ಸಿನಿಮಾ ಲೇಖನ

ದೃಶ್ಯ ನಕ್ಷತ್ರದ ನೆನಪು

ಕಪ್ಪು ಬಿಳುಪಿನ ಜಗತ್ತಿನಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ತಂದ ಮೂರ್ತಿಯವರನ್ನು ಅದು ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ ಎಂದಿನಂತೆಯೇ ಸರಳವಾಗಿ ಉತ್ತರಿಸುತ್ತಾರೆ. 'ಅಂದಿನ ಛಾಯಾಗ್ರಾಹಕರು ಎಕ್ಸ್‌ಪರಿಮೆಂಟ್ ಮಾಡಲು ಭಯ ಪಡುತ್ತಿದ್ದರು. ಯಾವುದೇ ಬದಲಾವಣೆಯನ್ನು ಪ್ರೇಕ್ಷಕರು ಒಪ್ಪುವುದಿಲ್ಲ ಎಂಬ ದಿಗಿಲು ಅವರುಗಳಿಗಿತ್ತು. ಕೆಲವರಿಗೆ ಸಾಮರ್ಥ್ಯ ಇರಲಿಲ್ಲ, ಕೆಲವರಿಗೆ ಕಲ್ಪನೆಯಿರಲಿಲ್ಲ. ಅದರಿಂದ ಎಲ್ಲರೂ ಫ್ಲಾಟ್ ಲೈಟಿಂಗ್ ಮಾಡಿ ಬಿಡುತ್ತಿದ್ದರು. ಅವರೆಂದೂ ನೆರಳುಗಳನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಅವರೆಂದೂ ಕಡಿಮೆ ಇಂಟೆನ್ಸಿಟಿ ಲೈಟಿಂಗ್ ಮಾಡುತ್ತಿರಲಿಲ್ಲ. ಮೊದಲು ನಾನು ಮಾಡುತ್ತಿದ್ದ ಲೈಟಿಂಗ್ ನೋಡಿ ಅವರಿಗೆ  ದಿಗ್ಭ್ರಮೆಯಾಯಿತು. ಮೊದಲು ಬಣ್ಣದಲ್ಲಿ ನಾನು ಕಾಂಟ್ರಾಸ್ಟ್ ಲೈಟಿಂಗ್ ಮಾಡಿದಾಗಲೂ ಅವರು ನನಗೆ ಎಚ್ಚರಿಕೆ ಕೊಟ್ಟರು. ಆದರೆ ಮುಖ್ಯವಾದ ವಿಷಯವೇನೆಂದರೆ ಆಗ ನನಗೆ ಪೂರ್ತಿ ಈ ವಿಷಯದಲ್ಲಿ ಸ್ವಾತಂತ್ರ್ಯ ಕೊಟ್ಟ ಗುರುದತ್‌ನಂಥಾ ಡೈರೆಕ್ಟರ್ ಇದ್ದ.'
ಹಾಗಾಗಿಯೇ ಗುರುದತ್ ಅಸು ನೀಗಿದಾಗ ಅವರು ಕೇವಲ ಅವನಿಗಾಗಿ ಅಳಲಿಲ್ಲ. ತಮಗಾಗಿಯೂ ಅತ್ತರು. ತಮ್ಮ ಕಲೆ, ತಂತ್ರ ಎಲ್ಲಕ್ಕೂ ಇದು ಕೊನೆ ಎಂಬ ಅರಿವು ಅವರನ್ನು ಕಾಡಿತ್ತು. ಆ ಯುಗ ಮುಗಿದಿತ್ತು. ಒಂದು ಹೊಸಯುಗ ಪ್ರಾರಂಭವಾಗಿತ್ತು. ಬೆಳಕಿಂದ ಭಾವನೆಗಳ ಅಲೆಗಳನ್ನು ಎಬ್ಬಿಸುತ್ತಿದ್ದ ಮೂರ್ತಿಯವರ ಕುಂಚಕ್ಕೆ ಈಗ ಸಿಕ್ಕಿದ್ದು ಬಣ್ಣದ ಕುಡಿಕೆ.
=
ಇದು ಅವರ ಪರಿಚಿತ ಜಗತ್ತಿಗೆ ತದ್ವಿರುದ್ಧವಾದದ್ದು. ವಿಜಯ್‌ನ ಆದರ್ಶ್, ಜಾಬಾಳ ತುಂಟತನ, ಶಾಂತಿಯ ದ್ವಂದ್ವಗಳು, ಸುರೇಶ್ ಸಿನ್ಹಾನ ಭ್ರಮ ನಿರಸನ, ಛೋಟಿ ಬಹೂನ ದೀರ್ಘ ನಿಟ್ಟುಸಿರುಗಳು ಹತ್ತಿರವೂ ಸುಳಿಯದ ಜಗತ್ತು ಇದು. ಥರಥರ ಮೈಕೈ ಕುಣಿಸುತ್ತಾ ಹಾಡುವ ಶಮ್ಮಿ ಕಪೂರನ ಅಬ್ಬರದಲ್ಲಿ 'ಜಿನ್ಹೆ ನಾಝ್ ಹೈ ಹಿಂದ್ ಪರ್ ವೋ ಕಹಾಂ ಹೈ' ಎಂದು ತವಕಿಸುತ್ತಿದ್ದ ಗುರುದತ್ ಎಲ್ಲೋ ಕಳೆದು ಹೋಗಿದ್ದ.
ಚಮಕಿ ಕುರ್ತಾ ತೊಟ್ಟ ಡುಬ್ಬುಕೂದಲಿನ ಕೆಂಪು ತುಟಿಯ ಹುಡುಗಿಯರು ಕಣ್ರೆಪ್ಪೆ ಪಟಪಟ ಮಾಡುತ್ತಾ ನಾಯಕರನ್ನು ಕೆಣಕುತ್ತಿದ್ದರು. ಕುಣಿಯುತ್ತಾ, ಮರ ಸುತ್ತುತ್ತಾ ಹಾಡುತ್ತಿದ್ದರು. ಅವರನ್ನು ಬಣ್ಣಬಣ್ಣದ ಶರಟಿನ ಹೀರೋಗಳು ಹಿಂಬಾಲಿಸುತ್ತಿದ್ದರು. ಅವರಿಗೆ ಹಿನ್ನೆಲೆಯಾಗಿ ಹಿಮ ಪರ್ವತಗಳು, ಪೈನ್ ಕಾಡುಗಳು, ಟ್ಯೂಲಿಪ್ಸ್ ತೋಟಗಳು, ಬಣ್ಣಬಣ್ಣದ ಕಾರಂಜಿಗಳು ರಾರಾಜಿಸಿದುವು. ಸಮಯ ಬಂದಾಗ ಬಿಳೀ ಪ್ಯಾಂಟು, ಬಿಳೀ ಶರಟಿನ ಈ ಛಾಯಾಗ್ರಾಹಕ ಧೈರ್ಯವಾಗಿ ಆ ಜಗತ್ತಿನೊಳಗೆ ಹೆಜ್ಜೆ ಇಟ್ಟರು.

ಜೊತೆಗೆ ಸೂರಜ್, ರಾಮ್ ಬಲರಾಮ್, ಪಾಕೀಜಾ, ರಜಿಯಾ ಸುಲ್ತಾನ್, ಅಂತರ್ನಾದ್‌ರಂತಹ ಬೇರೆ ನಿರ್ದೇಶಕರ ಚಿತ್ರಗಳಲ್ಲಿ. ಕಲಾತ್ಮಕ ಅರ್ಥಪೂರ್ಣ ಶೈಲಿಯಿಂದ ಈ ಅಪ್ಪಟ ಕಮರ್ಶಿಯಲ್ ಶೈಲಿಗೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಯಾವ ಸವಾಲನ್ನೂ ಎದೆಗಾರಿಕೆಯಿಂದ ಎದುರಿಸುವ ಮನೋಭಾವ ಇಲ್ಲಿಯೂ ಗೆದ್ದಿತು. ಬಣ್ಣದಲ್ಲೂ ಗಾಢ ಕಾಂಟ್ರಾಸ್ಟ್ ಫೋಟೋಗ್ರಫಿ ಮಾಡಿದ ಮೂರ್ತಿ, ಇಲ್ಲೂ ಪ್ರೇಕ್ಷಕರ ಮನಸೂರೆಗೊಂಡರು.
ಅವರು ಎದುರಿಸಿದ ಭಾರಿ ಚಾಲೆಂಜ್ ಜಪಾನಿನಲ್ಲಿ 'ಲವ್ ಇನ್ ಟೋಕ್ಯೋ' ಶೂಟ್ ಮಾಡುತ್ತಿದ್ದಾಗ. ಅವರೇ ಹೇಳುವಂತೆ 'ಜಪಾನಿನ ಹವಾ ಗುಣವೇ ಹಾಗಿತ್ತು. ಅವತ್ತು ತುಂಬಾ ಮೋಡ ಮುಸುಕಿತ್ತು. ನಂಗೋ ಆದಷ್ಟು ಶಾಟ್ಸ್ ತೆಗೆದುಕೊಂಡು ಬಿಡೋಣ, ಇಲ್ಲದಿದ್ರೆ ದಿನವೆಲ್ಲಾ ಹಾಳಾಗುತ್ತೆ ಅಂತ. ಆದರೆ ಯಾರೂ ಅಂಥಾ ಬೆಳಕಿನಲ್ಲಿ ಶೂಟ್ ಮಾಡುತ್ತಿರಲಿಲ್ಲ. ಆ ರೀತಿ ನಾನು ತುಂಬಾ ಕಟ್ಟಲೆಗಳನ್ನು ಮುರಿದಿದ್ದೇನೆ. ಯೋಚನೆ ಮಾಡಿದೆ. ಬ್ಯಾಕ್ ಗ್ರೌಂಡ್ ಆರಿಸಿದೆ. ಮುಖ ಎತ್ತಿ ಕಾಣೋ ಹಾಗೆ ಹಿನ್ನೆಲೆ ಆರಿಸಿಕೊಂಡೆ. ಚಕ್ಕಿ (ಪ್ರಮೋದ್ ಚಕ್ರವರ್ತಿ), ಮಹಮೂದ್ ಎಲ್ಲಾ ಆಶ್ಚರ್ಯ ಪಟ್ಟರು. ಮಹಮೂದ್ 'ಕ್ಯಾ ಯೆ ವೆದರ್ ಮೆ ಶೂಟ್ ಕರತಾ ಹೈ, ಚಕ್ಕಿ ಕೊ ತುಮ್ ಡುಬಾಯೆಗಾ, ಬ್ಯಾಂಡ್ ಬಜಾಯೇಗಾ ಉಸ್ಕಾ' ಎಂದು ಕೂಗಾಡಿದ.  
ಆಮೇಲೆ ರಶಸ್ ನೋಡಿದ ಮೇಲೆ ಎಲ್ಲರೂ ದಂಗಾದರು. ಆಶಾ ಪರೇಖ್ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದಳೂಂದ್ರೆ, ಕ್ಲೋಸಪ್‌ಗಳೆಲ್ಲಾ ಮೋಡ ಮುಸುಕಿದ ವಾತಾವರಣದಲ್ಲೇ ತೆಗೆದುಕೊಳ್ಳೀಂತ ಹೇಳೋಕೆ ಶುರು ಮಾಡಿದಳು! ತುಂಬಾ ಲಕ್ಕಿ ಸ್ಟಾರ್ ಅವಳು. ಅವಳ ಚಿತ್ರಗಳೆಲ್ಲಾ ಸೂಪರ್ ಹಿಟ್.
=

ಕಲರ್‌ನಲ್ಲಿ ನಾನು ಶೂಟ್ ಮಾಡುವ ಕಾಂಟ್ರಾಸ್ಟ್ ನೋಡಿ ಕೊಡಾಕ್‌ನವರೇ ಮೊದಲು ಅನುಮಾನಿಸಿದರು. ಆಮೇಲೆ 'ಹ್ಯಾಟ್ಸ್ ಆಫ್ ಟು ಮೂರ್ತಿ ಸಾಬ್‌' ಅಂದರು. ದಿನಾ ಒಂದೊಂದು ಹೊಸ ಚಾಲೆಂಜ್ ಮಜಾ ಇರ್ತಿತ್ತು! ನಾನು ಕಲರ್‌ನಲ್ಲಿ ಹೈಲೈಟ್ಸ್ ಶ್ಯಾಡೋಸ್ ಕ್ರಿಯೇಟ್ ಮಾಡುತ್ತಿದ್ದಷ್ಟು ಯಾರೂ ಮಾಡುತ್ತಿರಲಿಲ್ಲ.  ಅದಕ್ಕೇ ಲ್ಯಾಬ್‌ನಲ್ಲಿ ನೋಡೋಕೆ ಬಂದ ಕೊಡಾಕ್ ಕೃಷ್ಣನ್ 'ಮೂರ್ತಿ, ಅಷ್ಟೊಂದು ರಿಸ್ಕ್ ತಗೋಬೇಡ' ಅಂತ ಬುದ್ಧಿವಾದ ಹೇಳಿದರು. ಹೋದ್ರೆ ನಂದೇ ತಾನೇ ಹೋಗುತ್ತೆ ಅಷ್ಟೊಂದು ತಲೆ ಯಾಕೆ ಕೆಡಿಸಿಕೊಳ್ತಾರೆ ಅಂದ್ಕೊಂಡೆ. 'ನೋಡಪ್ಪಾ, ಕಾಂಟ್ರಾಸ್ಟ್ ಕ್ರಿಯೇಟ್ ಮಾಡಿದೀನಿ, ಡೆವಲಪ್ ಮಾಡೋಕೆ ಮೊದಲು ಟೆಸ್ಟ್ ತೋರಿಸಿ. ನಾನು ಸಜಸ್ಟ್ ಮಾಡ್ತೀನೀ'ಂತ ಹೇಳಿಬಿಟ್ಟೆ. ಡೆಪ್ತ್ ಕ್ರಿಯೇಟ್ ಮಾಡೋದಕ್ಕೆ ಕಾಂಟ್ರಾಸ್ಟ್ ಕ್ರಿಯೇಟ್ ಮಾಡಲೇ ಬೇಕಾಗುತ್ತೆ.

ನಂತರ ಅವರು ಕೆಲಸ ಮಾಡಿದ್ದು ಪ್ರಮೋದ್ ಚಕ್ರವರ್ತಿಯ ಅಷ್ಟೂ ಚಿತ್ರಗಳಲ್ಲಿ.

ಆಮೇಲೆ ನಯಾ ಜಮಾನಾ, ಬಾರೂಡ್, ಆಜಾದ್ ಹೀಗೆ ಸಾಲುಸಾಲಾಗಿ ರಂಗರಂಗೀಲಾ ಸಿನೆಮಾಗಳು ಬರುತ್ತಲೇ ಹೋದುವು. ಆದರೆ ಶ್ಯಾಮ್ ಬೆನೆಗಲ್‌ರ 'ಅವರ್ ಅಂತರ್ನಾದ್‌' ತಮಗೆ ತುಂಬಾ ತೃಪ್ತಿ ಕೊಟ್ಟ ಸಿನೆಮಾ ಅಂತ ಮೂರ್ತಿ ಹೇಳುತ್ತಾರೆ. ಗುರುದತ್ ಆದ ಮೇಲೆ ನಾನು ಕೆಲಸ ಮಾಡಿದ ಸೂಕ್ಷ್ಮ ನಿರ್ದೇಶಕರಲ್ಲಿ ಶ್ಯಾಮ್ ಬೆನೆಗಲ್ ಒಬ್ಬರು. ಅವರೂ ಅಷ್ಟೆ. ಕಲಾತ್ಮಕತೆಗೆ, ಪರ್‌ಫೆಕ್ಶನ್‌ಗೆ ತುಂಬಾ ಬೆಲೆ ಕೊಡ್ತಿದ್ದರು. ಅವರ ಜೊತೆ ಕೆಲಸ ಮಾಡೋಕೆ ತುಂಬಾ ಮಜಾ ಇತ್ತು ಎನ್ನುತ್ತಾರೆ.
ಇದೆಲ್ಲಾ ಕೇಳಿದಾಗ, ಗುರುದತ್ ತೀರಿಕೊಂಡ ಮೇಲೆ ನನ್ನ ಕರಿಯರ್ ಮುಗಿದು ಹೋಯಿತು ಎಂದು ಅತ್ತ ಮೂರ್ತಿ ಇವರೇನಾ ಎಂದು ಅಚ್ಚರಿಯಾಗುತ್ತದೆ. ಸಿನೆಮಾ ಸೇರಬೇಕೆಂದು ಮನೆ ಬಿಟ್ಟು ಮುಂಬೈಗೆ ಓಡಿ ಹೋದ ಹುಡುಗನ ಕೆಚ್ಚು ಹಾಗೇ ಇತ್ತು. ಅತ್ಯಂತ ಕಠಿನ ಸಂದರ್ಭಗಳಲ್ಲಿ ತಲೆ ಎತ್ತಿ ನಿಲ್ಲುತಿತ್ತು. ಹಾಗಾಗಿಯೇ ಅವರು ಮುಂದೆ ಕಿರುತೆರೆಗೂ ಲಗ್ಗೆ ಹಾಕಿ ಡಿಸ್ಕವರಿ ಆಫ್ ಇಂಡಿಯಾ, ತಮಸ್‌ನಂಥಾ ಅಪೂರ್ವ ಧಾರಾವಾಹಿಗಳನ್ನು ಬಣ್ಣದಲ್ಲಿ ಕೊಡಲು ಸಾಧ್ಯವಾಯಿತು. ಕಪ್ಪು ಬಿಳುಪಿರಲಿ ಬಣ್ಣಬಣ್ಣವಿರಲಿ ಮೂರ್ತಿ ಎಂದಿದ್ದರೂ ಸೃಷ್ಟಿಸುವುದು ಅತಿಶ್ರೇಷ್ಠವಾದದ್ದೇ ಎನ್ನುವುದು ಸಾಬೀತಾಯಿತು.
=



ಮೂರ್ತಿ ಕಂಡ ಕಾಮನಬಿಲ್ಲು
ಗುರುದತ್ ಚಿತ್ರಗಳಿಗೆ ಬೆಳಕಿನ ಜೀವ ನೀಡಿದ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಛಾಯಾಗ್ರಾಹಕ ವಿ.ಕೆ.ಮೂರ್ತಿ ಇನ್ನಿಲ್ಲ. ಅವರ ಕುರಿತು 'ಬಿಸಿಲು ಕೋಲು' ಕೃತಿ ರಚಿಸಿದ ಉಮಾ ರಾವ್ ಇಲ್ಲಿ ಮೂರ್ತಿ ಬಗ್ಗೆ ಬರೆದಿದ್ದಾರೆ.


- ಉಮಾ ರಾವ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ