ವಯಸ್ಸು ಅರವತ್ತೈದು ದಾಟಿರಬಹುದು. ಆದರೆ ಮನಸ್ಸು ಮಾತ್ರ ಹದಿನಾರರ ಮೆಟ್ಟಿಲನ್ನೇರಿಲ್ಲ! ಅದೇ ವಯ್ಯಾರ, ನಾಚಿಕೆ, ಸೆಳೆಯುವ ಕಣ್ಣೋಟ, ತುಂಟ ನಗೆ. 'ಮೆಲ್ಲುಸಿರೆ ಸವಿಗಾನ...' ಎನ್ನುತ್ತ ಆಕೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿದ್ದವರಿಂದ ಚಪ್ಪಾಳೆಗಳ ಸುರಿಮಳೆ. 'ವ್ಹಾ...! ಏನ್ ಸ್ಟೆಪ್ಸು' ಎಂದು ಹಿರಿಯ ನಟನೊಬ್ಬರು ಉದ್ಗರಿಸಿದರೆ, ನಿರ್ದೇಶಕ ಭಾರ್ಗವರಂತೂ ಪಕ್ಕದಲ್ಲಿ ಪತ್ನಿ ಇದ್ದಾರೆನ್ನುವುದನ್ನೂ ಮರೆತು ಕೂತಲ್ಲೇ ಕುಣಿಯತೊಡಗಿದರು. ಹತ್ತು ನಿಮಿಷಗಳ ಅವರ ಹೆಜ್ಜೆಯ ಸದ್ದಿಗೆ ಫಿದಾ ಆಗದವರೇ ಇಲ್ಲ ಎನ್ನಿ. ಅರವತ್ತರ ಆ ನಟಿ ಹದಿನಾರರ ಬಾಲೆಯಂತೆ ಆ ದಿನಗಳಿಗೆ ಜಾರಿದ್ದು ಬೇರ್ಯಾರೂ ಅಲ್ಲ, ಹಿರಿಯ ನಟಿ ಲೀಲಾವತಿ. ರಾಣಿಯಂತೆ ಮೆಲ್ಲಗೆ ಹೆಜ್ಜೆ ಹಾಕುತ್ತ ಬರುತ್ತಿದ್ದಂತೆ ಹಿನ್ನೆಲೆಯಲ್ಲಿ 'ಮೆಲ್ಲುಸಿರೆ ಸವಿಗಾನ...' ಎನ್ನುವ ಹಾಡು ಧ್ವನಿಸಿತು. 'ಹಾಡು ಹಳೆಯದಾದರೇನು ಭಾವ ನವನವೀನ' ಎನ್ನುವಂತೆ ಹಳೇ ಹಾಡಿಗೆ ಹೊಸ ಮೂಡಿನಲ್ಲಿ ಹೀಗೆ ಲೀಲಾವತಿ ಹೆಜ್ಜೆ ಹಾಕಿದ್ದು ಚೆನ್ನೈನಲ್ಲಿ.
ಲೀಲಾವತಿಯ ಸ್ಟೆಪ್ಸ್‌ನಲ್ಲೇ ಮುಳಗಿದ್ದವರಿಗೆ ಮತ್ತೆ ಅಚ್ಚರಿ ಮೂಡಿಸಿದ್ದು ಮತ್ತೊಬ್ಬ ನಟಿ ಜಯಂತಿ. 'ವಿರಹ ನೂರು ನೂರು ತರಹ...' ಎನ್ನುತ್ತ ವೇದಿಕೆ ಏರಿದ ಜಯಂತಿಯ ಮೂಮೆಂಟ್‌ನಲ್ಲಿ ವಯಸ್ಸಿನ ಬಣ್ಣ ಕಾಣಲಿಲ್ಲ. ಹಾಡು ಮುಗಿಯುತ್ತಿದ್ದಂತೆ ದಿ. ಪುಟ್ಟಣ್ಣ ಕಣಗಾಲ್‌ರ ಮಿಮಿಕ್ರಿ ಧ್ವನಿ. 'ಏನಮ್ಮ ಜಯಂತಿ, ಸಿನಿಮಾ ಬಿಡುಗಡೆಯಾಗಿ 38 ವರ್ಷ ಆಯಿತು. ಇನ್ನೂ ನಿನ್ನ ವಿರಹ ತೀರಿಲ್ಲವೇನಮ್ಮ?', 'ಪುಟ್ಟಣ್ಣ... ನೀವಾ! ಹೇಗೆ ತೀರುತ್ತದೆ ಪುಟ್ಟಣ್ಣ? ನೀವು ಹಚ್ಚಿದ ಕಿಚ್ಚಲ್ಲವೇ ಇದು?', 'ಅಯ್ಯೋ ಈಗ ಕಾಲ ಬದಲಾಗಿದೆ. ರಮ್ಯಾ, ರಾಧಿಕಾ, ರಾಗಿಣಿ ಅವರದ್ದು', '(ಸಿಟ್ಟಿನಿಂದ) ಪುಟ್ಟಣ್ಣ... ನಿಮ್ಮ ಬಾಯಲ್ಲಿ ಇಂಥ ಮಾತೇ? ಎಂದಾದರೂ ನಿಮ್ಮನ್ನ ನಾನು ಗುರುಗಳೇ ಅಂದಿದ್ದುಂಟೆ? ಕಾಲ ಬದಲಾದರೆ ಏನಂತೆ? ಕಬ್ಬಿಣ ಕಬ್ಬಿಣವೇ, ಚಿನ್ನ ಚಿನ್ನವೇ'. ಈ ಸಂಭಾಷಣೆ ಮುಗಿಯುತ್ತಿದ್ದಂತೆ ಮತ್ತೆ ಕೇಳಿಸಿತು, 'ವಿರಹ ನೂರು ನೂರು ತರಹ'. ಹೀಗೆ ಭಾರತೀಯ ಚಿತ್ರರಂಗದ ನೂರರ ಸಂಭ್ರಮದ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಕಾರ್ಯಕ್ರಮಕ್ಕೆ ಆರಂಭದಲ್ಲೇ ಹಳೇ ಜಾಡಿನಲ್ಲಿ ಹೊಸ ಮೂಡು ಕೊಟ್ಟ ಹಿರಿಯ ನಟಿಯರಾದ ಲೀಲಾವತಿ ಮತ್ತು ಜಯಂತಿ ಸಭಿಕರ ಮನಸ್ಸು ಹೈಜಾಕ್ ಮಾಡಿದರು. ನಂತರ ಬಂದ ಹೊಸ ತಲೆಮಾರಿನ ನಟ, ನಟಿಯರ ಹಾಡು, ಕುಣಿತ ಈ ಇಬ್ಬರ ಮುಂದೆ ವಾಕಿಂಗ್‌ನಂತೆ ಖಂಡಿತು.
ಒಂದಿಷ್ಟು ರೋಮಾಂಚನದ ಕ್ಷಣಗಳು, ಸಂಭ್ರಮದ ಗಳಿಗೆಗಳು, ಸಾಧಕರನ್ನು ಅಲಂಕರಿಸಿದ ಸನ್ಮಾನದ ಗೌರವ, ಅಗಲಿದವರ ನೆನಪು, ಕನ್ನಡ ಚಿತ್ರರಂಗ ಸಾಗಿಬಂದ ಹಾದಿಯ ಚಿತ್ರಣ, ಹಾಡು, ಕುಣಿತ, ವ್ಯವಸ್ಥೆ- ಅವ್ಯವಸ್ಥೆ, ಬಾರದ ಪ್ರೇಕ್ಷಕರು, ಸಭಾಂಗಣ ಬಿಕೋ, ಕೆಲವರಿಗೆ ರತ್ನಗಂಬಳಿ, ಉಳಿದವರ ನಿರ್ಲಕ್ಷ್ಯ, 'ಕರೆಯಲಿಲ್ಲ' ಎಂಬ ಅರೋಪ, 'ಕರೆದರೂ ಬರಲಿಲ್ಲ' ಎನ್ನುವ ಪ್ರತ್ಯಾರೋಪ, ಸ್ಟಾರ್ ನಟರು ಎನಿಸಿಕೊಂಡವರ ಬೇಜವಾಬ್ದಾರಿತನ, ನಿರ್ದಿಷ್ಟ ಯೋಜನೆ ಇಲ್ಲದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜಕೀಯ ಪಕ್ಷದ ಗಾಳಕ್ಕೆ ಬಲಿಯಾದ ನೂರರ ಸಿನಿಮಾ ಸಂಭ್ರಮ... ಸಿನಿಮಾ ಸುಗ್ಗಿ ಮುಗಿದ ಮೇಲೆ ಎಲ್ಲವೂ ಒಂದೊಂದಾಗಿ ನೆನಪಾಗುತ್ತಿವೆ. ನಾಲ್ಕು ರಾಜ್ಯಗಳ ಚಿತ್ರೋದ್ಯಮ ಒಂದು ಕಡೆ ಸೇರಿದಾಗ ಯಾವ ರೀತಿಯ ಸಂಭ್ರಮ ಮತ್ತು ರೋಮಾಂಚನ ಇರಬೇಕಿತ್ತೋ ಅದು ಇರಲಿಲ್ಲ. ಸಂಭ್ರಮದ ವೇದಿಕೆಯನ್ನು ಸೀದಾ ತೆಗೆದುಕೊಂಡು ಹೋಗಿ ರಾಜಕೀಯ ಪಕ್ಷಕ್ಕೆ ಅಡ ಇಟ್ಟ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿ ಲ್ಲಿಸಬೇಕು. ಅದೇ ಸಂದರ್ಭದಲ್ಲಿ ಅರೆಬರೆ ಸಿದ್ಧತೆ ಮಾಡಿಕೊಂಡು ಅವರು ಹೇಳಿದಂತೆ ಕೇಳಿಕೊಂಡು ಅವರ ಮನೆಯಲ್ಲಿ ಒಂದಿಷ್ಟು ಅವಮಾನ ಮಾಡಿಸಿಕೊಂಡು ಬಂದ ನಮ್ಮ ಚಿತ್ರರಂಗವನ್ನೂ ಪ್ರಶ್ನಿಸಿಬೇಕಿದೆ. ಇದರ ನಡುವೆ ಹೇಗೋ, ನೂರರ ಸಂಭ್ರಮವಾದರೂ ನಡೆಯಿತಲ್ಲ ಎನ್ನುವ ಸಂತೋಷ ಮತ್ತು ಸಮಾಧಾನ.
ಡ್ಯಾನ್ಸ್ ರಾಜ ಡ್ಯಾನ್ಸ್...
'ತೆರೆದಿದೆ ಮನೆ ಓ ಬಾ ಅತಿಥಿ' ಎನ್ನುತ್ತಾ ಬಂದ ನಟಿ ಮೈತ್ರೇಯಾ ಸಪ್ಪೆ ಎನಿಸಿಬಿಟ್ಟರು. 'ಗಣನಾಯಕ...' ಎಂದ ವಿಜಯ್ ರಾಘವೇಂದ್ರ ವೇದಿಕೆಗೆ ಚಳಿ ಬಿಡಿಸಿದರು. ನಟ ಅನಿರುದ್ಧ್ ಹಾಗೂ ರೂಪಿಕಾ ಜೋಡಿ 'ಜೈ ಭಾರತ ಜನನಿಯ ತನುಜಾತೆ' ಎಂದಾಗ ಪ್ರೇಕ್ಷಕ ವೃಂದ ಎದ್ದೇಳಿತು. 'ಬೇಡರ ಕಣ್ಣಪ್ಪ'ನಾಗಿ ಬಂದ ಮುರಳಿ 'ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ' ಎಂದಿದ್ದು ಹೈಲೈಟ್. ಪಾತ್ರಗಳಲ್ಲಿ ಅಳು ಮುಂಜಿಯಾಗಿ ಪ್ರೇಕ್ಷಕರ ಮನಸ್ಸು ಕದ್ದ ನಟಿ ಶೃತಿ 'ಅರೇ ಅರೇ ಗಿಳಿರಾಮ' ಎನ್ನುತ್ತ ಯಾವುದೇ ಸೆಂಟಿಮೆಂಟ್ ಇಲ್ಲದೆ ದೇಹಕ್ಕೆ ಕೆಲಸ ಕೊಟ್ಟರು. 'ಬಾನಲ್ಲೂ ನೀನೆ ಭುವಿಯಲ್ಲೂ ನೀನೆ' ಎನ್ನುತ್ತ ನೀಲಿ ಸೀರೆಯಲ್ಲಿ ಮಿಂಚಿದ್ದು ತಾರಾ. ಅನಿರೀಕ್ಷಿತವಾಗಿ ಎಂಟ್ರಿಕೊಟ್ಟು 'ಬಾಳ ಬಂಗಾರ ನೀನು, ಮನೆಯ ಸಿಂಗಾರ ನೀನು' ಎನ್ನುತ್ತ 'ಥೈ ಥೈ ಬಂಗಾರಿ' ಎಂದು ಕುಣಿದಿದ್ದು ಭಾರತಿ ವಿಷ್ಣುವರ್ಧನ್.ಬಾಂಡ್ ಕ್ಯಾರೆಕ್ಟರ್‌ನಂತೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಬಂದ ವಿನೋದ್ ರಾಜ್ 'ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್' ಎನ್ನುತ್ತ ತಾನು ಯಾರಿಗೂ ಕಮ್ಮಿ ಇಲ್ಲ ಅಂತ ಸ್ಟೆಪ್ಸ್ ಹಾಕಿದರು. 'ಉಲ್ಲಾಸದ ಹೂ ಮಳೆ' ಎಂದು ಒಂಟಿಯಾಗಿಯೇ ಕುಣಿದಿದ್ದು ಅಮೂಲ್ಯ. 'ಟುವ್ವಿ ಟುವ್ವಿ' ಅಂತ ಮತ್ತೆ ಮತ್ತೆ ಬಂದಿದ್ದು ಎಸ್. ನಾರಾಯಣ್ ಪುತ್ರ ಪಂಕಜ್. ಯೋಗೀಶ್ ಮತ್ತೆ 'ಜಿಂಕೆ ಮರಿನಾ ನೀ ಜಿಂಕೆ ಮರಿನಾ' ಎಂದು ಟೈಟ್ ಆಗಿಯೇ ಕುಣಿದರು. ಮುರಳಿ 'ಪ್ರೇಮಲೋಕ' ಪರಿಚಯಿಸಿದರೆ, ರಮೇಶ್ ಅರವಿಂದ್ ಹಾಗೂ ರೂಪಿಕಾ 'ಬಾರೆ ಸಂತೆಗೆ ಹೋಗೋಣ' ಎಂದರು. ಸೌಂದರ್ಯ ಜಯಮಾಲ 'ಪ್ಯಾರ್ಗೆ ಆಗ್ಬಿಟೈತೆ' ಎಂದು ಸಭಿಕರತ್ತ ಕಳ್ಳನೋಟ ಬೀರಿದರು. ರಾಜೇಶ್ ಕೃಷ್ಣರ ಗಾಯನದ ಝಲಕ್, 'ಬಾಜಿ ಕಟ್ಟು ನೋಡ ಬಾರ' ಎಂದು ಅನುಪ್ರಭಾಕರ್ ಮೈ ಬೆವರು ಇಳಿಸಿದರೆ, 'ನಾನು ಪಡುವಾರಳ್ಳಿ ಪಾಂಚಾಲಿ' ಎನ್ನುತ್ತ ಸೊಂಟ ಬಳುಕಿಸಿದ್ದು ಸಂಜನಾ. 'ಊರಿಗೊಬ್ಳೆ ಪದ್ಮಾವತಿ' ಎಂದ ಪ್ರಜ್ಞಾ, ಪ್ರಜ್ಞೆ ತಪ್ಪಿ ಬೀಳುವಂಥ ಡ್ಯಾನ್ಸ್ ಮಾಡಲಿಲ್ಲ ಬಿಡಿ. 'ಕಲ್ಲಾದರೆ ನಾನು ಬೇಳೂರು ಗುಡಿಯಲಿರುವೆ' ಎಂದಿದ್ದು ಶಶಿಕುಮಾರ್. ಹಾಡು, ಕುಣಿತದ ನಡುವೆ ಪ್ರೇಕ್ಷಕರನ್ನು ಮತ್ತೆ ಮತ್ತೆ ಅಟೆನ್ಷನ್‌ನಲ್ಲೇ ಇಟ್ಟಿದ್ದು ಅರುಣ್‌ಸಾಗರ್ ತಂಡ.
ನಾರಾಯಣ ಕೃಪೆ...
ಸಾಮಾನ್ಯವಾಗಿ ಸಿನಿಮಾ ಸಮಾರಂಭವೆಂದರೆ, ಅಲ್ಲಿ ಭಾಷಣಕ್ಕಿಂತ ಹೆಚ್ಚು ಮಹತ್ವ ಪಡೆದುಕೊಳ್ಳುವುದು ಮನರಂಜನಾ ಕಾರ್ಯಕ್ರಮಗಳು. ಮೆಚ್ಚಿನ ನಟ, ನಟಿಯರು ಯಾವ ಹಾಡುಗಳಿಗೆ ಕುಣಿಯುತ್ತಾರೆ ಎನ್ನುವುದೇ ಕುತೂಹಲವಾಗಿರುತ್ತದೆ. ಅಂಥದ್ದರಲ್ಲಿ ನಾಲ್ಕು ರಾಜ್ಯಗಳ ಸಿನಿಮಾ ಸಂಭ್ರಮವೆಂದರೆ ಅಲ್ಲಿನ ಮನರಂಜನೆಯ ಝಲಕ್ ಊಹಿಸುವುದು ಕಷ್ಟ. ಅಷ್ಟರಮಟ್ಟಿಗೆ ತಯಾರಿ ನಡೆಸಿಕೊಂಡಿರಬೇಕು. ಆದರೆ, ಮಾತೆತ್ತಿದರೆ 'ನಾನು ಚಿತ್ರರಂಗ ಬಿಡುತ್ತೇನೆ. ಈಗಿನ ಸಿನಿಮಾ ವ್ಯವಸ್ಥೆ ಸರಿ ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳಬೇಕು, ನಿವೃತ್ತಿಯಾಗುತ್ತೇನೆ' ಎಂದು ಡಂಗುರ ಬಾರಿಸುವ ನಾರಾಯಣ್ ಕೈಗೆ ಮನರಂಜನೆ ವಿಭಾಗ ಕೊಟ್ಟಾಗಲೇ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಪೂರ್ವ ತಯಾರಿಯಲ್ಲೇ ನಾರಾಯಣರ ಅದೇಶಗಳಿಗೆ ಹೆದರಿ ಕೆಲವರು ದೂರ ಸರಿದರೆ, ಇನ್ನು ಕೆಲವರನ್ನು ಕರೆಯದೇ ನಾಣಿ ಪ್ರಭುಗಳು ತಮಗೆ ಬೇಕಿದ್ದವರಿಗೆ ಚೆನ್ನೈನಲ್ಲಿ ಕುಣಿಯಲು ಅವಕಾಶ ಕೊಟ್ಟಿದ್ದರು. 'ಸಾರ್ ಇತ್ತೀಚೆಗೆ ನಾನು ಹಿಂದಿ ಆಲ್ಬಂನಲ್ಲಿ ಮಾಡಿದ ಡ್ಯಾನ್ಸ್ ನೋಡಿಯೇ ಎರಡು ತಮಿಳು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ಕನ್ನಡದಲ್ಲಿ ಒಂದು ಚಿತ್ರ ಸಿಕ್ಕಿದೆ. ನಾನೇ ಹೋಗಿ ನಾರಾಯಣ್ ಬಳಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವ ಅವಕಾಶ ಕೇಳಿದರೆ ಕ್ಯಾರೆ ಎನ್ನಲಿಲ್ಲ ಆಯಪ್ಪಾ' ಎಂದು ನಾರಾಯಣ್ ಮೇಲೆ ದೂರು ಸಲ್ಲಿಸುವವರು ಯುವ ನಟ, ನಟಿಯರು ಇದ್ದಾರೆ.
ನಾರಾಯಣ್ ಇಲ್ಲೂ ಪುತ್ರ ಪ್ರೀತಿ ಮೆರೆದರು ಎನ್ನುವುದು ಮಾತ್ರ ಸತ್ಯ. ಇನ್ನು ಕನ್ನಡ ಚಿತ್ರರಂಗ ಸಾಗಿ ಬಂದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿಡಿಯೋದಲ್ಲಿ ನಾರಾಯಣ್ ಬೇರೆ ಭಾಷೆಯಿಂದ ರಿಮೇಕ್ ಮಾಡಿರುವ ಚಿತ್ರಗಳೇ ತಮ್ಮ ಹೆಚ್ಚುಗಾರಿಕೆ ತೋರಿಸಿದವು. 'ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಉಡಾಯಿಸಿದ ಚಿತ್ರವಿದು' ಎಂದು 'ದಂಡುಪಾಳ್ಯ'ದ ವಿಡಿಯೋ ತೋರಿಸುವ ನಾರಾಯಣರಿಗೆ 'ಆ ದಿನಗಳು', 'ಎದೆಗಾರಿಕೆ'ಯಂಥ ಸೃಜನಶೀಲ ಚಿತ್ರಗಳು, ಕಲಾತ್ಮಕ ಕಾಣಿಕೆಗಳಾಗಿ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ 'ಕೂರ್ಮಾವತಾರ', 'ಬರ', 'ಅರ್ಥ', 'ಮುನ್ನುಡಿ', 'ಬೇರು', 'ಶಾಂತಿ', 'ಬೆಟ್ಟದ ಜೀವ', 'ಪುಟ್ಟಕ್ಕನ ಹೈವೆ' ಮುಂತಾದ ಚಿತ್ರಗಳು ನಾರಾಯಣ್ ಕಣ್ಣಿಗೆ ಕಾಣದಿರುವುದು ಅವರ ಸಿನಿಮಾ ಜ್ಞಾನಕ್ಕೆ ಹಿಡಿದ ಕನ್ನಡಿ. ಈ ಚಿತ್ರಗಳ ನಿರ್ದೇಶಕರನ್ನೂ ನೆನಪಿಸಿಕೊಳ್ಳುವ ಗೋಜಿಗೆ ಹೋಗದ ನಾರಾಯಣ್‌ರಿಗೆ ಎಂ.ಎಸ್. ಸತ್ಯು, ಸುನೀಲ್ ಕುಮಾರ್ ದೇಸಾಯಿ, ಓಂ ಸಾಯಿಪ್ರಕಾಶ್‌ರಂಥ ಅಪ್ಪಟ ಸಿನಿಮಾ ಕೃಷಿಕರು ಎಲ್ಲಿ ಕಾಣಿಸುತ್ತಾರೆ?
ಇನ್ನು ಒಂದು ಸಿನಿಮಾ ಎಂದಾಕ್ಷಣ ಅಲ್ಲಿ ಹತ್ತಾರು ವಿಭಾಗಗಳಿರುತ್ತವೆ. ಇದು ಗೊತ್ತಿರುವ ನಾರಾಯಣರಿಗೆ ಹಾಸ್ಯ ಕಲಾವಿದರ ಪರಂಪರೆ, ಖಳನಟರ ಖದರ್ ಹಾಗೂ ಎಸ್. ರಾಮಚಂದ್ರ, ಸುಂದರ್‌ನಾಥ್ ಸುವರ್ಣ, ಎಚ್.ಎಂ. ರಾಮಚಂದ್ರರಂಥ ದಿಗ್ಗಜರ ಕ್ಯಾಮೆರಾ ನೋಟಗಳಿಗೆ ನೂರರ ವೇದಿಕೆಯಲ್ಲಿ ಜಾಗ ಇರಲಿಲ್ಲವೆ? ಕನ್ನಡ ಸಿನಿಮಾ ಇತಿಹಾಸವನ್ನು ಹೇಳುವಾಗಲೂ ರಿಮೇಕ್ ಸಿನಿಮಾಗಳ ರೀಲನ್ನೇ ಉಣ ಬಡಿಸಿದ್ದು ಯಾಕೆ ನಾರಾಯಣ್ ಸಾರ್?
- ಆರ್. ಕೇಶವಮೂರ್ತಿ