ಕೇಳಕ್ಕೆ ಇಂಪಾಗಿ ಹಾಗೂ ಕ್ಯಾಚಿಯಾಗಿರುವಂಥ ಸಿನಿಮಾ ಹಾಡುಗಳ ಸಾಲುಗಳು ಚಿತ್ರದ ಶೀರ್ಷಿಕೆಗಳಾಗುವುದು ಚಿತ್ರರಂಗಕ್ಕೆ ಹೊಸದಲ್ಲ. ಈಗ ಅಂಥದ್ದೇ ಹೆಸರಿನೊಂದಿಗೆ ಸೆಟ್ಟೇರಿರುವ ಚಿತ್ರಕ್ಕೆ ಮನೋಜ್ ನಾಯಕ. ನಿಕ್ಕಿ ಗುರ್ಲಾನಿ ನಾಯಕಿ. ಅಂದಹಾಗೆ ಚಿತ್ರದ ಹೆಸರು 'ಪರವಶನಾದೆನು' ಎಂಬುದು. ಯೋಗರಾಜ್ ಭಟ್ಟರ ನಿರ್ದೇಶನದ 'ಪರಮಾತ್ಮ' ಚಿತ್ರದ 'ಪರವಶನಾದೆನು...' ಎಂದು ಆರಂಭವಾಗುವ ಹಾಡಿನ ಮೊದಲ ಪದ ಚಿತ್ರದ ಮುಖ್ಯ ಪಿಲ್ಲರ್. ಮಾನ್ಸೂನ್ ಮಂಜು ನಿರ್ದೇಶಕರು. ಇವರು ಮಾನ್ಸೂನ್ನಲ್ಲಿ ಹೆಚ್ಚು ಹೆಚ್ಚು ಕವಿತೆ, ಹಾಡು, ಕಥೆಗಳನ್ನು ಬರೆಯುತ್ತಿದ್ದರಂತೆ. ಹೀಗಾಗಿ ಹೆಸರಿನ ಜೊತೆ ಮಾನ್ಸೂನ್ ಸೇರಿಸಿಕೊಂಡಿದ್ದಾರೆ. ಬರೀ ಮಂಜು ಅಂತ ಇದ್ದರೆ ಕೊಬ್ಬರಿ ಮಂಜು ಅಲಿಯಾಸ್ ಕೆ. ಮಂಜು ಎಂದುಕೊಳ್ಳುವ ಅಪಾಯಗಳನ್ನೂ ತಳ್ಳಿ ಹಾಕುವಂತಿಲ್ಲ. ಎಂ.ಪಿ. ರಮೇಶ್ ಚಿತ್ರದ ನಿರ್ಮಾಪಕರು. ಹೆಸರಿನಲ್ಲಿ 'ಎಂಪಿ' ಇರುವುದರಿಂದ ಮೆಂಬರ್ ಆಫ್ ಪಾರ್ಲಿಮೆಂಟ್ ಅಲ್ಲ ಎಂಬುದು ನಿರೂಪಕರ ಸ್ಪಷ್ಟನೆ. ರಮೇಶ್, ಬಿಲ್ಡರ್ ಎಂಬುದು ನಿಮ್ಮ ಗಮನಕ್ಕಿರಲಿ. ಆನಂದ್- ರಾಹುಲ್ ಜೋಡಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದೆ.
ರಾಜಕಾರಣಿಗಳು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹಾಗೂ ಅದ್ಧೂರಿ ಮುಹೂರ್ತದೊಂದಿಗೆ ಆರಂಭಗೊಂಡ 'ಪರವಶನಾದೆನು' ಚಿತ್ರದ್ದು ಪಕ್ಕಾ ಪ್ರೇಮ ಕಥೆ. 'ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇಲ್ಲಿದೆ. ಮೇಲ್ಮಧ್ಯಮ ವರ್ಗದ ಹುಡುಗಿ ಶ್ರೀಮಂತ ಹುಡುಗನನ್ನು ಪ್ರೀತಿಸುತ್ತಾಳೆ. ಆದರೆ, ಆ ಹುಡುಗ ಮುಂದೆ ಅಂತಸ್ತು, ಐಶ್ವರ್ಯ ಕಳೆದುಕೊಳ್ಳುತ್ತಾನೆ. ಮುಂದೆ ಹುಡುಗಿ ಕೂಡ ಅವನಿಗೆ ಕೈ ಕೊಡುತ್ತಾಳೋ ಇಲ್ಲವೋ ಎನ್ನುವುದು ಚಿತ್ರದ ಒಂದು ಸಾಲಿನ ಕಥೆ. ಇಲ್ಲಿ ನಾಯಕ ಹಣ ಮುಖ್ಯನಾ? ಅಥವಾ ಪ್ರೀತಿ ಮುಖ್ಯನಾ? ಎಂದು ನಾಯಕಿಗೆ ಅರ್ಥ ಮಾಡಿಸುವ ಸಾಹಸ ಮಾಡುತ್ತಾನೆ. ಹೀಗಾಗಿ ಪ್ರತಿ ದೃಶ್ಯವನ್ನೂ ಅತ್ಯಂತ ರಿಚ್ ಆಗಿ ತೆಗೆಯುತ್ತೇನೆ. ಹುಡುಗಿ ಯಾವುದಕ್ಕೆ ಪರವಶವಾಗುತ್ತಾಳೆ ಅಂತನ್ನುವುದು ಸಸ್ಪೆನ್ಸ್' ಎಂದರು ಮಾನ್ಸೂನ್ ಮಂಜು. ನಿರ್ದೇಶಕರು ಈ ಹಿಂದೆ ಹ.ಸು. ರಾಜಶೇಖರ್, ಸುನೀಲ್ ಕುಮಾರ್ ದೇಸಾಯಿ, ಎಸ್. ಮಹೇಂದರ್, ಎಚ್. ವಾಸು, ಕೋಡ್ಲು ರಾಮಕೃಷ್ಣ ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ. ಚಿತ್ರದ ನಿರೂಪಣೆ ಪಕ್ಕಾ ಪಿಲಾಸಫಿಕಲ್ ಆಗಿರುತ್ತದಂತೆ.
ನಿರ್ಮಾಪಕ ರಮೇಶ್ಗೆ ಮಂಜು ನಾಲ್ಕು ತಿಂಗಳ ಹಿಂದೆ ಪರಿಚಯಗೊಂಡು ನಾಲ್ಕು ಕಥೆಗಳನ್ನು ಹೇಳಿದರಂತೆ. ಅದರಲ್ಲಿ 'ಪರವಶನಾದೆನು' ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಬಂದಿದ್ದಾರೆ. ಹುಡುಗ ಮತ್ತು ಹುಡುಗಿಯರು ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಹೇಗೆ ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ತುಂಬಾ ಚೆನ್ನಾಗಿ ಈ ಚಿತ್ರದ ಮೂಲಕ ನಿರ್ದೇಶಕರು ಹೇಳಿದ್ದಾರೆ ಎಂಬುದು ರಮೇಶ್ರ ಮಾತು. ಚಿತ್ರಕ್ಕೆ 3 ರಿಂದ 5 ಕೋಟಿ ವೆಚ್ಚವಾಗಲಿದೆಯಂತೆ. ಈ ಚಿತ್ರ ಗೆದ್ದರೆ ವರ್ಷಕ್ಕೆ ಒಂದೆರಡು ಚಿತ್ರಗಳನ್ನು ಮಾಡುವ ಯೋಜನೆ ನಿರ್ಮಾಪಕರದ್ದು. ಚಿತ್ರದ ನಾಯಕ ಮನೋಜ್ ಈ ಹಿಂದೆ 'ಮೊಗ್ಗಿನ ಮನಸು' ಚಿತ್ರದಲ್ಲಿ ಅಭಿನಯಿಸಿದ್ದರು. ಅದರ ನಂತರ ಮತ್ತೆ ಯಾವ ಚಿತ್ರದಲ್ಲೂ ನಟಿಸಿಲ್ಲ. ತಮ್ಮದೇ ಸಂಗೀತ ತಂಡ ಕಟ್ಟಿಕೊಂಡಿದ್ದರು. ಅಲ್ಲದೆ ಅಭಿನಯಕ್ಕೆ ಬೇಕಾದ ತಯಾರಿಗಳನ್ನು ನಡೆಸಿಕೊಳ್ಳುತ್ತಿದ್ದರಂತೆ. ಈಗ 7 ವರ್ಷಗಳ ನಂತರ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. 'ನನಗೆ ಸಿನಿಮಾ ಅಂದರೆ ಹುಚ್ಚು ಪ್ರೀತಿ. ಆದರೆ, ನಿರೀಕ್ಷೆಯಂತೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ತುಂಬಾ ಸ್ಟೈಲಿಶ್ ಹಾಗೂ ಲವಲವಿಕೆ ಇರುವಂಥ ಪಾತ್ರ' ಎಂದರು ಮನೋಜ್.
ಬೆಂಗಳೂರು, ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಹಾಡುಗಳ ಚಿತ್ರೀಕರಣಕ್ಕೆ ದುಬೈ ಹಾಗೂ ಮಲೇಷ್ಯಾಗೆ ಹೋಗುವ ಆಕಾಂಕ್ಷೆ ಚಿತ್ರತಂಡದ್ದು. ನಾಯಕಿ ನಿಕ್ಕಿ ಗುರ್ಲಾನಿಗೆ ಇದು 4ನೇ ಚಿತ್ರ. ಆದರೆ ಇನ್ನೂ ಒಂದು ಚಿತ್ರವೂ ಬಿಡುಗಡೆಯಾಗಿಲ್ಲ. ತುಂಬಾ ಶ್ರೀಮಂತ ಹುಡುಗನನ್ನು ಪ್ರೀತಿಸುವ ಪಾತ್ರದಲ್ಲಿ ನಿಕ್ಕಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಆನಂದ್, ಅಸ್ಸಾಂನ ರಾಹುಲ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಬ್ಬರಿಗೂ ಇದು ಮೊದಲ ಸಿನಿಮಾ.
ಆರ್. ಕೇಶವಮೂರ್ತಿ