ಸಿನಿಮಾ ಲೇಖನ

ಚೆನ್ನೈ ಎಕ್ಸ್‌ಪ್ರೆಸ್

ತಮಿಳುನಾಡು ಸರ್ಕಾರದ ಕಾರ್ಯಕ್ರಮದಂತೆ ನಡೆದ ಚೆನ್ನೈ ಸಿನಿಮಾ ಹಬ್ಬ(?)ದಲ್ಲಿ ಕನ್ನಡ ಚಿತ್ರರಂಗಕ್ಕೆ 'ಅಬ್ಬಬ್ಬಾ' ಅನ್ನುವಂಥದ್ದು...

ತಮಿಳುನಾಡು ಸರ್ಕಾರದ ಕಾರ್ಯಕ್ರಮದಂತೆ ನಡೆದ ಚೆನ್ನೈ ಸಿನಿಮಾ ಹಬ್ಬ(?)ದಲ್ಲಿ ಕನ್ನಡ ಚಿತ್ರರಂಗಕ್ಕೆ 'ಅಬ್ಬಬ್ಬಾ' ಅನ್ನುವಂಥದ್ದು ಏನೂ ಇರಲಿಲ್ಲವಾದರೂ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಪರವಾಗಿ ಉಸ್ತುವಾರಿ ವಹಿಸಿದ್ದ ನಿರ್ದೇಶಕ ಎಸ್.ನಾರಾಯಣ್ ಅವರ ನಡೆ 'ಅಪ್ಪಪ್ಪಾ' ಎನ್ನುವಂಥ ಟೀಕೆಗೆ ಗುರಿಯಾಗಿದೆ. ಈ ಟೀಕೆಗೆ, ಎಸ್.ನಾರಾಯಣ್ ಅವರಲ್ಲಿರುವ 'ಅಪ್ಪಯ್ಯ'ನೇ ಕಾರಣ ಎಂಬುದು ಚೆನ್ನೈಗೆ ಹೋಗಿಬಂದವರ ಅಪಹಾಸ್ಯದ ಮಾತು.
ವಾಣಿಜ್ಯಮಂಡಳಿ ವಹಿಸಿಕೊಟ್ಟ ಉಸ್ತುವಾರಿ ಕೆಲಸವನ್ನು ನಾರಾಯಣ್ ಸರಿಯಾಗಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನಟ ಜಗ್ಗೇಶ್ ಅವರಿಂದ ಶುರುವಾಗುತ್ತದೆ. ತಮ್ಮ ಮಗ ಪಂಕಜ್ ಜೊತೆಯಲ್ಲಿ ಒಬ್ಬರು ಸ್ಟಾರ್ ಇರಲಿ ಎಂಬ ಕಾರಣಕ್ಕೆ, ಕಾರ್ಯಕ್ರಮದ ಪ್ರಮುಖ ಅತಿಥಿಗಳ ಪಟ್ಟಿಯಲ್ಲಿದ್ದ ಜಗ್ಗೇಶ್ ಅವರ ಹೆಸರನ್ನು ಎತ್ತಿಹಾಕಿದ್ದಾರೆ. ಜಗ್ಗೇಶ್‌ಗೆ ಹೇಳದೇ ಕೇಳದೆ ಅವರ ಕಾರ್ಯಕ್ರಮ ಪಟ್ಟಿಯನ್ನೇ ಬದಲಾಯಿಸಿದ್ದಾರೆ ನಾಣಿ. ತಮ್ಮನ್ನು ಕೇವಲ ಚೆನ್ನೈ ವೇದಿಕೆಯಲ್ಲಿ ಕುಣಿಯಲು ಆರಿಸಿದ್ದನ್ನು ನೋಡಿ ಜಗ್ಗೇಶ್ ಅನಿವಾರ್ಯವಾಗಿ ಇಡೀ ಕಾರ್ಯಕ್ರಮಕ್ಕೆ ಕಾಗೆ ಹಾರಿಸಿದ್ದಾರೆ.
ಇನ್ನೊಂದು ಹಾಸ್ಯಾಸ್ಪದ ವಿಷಯ ಎಂದರೆ ಸನ್ಮಾನಕ್ಕೊಳಗಾದ(!?)60 ಮಂದಿ ಸಾಧಕರಲ್ಲಿ ಹಿರಿಯ ನಿರ್ದೇಶಕ ನಾಗಾಭರಣ ಅವರ ಹೆಸರಿಲ್ಲದಿದ್ದುದು. ಹೆಸರಿಗೆ ನಾರಾಯಣ್‌ರ ಉಸ್ತುವಾರಿಯಾದರೂ ಈ ಪಟ್ಟಿಯನ್ನು ಅದ್ಯಾವ ಮಹಾನುಭಾವರು ಸಿದ್ಧಪಡಿಸಿದರೋ ಗೊತ್ತಿಲ್ಲ. ಆದರೆ ನಮ್ಮ ಚಿತ್ರರಂಗದ ಅವಿಭಾಜ್ಯ ಅಂಗದಂತಿರುವ ನಾಗಾಭರಣ ಮಾತ್ರ ಈ ಪಟ್ಟಿಯಿಂದ ಹೊರಗಿದ್ದಾರೆ. ನಾಗಾಭರಣ ಎಂದರೆ ಅದು ಕೇವಲ ಕಲಾತ್ಮಕ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿ ತಮ್ಮ ಬೆನ್ನು ತಾವೇ ತಟ್ಟಿಕೊಂಡವರಲ್ಲ. ಅಥವಾ ಕಲೆಯ ಕೊಲೆ ಮಾಡಿ ಕೋಲೆ ಬಸವನಂತೆ ಕೆಟ್ಟ ಕಮರ್ಷಿಯಲ್ ಸಿನಿಮಾಗಳನ್ನು ಮಾಡಿ ದುಡ್ಡು ಮಾಡುವುದೊಂದೇ ಧ್ಯೇಯ ಎಂದವರಲ್ಲ. ಅವರ ಕಲಾತ್ಮಕ ಚಿತ್ರಗಳು ರಾಷ್ಟ್ರಪ್ರಶಸ್ತಿ ಗಳಿಸಿದ್ದರ ಜೊತೆಗೆ ಕಮರ್ಷಿಯಲ್ ಆಗಿಯೂ ಅದ್ಭುತ ಯಶಸ್ಸು ಪಡೆದ ಮ್ಯಾಜಿಕ್ ಮಾಡಿದಂಥವು. ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ ಚಿತ್ರಗಳು ಸತತ ಮೂರು ವರ್ಷ ರಾಷ್ಟ್ರಪ್ರಶಸ್ತಿ ಪಡೆದಿದ್ದಲ್ಲದೆ ಈ ಮೂರೂ ಚಿತ್ರಗಳು
ಚಿತ್ರಮಂದಿರಗಳಲ್ಲೂ 25 ವಾರ ಓಡಿ ಹಣದ ಹೊಳೆ ಹರಿಸಿದ ಚಿತ್ರಗಳಾಗಿದ್ದವು ಎಂಬ ವಿವರ ನಾಗಾಭರಣ ಅವರ ಸಮಗ್ರ ಸಾಧನೆಯ ಒಂದು ಸಣ್ಣ ಭಾಗ ಅಷ್ಟೆ. ಇಂಥ ನಾಗಾಭರಣ ಅವರಿಗೆ ಚಿತ್ರರಂಗದ ಮೈಲಿಗಲ್ಲು ಎನಿಸಿಕೊಳ್ಳುವಂಥ ಸಮಾರಂಭದಲ್ಲಿ ಸನ್ಮಾನ ಮಾಡದಿದ್ದರೆ ಅಲ್ಲಿ ಇನ್ಯಾರಿಗೆ ಮಾಡಿದ್ದೂ ಸನ್ಮಾನ  ಎನಿಸಿಕೊಳ್ಳುವುದಿಲ್ಲ ಎಂಬ ಕನಿಷ್ಠ ಪ್ರಜ್ಞೆಯೂ ಈ ಪಟ್ಟಿ ತಯಾರಿಸಿದವರಿಗೆ ಇರಲಿಕ್ಕಿಲ್ಲ.
ಇದರ ಜೊತೆಗೆ ಚೆನ್ನೈನ ವೇದಿಕೆಯನ್ನು ತಮ್ಮ ಮಗ ಪಂಕಜ್‌ಗೆ ಧಾರೆ ಎರೆಯುವ ಉದಾರತೆಯನ್ನೂ ನಾರಾಯಣ್ ಮೆರೆದಿದ್ದಾರೆ. ವಿಶೇಷ ಎಂದರೆ ಕಾರ್ಯಕ್ರಮಕ್ಕೆ ಆಹ್ವಾನ ನೀಡುವಾಗ ಇದೇ ನಾರಾಯಣ್ ಅವರಿಗೆ ಕನ್ನಡದ ಪ್ರಮುಖ ನಾಯಕರಲ್ಲೊಬ್ಬರಾದ 'ನೆನಪಿರಲಿ' ಪ್ರೇಮ್ ಅವರ ನೆನಪೇ ಆಗಿಲ್ಲ. ನಮ್ಮ ಚಿತ್ರರಂಗದ ಯುವ ನಾಯಕರಲ್ಲೊಬ್ಬರಾಗಿ ಇತ್ತೀಚಿಗೆ ಕೂಡ ಚಾರ್‌ಮಿನಾರ್, ಚಂದ್ರ, ಶತ್ರು ಚಿತ್ರಗಳ ಬಿಡುಗಡೆಯ ನಂತರ ಫುಲ್ ಚಾಲ್ತಿಯಲ್ಲಿರುವ ಪ್ರೇಮ್ ಅವರನ್ನು ಕಡೆಗಣಿಸಿರುವ ನಾರಾಯಣ್ ತಮ್ಮ ಪುತ್ರ ಪಂಕಜ್‌ಗೆ ಮಾತ್ರ ಮೂರು ಮೂರು ಹಾಡುಗಳಿಗೆ ನರ್ತಿಸುವ ಅವಕಾಶ ಕಲ್ಪಿಸಿ ಅವರನ್ನು ಹ್ಯಾಟ್ರಿಕ್ ಹೀರೋ  ಮಾಡುವ ಪ್ರಯತ್ನ ಮಾಡಿದ್ದಾರೆ. ಅಪ್ಪಾ ಎಂದರೆ ಸ್ವರ್ಗ ಎಂದುಕೊಂಡ ಪಂಕಜ್ ಚೆನ್ನೈನಲ್ಲಿ ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್‌ನಂತೆ ಮೆರಿದ್ದಾರೆ. ಅದ್ಯಾವ ಲೆಕ್ಕದಲ್ಲಿ ಪಂಕಜ್, ನೆನಪಿರಲಿ ಪ್ರೇಮ್‌ಗಿಂತ ಹೆಚ್ಚಿಗೆ ತೂಗುತ್ತಾರೋ ಆ ದೇವರಿಗೇ ಗೊತ್ತು.  
ಇನ್ನು ಅಲ್ಲಿನ ವೇದಿಕೆಯಲ್ಲಿ ಪ್ರದರ್ಶಿಸಲಾದ ವಿಡಿಯೋ ತುಣುಕುಗಳಲ್ಲಿ ನಿರ್ದೇಶಕ ಆರ್. ಚಂದ್ರು ಅವರ ಚಿತ್ರಗಳ ಝಲಕ್ ಇರಲಿ, ಚಂದ್ರು ಅವರ ಹೆಸರಿನ ಪ್ರಸ್ತಾವನೆಯನ್ನೂ ಮಾಡಲಾಗಿಲ್ಲ. ನೆನ್ನೆ ಮೊನ್ನೆ ಬಂದ ಸುನಿ, ಪವನ್ ಒಡೆಯರ್ ಅವರ ಹೆಸರು, ಚಿತ್ರಗಳಿಗೆ ಸ್ಥಳಾವಕಾಶ ಮಾಡಿಕೊಟ್ಟ ನಾರಾಯಣ್ ಈ ವಿಡಿಯೋದಲ್ಲಿ ಚಂದ್ರುಗೆ ಮಾತ್ರ ಅರ್ಧ ಚಂದ್ರ ತೋರಿಸಿದ್ದಾರೆ. ಇಲ್ಲಿನ ಪತ್ರಿಕಾಗೋಷ್ಠಿಗಳಲ್ಲಿ 'ಚಂದ್ರು ನನ್ನ ಶಿಷ್ಯ' ಎಂದು ಸ್ವತಃ ನಾರಾಯಣ್ ಅವರೇ ಹೇಳಿಕೊಂಡಿದ್ದುಂಟು. ಆದರೆ ತಮ್ಮ ಶಿಷ್ಯನಿಗೇ ಏಕೆ ಹೀಗೆ ಮಾಡಿದರು ಎಂದು ಕೇಳಿದರೆ ಚಂದ್ರು ಅದಕ್ಕೆ ಇಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿ ಹೋಗಲಿ ಬಿಡಿ ಎನ್ನುತ್ತಾರೆ.
ಕಲಾ ಸಾಮ್ರಾಟ್ ಎಂದಲ್ಲದಿದ್ದರೂ ಚಿತ್ರಂಗದಲ್ಲಿ ಹಿರಿಯ ನಿರ್ದೇಶಕ, ಮೇಷ್ಟ್ರು, ಶಿಸ್ತಿನ ವ್ಯಕ್ತಿ ಎಂದೆಲ್ಲಾ  ಹೆಸರು ಮಾಡಿರುವ ಎಸ್. ನಾರಾಯಣ್ ಖಂಡಿತಾ ಹೀಗೆ ವೈಯಕ್ತಿಕ ಹಿತಾಸಕ್ತಿಯ ಕೆಲಸ ಮಾಡಬಾರದಿತ್ತು. ನಾಳೆ ಯಾರಾದರೂ ನನ್ನನ್ನು ಈ ಪ್ರಶ್ನೆ ಕೇಳಿದರೆ ಅದಕ್ಕೆ ಏನು ಉತ್ತರ ಹೇಳಲಿ ಎಂಬ ಹಿಂಜರಿಕೆಯಾದರೂ ಅವರಿಗಿರಬೇಕಿತ್ತು.

ಆರ್. ಚಂದ್ರು
ನಿಮ್ಮ ಗುರುಗಳೇ ನಿಮ್ಮನ್ನು ಕಡೆಗಣಿಸಿದ್ದಕ್ಕೆ ಏನು ಕಾರಣ?
ಅಯ್ಯೋ, ನನಗೆ ಅವರ್ಯಾವ ಸೀಮೆ ಗುರುಗಳು ಸರ್. ನಾನು ಅವರ ಸೀರಿಯಲ್‌ಗೆ ಕ್ಯಾಸೆಟ್ ಕೇಳಿ ಡೈಲಾಗ್ ಬರೆದು ಕೊಡುವ ಕೆಲಸ ಮಾಡಿಕೊಡುತ್ತಿದ್ದೆ. ಐದು ವರ್ಷ ಆ ಕೆಲಸ ಮಾಡಿದ ಮೇಲೆ ನನ್ನನ್ನು ಸಹಾಯಕನನ್ನಾಗಿ ಮಾಡಿಕೊಳ್ಳಿ. ನನಗೆ ನಿರ್ದೇಶಕನಾಗುವ ಕನಸಿದೆ ಎಂದು ಕೇಳಿದಾಗ ಬೈದು ಕಳಿಸಿದ್ದರು. ನನಗೆ ನಿಜವಾದ ಗುರುಗಳು ಎಂದರೆ ಶಿಡ್ಲಘಟ್ಟ ಶ್ರೀನಿವಾಸ್ ಮತ್ತು ಎನ್. ಟಿ. ಜಯರಾಮರೆಡ್ಡಿ ಅವರು. ಆದರೆ ನಾನು ನಿರ್ದೇಶಕನಾಗಿ ಹೆಸರು ಮಾಡಿದ ಮೇಲೆ ಇದೇ ನಾರಾಯಣ್, ಚಂದ್ರು ನನ್ನ ಶಿಷ್ಯ ಎಂದು ಹೇಳಿಕೊಳ್ಳುತ್ತಿದ್ದರು. ಅದಲ್ಲದೆ ತಮ್ಮ ಪುತ್ರ ಪಂಕಜ್‌ಗೆ ಒಂದು ಸಿನಿಮಾ ಮಾಡಿಕೊಡು ಎಂದು ಕೇಳಿದ್ದರು. ನೋಡೋಣ ಎಂದು ಹೇಳಿದ್ದೆ. ಆದರೆ ಅವರು ಹೇಳಿ ಕಳಿಸಿದಾಗ ಹೋಗಿ ಮಾತನಾಡಲು ಆಗಿರಲಿಲ್ಲ. ಆ ಸಿಟ್ಟಿಗೆ ಈಗ ನನ್ನ ಹೆಸರನ್ನು, ನನ್ನ ಚಿತ್ರಗಳನ್ನು ಕಡೆಗಣಿಸಿದ್ದಾರೆ. ವಿಷಯ ಗೊತ್ತಾದಾಗ ಬೇಸರ ಆಯಿತು. ಆದರೂ ನಾನು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ನೂರು ಸಿನಿಮಾ ಮಾಡಿರುವ ಶಿವಣ್ಣರಂಥ ದೊಡ್ಡ ನಟ, ಸಾರ್ವಜನಿಕವಾಗಿ 'ಚಂದ್ರು ನನಗೆ ಲೈಫ್ ಕೊಟ್ಟ' ಎಂಬ ದೊಡ್ಡ ಮಾತುಗಳನ್ನಾಡಿದ್ದಾರೆ. ಉಪೇಂದ್ರರಂಥ ಸ್ಟಾರ್ 'ನನಗೊಂದು ಸಿನಿಮಾ  ಮಾಡಿ ಕೊಡಿ ಚಂದ್ರು' ಎಂದು ಹೇಳುತ್ತಾರೆ. ಹೀಗೆ ನಾನು ದೊಡ್ಡವರ ದೊಡ್ಡತನಗಳನ್ನು ನೋಡಿದ್ದೇನೆ. ನನಗಷ್ಟು ಸಾಕು. ಸಣ್ಣವರ ಸಣ್ಣಬುದ್ಧಿಗಳ ಬಗ್ಗೆ ಯಾಕೆ ಚಿಂತೆ ಮಾಡಲಿ. ನಾರಾಯಣ್ ಮಾಡಿರುವ ವಿಡಿಯೋದಲ್ಲಿ ನನ್ನ ಹೆಸರು, ಚಿತ್ರಗಳು ಇಲ್ಲದಿದ್ದರೆ ಏನಂತೆ, ನನ್ನ ಹೆಸರು ಕರ್ನಾಟಕದ ಚಿತ್ರಪ್ರೇಮಿಗಳ ಮನಸ್ಸಲ್ಲಿದೆ. ನನಗೆ ಅದೇ ಮುಖ್ಯ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ