡ್ ಕಥೆಗೆ ಹೊರತಾಗಿ ತಾನು ಮತ್ತೊಂದು ಚಿತ್ರಗಳಿಗೆ ಅನರ್ಹನೇ? ಎಂದುಕೊಳ್ಳುತ್ತಿರುವಾಗ 'ಸ್ವೀಟಿ' ಚಿತ್ರ ಸಿಕ್ಕಿದ್ದು, ಈ ಚಿತ್ರದಲ್ಲಿ ಹುಡುಗಿಯರೂ ಇಷ್ಟಪಡುವಂಥ ಸ್ಮಾರ್ಟ್ ಬಾಯ್ ಪಾತ್ರ ಮಾಡಿರುವುದಾಗಿ, ಪಕ್ಕಾ ಫ್ಯಾಮಿಲಿ ಲುಕ್ ಇದೆ, ಮಚ್ಚು ಬಿಟ್ಟು ಗುಲಾಬಿ ಹೂವು ಹಿಡಿದುಕೊಂಡಿರುವುದಾಗಿ ಆದಿತ್ಯ ಹೇಳಿಕೊಳ್ಳುತ್ತಾರೆ. ಇದು ಕೇವಲ ಆದಿತ್ಯರ ಕಥೆಯಲ್ಲ. ನಟ ದರ್ಶನ್‌ರದ್ದೂ ಇದೇ ಸ್ಥಿತಿ. 'ಹೌದು, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರ ಹಿಟ್ ಆದ ಮೇಲೆ ಬಹಳಷ್ಟು ನಿರ್ದೇಶಕರು, ನಿರ್ಮಾಪಕರು ಅಂಥದೇ ಕಥೆಗಳನ್ನು ಮಾಡಿಕೊಂಡು ಬಂದರು. ಆದರೆ ಯಾವುದನ್ನೂ ನಾನು ಒಪ್ಪಿಕೊಳ್ಳಲಿಲ್ಲ. ನಾವು ಯಾಕೆ ಒಂದಕ್ಕೆ ಬ್ರಾಂಡ್ ಆಗಬೇಕು? ಹೊಸತನ ಇರಲಿ, ಹೊಸ ಕಥೆಗಳು ಬರಲಿ. ಹೀಗಾಗಿ ಇನ್ನು ಮುಂದೆ ಯಾವುದೇ ಐತಿಹಾಸಿಕ ಚಿತ್ರ ಬಂದರೂ ನಾನು ಒಪ್ಪಿಕೊಳ್ಳುವುದಿಲ್ಲ. ಮುಂದೆ ನೋಡೋಣ. ಸದ್ಯಕಂತೂ ಚರಿತ್ರೆ ಕಡೆ ಮುಖ ಮಾಡಲ್ಲ' ಎನ್ನುತ್ತಾರೆ ದರ್ಶನ್. ಮಾಸ್ ಪ್ರೇಕ್ಷಕರಿಗೆ, ನಿರ್ದೇಶಕರಿಗೆ ಮಹಾರಾಜ ಎನಿಸಿಕೊಂಡಿರುವ ಶಿವರಾಜ್‌ಕುಮರ್ ಎಂದಾಕ್ಷಣ ಮಾದೇಶ, ಜೋಗಿ, ಕಡ್ಡಿಪುಡಿಯ ಫೀಲ್ ಬರುತ್ತದೆ. ಆದರೆ, ಮಚ್ಚು ಬಿಡುತ್ತೇನೆ. ಕಾಮಿಡಿ ಸಿನಿಮಾಗಳನ್ನು ಮಾಡುತ್ತೇನೆ ಎಂದು ಸ್ವತಃ ನಟ ಶಿವರಾಜ್‌ಕುಮಾರ್ ಅವರೇ ಘೋಷಿಸಿದರು. ಮುಂದೆ ಅವರ ಅಭಿನಯದಲ್ಲಿ ಹಾಸ್ಯ ಚಿತ್ರಗಳು ಬರುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಮಚ್ಚು, ಲಾಂಗು ಬಿಡಲ್ಲ ಎಂಬುದು ಸದ್ಯ ಅವರ ಕೈಯಲ್ಲಿರುವ ಚಿತ್ರಗಳೇ ಹೇಳುತ್ತವೆ.
ತೆಲುಗಿನ 'ಈಗ' ಚಿತ್ರದ ನಂತರ ನಟ ಸುದೀಪ್‌ಗೆ ಪರಭಾಷೆಯಲ್ಲಿ ಅದೇ ರೀತಿಯ ಕಿಚ್ಚು ಹತ್ತಿಸುವ ಖಳನಾಯಕ ಪಾತ್ರಗಳು ಎದ್ದು ಬಂದು ಎದುರಿಗೆ ನಿಂತುಕೊಂಡಿದ್ದನ್ನು ಸುದೀಪ್ ಅವರೇ ಹೇಳಿಕೊಳ್ಳುತ್ತಾರೆ. ಇನ್ನು ನಟಿ ಶ್ವೇತಾ ಶ್ರೀವತ್ಸಗೆ 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಚಿತ್ರದ ನಂತರ ಅದೇ ಬಾಯಿಬಡುಕಿ ಹತ್ತಾರು ಪಾತ್ರಗಳು ಬಂದವು. ಎಲ್ಲವನ್ನೂ ಒಪ್ಪಿಕೊಂಡಿದ್ದರೆ ನಾನು ಹತ್ತಾರು ಚಿತ್ರಗಳ ನಾಯಕಿಯಾಗುತ್ತಿದ್ದೆ ಎನ್ನುತ್ತಾರೆ ಅವರು. ಹಾಗಂತ ಶ್ವೇತಾ ಹೇಳಿಕೊಳ್ಳುವ ಮಟ್ಟಕ್ಕೆ ಅಷ್ಟು ಚಿತ್ರಗಳು ಆಕೆಯನ್ನು ಹುಡುಕಿಕೊಂಡು ಹೋಗಿರುವುದರ ಬಗ್ಗೆ ಅನುಮಾನ ಇರಬಹುದು. ಆದರೆ, ಒಂದೆರಡು ಚಿತ್ರಗಳಂತೂ 'ಸಿಂಪಲ್...' ಚಿತ್ರದ ಪಾತ್ರಗಳೇ ಆಗಿರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. 'ಮದರಂಗಿ' ಚಿತ್ರದ ನಾಯಕ ಸುನೀಲ್ ನಾಗಪ್ಪನದ್ದು ಇದೇ ಕಥೆಯಂತೆ. ಸುನೀಲ್ ನಾಗಪ್ಪ 'ಮದರಂಗಿ' ಚಿತ್ರದ ನಂತರ ಹೆಚ್ಚೂಕಮ್ಮಿ ಒಂದೇ ರೀತಿಯ 40 ಕಥೆಗಳನ್ನು ಕೇಳಿದ್ದಾರಂತೆ. ಹೀಗೆ 'ಡಡ್ಟ್ಠಿಣ'ಗಳನ್ನು ಕೇಳುವ ನಾಯಕನಟರ ಕಥೆ ಇದಾದರೆ, ನಿರ್ದೇಶಕರದ್ದೂ ಹೊಸ ಕಥೆ ಮತ್ತು ಅರೋಪ ಇದೆ. 'ನಮ್ಮಲ್ಲಿ ಹೊಸ ಕಥೆಗಳು ಇಲ್ಲ ಅಂತಲ್ಲ. ಹೊಸಬರ ಬಳಿ ಕಥೆ ಕೇಳುವ ಪುರುಸೋತ್ತು ಯಾವ ಸ್ಟಾರ್ ನಟರಿಗೆ ಇದೆ ಹೇಳಿ? ಏನಾದರೂ ಹೊಸತನ ಕೊಡೋಣ ಎಂದುಕೊಂಡು ಹೊರಟರೆ ಕೆಲ ಹೀರೋಗಳ ಹತ್ತಿರಕ್ಕೂ ನಮಗೆ ಸುಳಿಯಕ್ಕಾಗಲ್ಲ. ಒಂದಿಷ್ಟು ಹಳೇ ಯೋಚನೆಯ ನಿರ್ದೇಶಕರು, ಅವರ ಕಥೆಗಳು ಮತ್ತು ಅದೇ ಇಮೇಜ್ ಮುಖವಾಡದ ನಾಯಕರಿಗೆ ಮಾತ್ರ ಇಲ್ಲಿ ಬೆಲೆ. ನಮಗೆ ಇಲ್ಲ. ಇನ್ನು ನಿರ್ಮಾಪಕರೂ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗಲ್ಲ. ಹೀಗಾಗಿ 15 ಪರಭಾಷೆಯ ಸಿನಿಮಾಗಳನ್ನು ನೋಡಿ ಒಂದು ಕನ್ನಡ ಸಿನಿಮಾ ಮಾಡುವ ನಿರ್ದೇಶಕರು, ಅಯ್ಯೋ ಹೊಸತನ ಯಾಕೆ ಬೇಕು? ಆತನಿಗೆ ಮಚ್ಚು ಅಥವಾ ಗನ್ನು ಕೊಟ್ಟರೆ ಸಾಕು ಬಿಡಿ ಎಂದು ಹೊಸದನ್ನು ಬದಿಗಿಟ್ಟು ಹಳೇ ದಾರಿಗೆ ಹೋಗುತ್ತೇವೆ' ಎನ್ನುವ ನಿರ್ದೇಶಕರು ನಮ್ಮಲ್ಲಿ ಹಲವರು.
ಹೀಗಾಗಿ 'ಹೇಳಿದ್ದೇ ಹೇಳ್ತಾನೆ ಕಿಸ್‌ಬಾಯ್ ದಾಸ' ಎಂದು ನಿರ್ದೇಶಕರ ಕಡೆ ನಾಯಕರು ಬೆರಳು ತೋರಿಸಿದರೆ, 'ಕೇಳಿದ್ದೇ ಕೇಳ್ತಾನೆ ಈತ' ಎಂದು ನಿರ್ದೇಶಕರು ನಾಯಕನಟರನ್ನು ಮೂದಲಿಸುತ್ತಾರೆ. ಇಲ್ಲಿ ಯಾರದ್ದು ತಪ್ಪು? ಯಾರದ್ದು ಸರಿ? ಎನ್ನುವುದಕ್ಕಿಂತ 'ನಮ್ಮಲ್ಲಿ ಹೊಸ ಕಥೆಗಳೇ ಇಲ್ಲವೇ?' ಎನ್ನುವ ಪ್ರಶ್ನೆಗಂತೂ ಉತ್ತರ ಇದೆ. ಆದರೆ, ಆ ಹೊಸತನಕ್ಕೆ ಬೆಲೆ ಕೊಡುವ ನಿರ್ಮಾಪಕರು, ಅದನ್ನು ಒಪ್ಪಿಕೊಳ್ಳುವ ನಾಯಕನಟರು ಹಾಗೂ ಕಲಾವಿದರ ಅಗತ್ಯವಿದೆ. ಬಹುಶಃ ಆಗ 'ನಮ್ಮಲ್ಲಿ ಹೊಸ ಕಥೆಗಳು ಇಲ್ಲವೇ?' ಎನ್ನುವ ಪ್ರಶ್ನೆ ಉದ್ಭವಿಸದು.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ