ಅದು ಟು ಇನ್ ಒನ್ ಕಾರ್ಯಕ್ರಮದಂತೆ. ಮೊದಲನೆಯದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಮತ್ತು ಅವರನ್ನು ಹೊಗಳುವ ರಾಜಕೀಯ ಭಾಷಣಗಳು, ಎರಡನೆಯದು ಎಂ.ಎಸ್. ರಮೇಶ್ ನಿರ್ದೇಶನದ, 'ಜೋಗಿ' ಪ್ರೇಮ್ ಅಭಿನಯದ 'ದಾಸ್ವಾಳ' ಚಿತ್ರದ ಆಡಿಯೋ ಬಿಡುಗಡೆ. ಹೌದು, ಹೂವಿನ ಜೊತೆ ಹಾಡು ಎನ್ನುವಂತೆ 'ದಾಸ್ವಾಳ' ಚಿತ್ರದ ಆಡಿಯೋ ಸಿಡಿ ಹೊರಬಂದಿದೆ. ಆನಂದ್ ಆಡಿಯೋ ಹೊರತಂದಿರುವ ಈ ಸಿಡಿಯಲ್ಲಿ, ಚಿತ್ರದ ಒಟ್ಟು ಆರು ಹಾಡುಗಳಿವೆ.
ಅಂದಹಾಗೆ ಈ ಚಿತ್ರಕ್ಕೆ ಅಣಜಿ ನಾಗರಾಜ್ ನಿರ್ಮಾಪರಾಗಿದ್ದರು. ಅದು ಮೊನ್ನೆ ತನಕ. ಈಗ ಆಡಿಯೋ ಸಿಡಿಗೆ ಎನ್. ಮೋಹನ್ ಕುಮಾರ್ ನಿರ್ಮಾಪಕರಾಗಿದ್ದಾರೆ. ಇದೊಂದು ರೀತಿಯಲ್ಲಿ ಅಣಜಿ ನಾಗರಾಜ್‌ರ ಸಿನಿಮಾ ಕಾರ್ಖಾನೆಯ ಕಮಾಲ್. ಹಾಗಾದರೆ ಚಿತ್ರ ಬಿಡುಗಡೆಗೂ ಮುನ್ನವೇ ಅಣಜಿ ಚಿತ್ರವನ್ನು ಮಾರಿಕೊಂಡಿದ್ದಾರೆಯೇ?
ಚಿತ್ರದ ಆಡಿಯೋ ಬಿಡುಗಡೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂದಿದ್ದು ವಿಶೇಷವಾಗಿತ್ತು. ಆರೋಗ್ಯದ ಸಮಸ್ಯೆಯ ನಡುವೆಯೂ ನಟ ಪುನೀತ್ ಕೂಡ ಆಗಮಿಸಿದ್ದರು. ಕನ್ನಡಕ ಹಾಕ್ಕೊಂಡು ಪಕ್ಕಾ ವಿದ್ಯಾರ್ಥಿಯಂತೆ ಇದ್ದ ಪುನೀತ್, ಚಿತ್ರತಂಡಕ್ಕೆ ಶುಭ ಕೋರಿದರು. 'ಮನರಂಜನೆ ಮತ್ತು ಸಾಮಾಜಿಕ ಸಂದೇಶ ಈ ಎರಡೂ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ಮೂಡಿಬಂದಿರುವ 'ದಾಸ್ವಾಳ' ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಮೆಚ್ಚುಗೆಯಾಗಲಿದೆ. ಪ್ರೇಮ್ ಅಭಿನಯ, ರಂಗಾಯಣ ರಘು ಮ್ಯಾನರಿಸಂ ಬಗ್ಗೆ ಎರಡು ಮಾತಿಲ್ಲ. ನನ್ನ ಕಥೆಗೆ ಪೂರಕವಾಗಿ ಪ್ರತಿಯೊಬ್ಬ ಕಲಾವಿದರೂ ಇಲ್ಲಿ ಚೆನ್ನಾಗಿ ನಟಿಸಿದ್ದಾರೆ. ಒಂದು ಒಳ್ಳೆಯ ಚಿತ್ರಕ್ಕೆ ಏನು ಬೇಕೋ ಅದನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದು' ಎಂದರು ನಿರ್ದೇಶಕ ಎಂ.ಎಸ್. ರಮೇಶ್. ಚಿತ್ರತಂಡಕ್ಕೆ ಶುಭ ಕೋರಲು ನಟಿ ರಕ್ಷಿತಾ ಕೂಡ ಆಗಮಿಸಿದ್ದರು. 'ಚಿತ್ರ ಯಶಸ್ವಿಯಾಗಲಿ' ಎಂದಷ್ಟೇ ಹೇಳಿ ರಕ್ಷಿತಾ ಸುಮ್ಮನಾದರು.
ಚಿತ್ರದ ನಾಯಕಿ ಐಶ್ವರ್ಯಾ. ಇಷ್ಟುದಿನ ಕ್ಯಾಟ್‌ವಾಕ್ ಮಾಡಿಕೊಂಡಿದ್ದ ಹುಡುಗಿ. 'ರಮೇಶ್ ಸಾರ್ ಚಿತ್ರಗಳಲ್ಲಿ ಅಭಿನಯಿಸುವುದೇ ದೊಡ್ಡ ವಿಷಯ. ಪ್ರೇಮ್ ಅಭಿನಯದ ಬಗ್ಗೆ ಕುರಿತು ಮಾತನಾಡುವುದು ಬೇಕಿಲ್ಲ. ಅವರು ಯಾವಾಗಲೂ ಸೂಪರ್. ಈ ಚಿತ್ರದಿಂದ ಕನ್ನಡದಲ್ಲಿ ನನಗೆ ಒಳ್ಳೆಯ ಅವಕಾಶಗಳು ಸಿಗಲಿವೆ' ಎಂಬುದು ಐಶ್ವರ್ಯಾ ಮಾತು. 'ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಪ್ರಯತ್ನ ಮಾಡಿದ್ದೇವೆ. ಪುನೀತ್ ಸಾರ್ ಬನ್ನಿ ಅಂದಕೂಡಲೇ ಬಂದಿದ್ದಾರೆ. ಯಡಿಯೂರಪ್ಪಾಜಿ ಈ ಹಿಂದೆ ನನ್ನ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದರು. ಅದು ಸೂಪರ್ ಹಿಟ್ಟಾಯಿತು. ಸಿಕ್ಕಾಪಟ್ಟೆ ಕಾಸು ಬಂತು. ಈಗ ಮತ್ತೆ ಅವರೇ ಸಿಡಿ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಆಡಿಯೋ ಕೂಡ ಹಿಟ್ ಆಗಲಿದೆ' ಎಂದರು ಪ್ರೇಮ್.
'ಸಿನಿಮಾದವರ ಬಗ್ಗೆ ನನಗೆ ವಿಶೇಷವಾದ ಪ್ರೀತಿ. ಸಿನಿಮಾ ಮಾಡುವುದು ಸುಲಭವಲ್ಲ. ಪ್ರೇಮ್ ಅಭಿನಯದ ಈ ಚಿತ್ರಕ್ಕೆ ಗೆಲುವು ಸಿಗಲಿ' ಎಂದು ಯಡಿಯೂರಪ್ಪ ಶುಭ ಕೋರಿದರು. ನಟ ಪುನೀತ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್, ಹಿರಿಯ ನಟಿ ಹೇಮಾ ಚೌಧರಿ, ಗುರುಕಿರಣ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಡಿಯೋ ಬಿಡುಗಡೆ ಸಮಾರಂಭ ಜನ ಜಾತ್ರೆಯಂತೆ ಕಂಡಿತು. ಇದೇ ರೀತಿ ಚಿತ್ರ ಬಿಡುಗಡೆಯಾದ ಮೇಲೆ ಸಿನಿಮಾ ನೋಡಲು ಜನ ಬರಬಹುದೇ?
- ಕೇಶು