ಆಗಸ್ಟ್‌ನಲ್ಲಿ ಬರುವ ಸ್ವಾತಂತ್ರ್ಯೋತ್ಸವ ಎಲ್ಲರ ಸಂಭ್ರಮಕ್ಕೆ ಕಾರಣವಾಗುತ್ತೆ. ಇತ್ತೀಚೆಗೆ ಸ್ಟಾರ್‌ಗಳ ಫ್ರೆಂಡ್‌ಶಿಪ್ ಡೇ ಆಚರಣೆಯನ್ನೂ ಕಾಣಬಹುದು. ಆದರೆ ರಕ್ಷಾಬಂಧನವನ್ನು ಮೆಚ್ಚಿನ ಹಬ್ಬವಾಗಿರಿಸಿಕೊಂಡ ಸ್ಟಾರ್ ಒಬ್ಬರಿದ್ದಾರೆ ಅಂದರೆ ಅಚ್ಚರಿಪಡಬೇಕಾಗಿಲ್ಲ. ಅದು ನಟ ರಮೇಶ್ ಅರವಿಂದ್. ಹಾಗಂತ ಚಿತ್ರೋದ್ಯಮದಲ್ಲಿ ಅವರಿಗೆ ತಂಗಿಯಂತ
ನಟಿಯರಿಲ್ಲವಂತೆ!. ಸ್ವಂತ ಸಹೋದರಿ ವಿವಾಹದ ಬಳಿಕ ಮಸ್ಕತ್ ಸೇರಿಕೊಂಡು ನಾಲ್ಕು ದಶಕ ಕಳೆದಿದೆ. ಸ್ನೇಹಲೋಕ ಚಿತ್ರದಲ್ಲಿ ತಂಗಿ ಮೇಲಿನ ವಾತ್ಸಲ್ಯ ತೋರಿಸಿದ ಈ ನಟ ನಮಗೆ ಸ್ನೇಹ, ರಾಖಿಗಳೊಂದಿಗಿನ ಈ ಆಗಸ್ಟ್ ಎಷ್ಟೆಲ್ಲ ವಿಶೇಷಗಳನ್ನು ತಂದಿದೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಆಗಸ್ಟ್ ನಿಮಗೇಕೆ ಅಷ್ಟೊಂದು ವಿಶೇಷವೆನಿಸುತ್ತದೆ?
ಆಗಸ್ಟ್ ಅಂದ್ರೆ ನನಗೆ ವಿಶೇಷ ಸಂಭ್ರಮ. ನಿಮಗೆಲ್ಲ ಗೊತ್ತಿರುವಂತೆ ನನ್ನ ಹೆಂಡ್ತಿ ಉತ್ತರ ಭಾರತೀಯಳು. ಹಾಗೆ ರಾಖಿ ಹಬ್ಬವನ್ನು ಬಹಳ ಹಿಂದಿನಿಂದಲೇ ಆಚರಿಸುತ್ತಿರುವ ಫ್ಯಾಮಿಲಿ ನಂದು. ನನ್ನ ಮಗಳು ಮಗ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಕಸಿನ್ಸ್ ಬರುತ್ತಾರೆ. ಕಳೆದ ವಾರ ಫ್ರೆಂಡ್‌ಶಿಫ್ ಡೇನೂ ಆಯ್ತು. ಕನ್ನಡ ಸಿನೆಮಾ ಲೋಕದಲ್ಲಿ ನಾನೊಬ್ಬ ಸ್ನೇಹಿತನಾಗಿಯೇ ಜನಪ್ರಿಯಗೊಂಡವನು. ನಮ್ಮೂರ ಮಂದಾರ ಹೂವೇ, ಆಪ್ತಮಿತ್ಪಸ ಅಮೆರಿಕಾ ಅಮೆರಿಕಾ ಎಲ್ಲವೂ ಸ್ನೇಹದಲ್ಲಿ ತ್ಯಾಗಿಯೆಂಬ ಇಮೇಜ್‌ಗೆ ಒತ್ತು ನೀಡಿದ ಪಾತ್ರಗಳು. ನಿಜ ಜೀವನದಲ್ಲಿಯೂ ನನ್ನ ಬಾಲ್ಯದ ಸ್ನೇಹಿತರೊಂದಿಗೆ ಇಂದಿಗೂ ಬಾಂಧವ್ಯವಿದೆ. ಅವರಲ್ಲೊಬ್ಬಾತ ಚಿಕಾಗೋದಲ್ಲಿ ಡಾಕ್ಟರು, ಇನ್ನೊಬ್ಬ ಲಂಡನ್‌ನಲ್ಲಿ ರೇಡಿಯೋಲಜಿಸ್ಟ್ ಮತ್ತೋರ್ವ ಟೆಕ್ಸಾಸ್‌ನಲ್ಲಿ ಇಂಜಿನಿಯರ್. ಆದರೆ ಕನಿಷ್ಠ 2 ವರ್ಷಕ್ಕೊಮ್ಮೆ ನಾವು ಭೇಟಿಯಾಗುತ್ತೇವೆ. ಅಲ್ಲಿ ಯಾರನ್ನೂ ಪರಸ್ಪರ ಇಂಪ್ರೆಸ್ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ. ಅಂಥದೊದ್ದು ಭೇಟಿಯೇ ತುಂಬಾನೇ ಟೆನ್ಶ್‌ನ್ ಫ್ರೀಯಾಗಿಸುತ್ತದೆ. ಇವೆಲ್ಲದರ ಜೊತೆಗೆ ನಾನು ಒಂದು ಒಳ್ಳೆಯ ಉದ್ದೇಶ ಹೊಂದಿರುವ ನನ್ನ ನಿರೂಪಣೆಯಲ್ಲಿನ ವೀಕೆಂಜ್ ವಿಥ್ ರಮೇಶ್ ಎಂಬ ಕಿರುತೆರೆ ಕಾರ್ಯಕ್ರಮದ ಆರಂಭವೂ ಇದೇ ತಿಂಗಳಿನಿಂದ ಆರಂಭವಾಗಿದೆ. ಮಾತ್ರವಲ್ಲ ನಾನು ನಿರ್ದೇಶಿಸುತ್ತಿರುವ ತುಳು ಚಿತ್ರದ ಚಿತ್ರೀಕರಣ ಕೂಡಾ ಕಳೆದವಾರ ಪೂರ್ತಿಯಾಗಿದ್ದು ಖುಷಿ ತಂದಿದೆ.
ನಿಮ್ಮ ನಿರ್ದೇಶನಗ ಉತ್ತಮ ವಿಲನ್ ಚಿತ್ರದ ಬಗ್ಗೆ ಹೇಳಿ
ಉತ್ತಮ ವಿಲನ್ ಎಂಬ ಹೆಸರನ್ನು ನಿಮ್ಮ ನಿರೀಕ್ಷೆಯಂತೆ ಚಿತ್ರದ ಪ್ರಧಾನ ಪಾತ್ರಧಾರಿಯ ಸ್ವಭಾವವನ್ನು ಸೂಚಿಸಿ ಇರಿಸಲಾಗಿದೆ. ರಿಯಲ್ ಲೈಫ್‌ನಲ್ಲಿ ಹಂಡ್ರೆಡ್ ಪರ್ಸೆಂಟ್ ಉತ್ತಮನಾಗಿರೋನು ಅಥವಾ ವಿಲನ್ ಆಗಿರೋನು ಯಾರೂ ಇಲ್ಲ. ಎಲ್ಲರೂ ಉತ್ತಮ ವಿಲನ್‌ಗಳೇ. ತುಳುನಾಡಿನಲ್ಲಿ ಚಿತ್ರದ ಟೈಟವ್ ಎಷ್ಟೊಂದು ಪಾಪ್ಯುಲರ್ ಆಗಿಬಿಟ್ಟಿದೆ ಅಂದ್ರೆ ಆಫೀಸ್ಗೋದ್ರೆ ಬಾಸ್‌ನನ್ನು ಉತ್ತಮ ವಿಲನ್ ಅಂತಾರೆ. ಮನೇಲಿದ್ರೆ ತಂದೆಯನ್ನು ಉತ್ತಮ ವಿಲನ್ ಅನ್ನೋಕೆ ಶುರು ಮಾಡಿದ್ದಾರೆ. ಆದ್ರೆ ಅದನ್ನೂ ದಾಟಿದ ಒಂದು ವಿಶೇಷ ಅರ್ಥ ಚಿತ್ರದಲ್ಲಿರೋದನ್ನು ತಿಳಿಯಬೇಕಾದ್ರೆ ನೀವು ಸಿನಿಮಾನೇ ನೋಡ್ಬೇಕು.
ಕಮಲ್‌ಹಾಸನ್‌ರನ್ನು ರಿಮೇಕ್ ಚಿತ್ರವೊಂದರಲ್ಲಿ ಕನ್ನಡದಲ್ಲಿ ನಿರ್ದೇಶಿಸಿರುವ ನಿಮಗೆ ಇದೀಗ ಒರಿಜಿನಲ್ ಚಿತ್ರದಲ್ಲಿ ನಿರ್ದೇಶಿಸಲು ಕಷ್ಟವೆನಿಸಿತೇ?
ರಾಮ ಶ್ಯಾಮ ಭಾಮ ಎಂಬುದು ರಿಮೇಕ್ ಚಿತ್ರ ಮಾತ್ರವಲ್ಲ ; ಅದರ ಪ್ಯಾಟರ್ನೇ ಬೇರೆ. ಆದರೆ ಉತ್ತಮ ವಿಲನ್ ಎಂಬುದು ತುಂಬ ಭಿನ್ನ. ಕಷ್ಟ-ಸುಲಭ ಅನಿಸೋದಕ್ಕಿಂತ ಸಕತ್ ಥ್ರಿಲ್ಲಿಂಗ್ ಇದು ನನಗೆ. ಯಾಕಂದ್ರೆ ರಾಮ ಶ್ಯಾಮ ಭಾಮಕ್ಕಿಂತ ಇಪ್ಪತ್ತುಪಾಲು ಬಿಗ್ ಪ್ರಾಜೆಕ್ಟ್ ಇದು. ಬಜೆಟ್ ವಿಷಯ ಮಾತ್ರವಲ್ಲ, ಕಾನ್ಸೆಪ್ಟು, ಕಾಸ್ಟಿಂಗು ಹೀಗೆ ಎಲ್ಲ ವಿಷಯದಲ್ಲಿಯೂ ದೊಡ್ಡದು. ನನ್ನ ಲೈಫ್‌ನಲ್ಲಿ ಇಷ್ಟು ದೊಡ್ಡ ಚಿತ್ರ ಮೊದಲ ಬಾರಿ ಮಾಡ್ತಿದ್ದೇನೆ. ಕೊರಿಯಾದಿಂದ ಒಬ್ಬ ಮೇಕಪ್‌ಮ್ಯಾನ್. ಜರ್ಮನಿಯ ಸ್ಟಂಟ್ ಮಾಸ್ಟರ್‌ನ್ನು ಕರೆಸಿದ್ದೇವೆ. ಹೀಗೆ ಯಾವುದೇ ಲಿಮಿಟ್ ಇಲ್ಲದ ಮೇಕಿಂಗ್ ಚಿತ್ರದ್ದು.
ಚಿತ್ರದ ಕುರಿತು ಬಿಡಿಸಿಡಬಹುದಾದ ಸ್ವಾರಸ್ಯಕರ ಸಂಗತಿಗಳೇನಾದರೂ...?
ಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಕೆ. ವಿಶ್ವನಾಥ್, ಕಮಲ್‌ಹಾಸನ್ ಮೊದಲಾದವರ ಚಿತ್ರಗಳನ್ನು ಆರಂಭದಿಂದಲೇ ನೋಡಿ ಎಂಜಾಯ್ ಮಾಡಿದವನು ನಾನು. ಅವರೆಲ್ಲರನ್ನು ಒಂದೇ ಚಿತ್ರದಲ್ಲಿ ಕಲ್ಪಿಸುವುದೇ ಸೊಗಸು. ಭಾರತದ ಶ್ರೇಷ್ಠ ನಿರ್ದೇಶಕರ ಪಟ್ಟಿ ಮಾಡಿದಾಗ ಅದರಲ್ಲಿ ಸ್ಥಾನ ಪಡೆಯುವ ಈ ಮೂವರನ್ನು ಒಂದೇ ಫ್ರೇಮ್‌ನಲ್ಲಿ ನಟಿಸುವಂತೆ ಮಾಡಿರುವ ಖುಷಿ ನನ್ನದು. ಜೊತೆಗೆ ಊರ್ವಶಿ, ಜಯರಾಮ್, ಪಾರ್ವತಿ ಹೀಗೆ ತುಂಬ ಮಂದಿ ಕಲಾವಿದರ ದಂಡೇ ಇದೆ.
ಯಾವುದಾದರೂ ಒಂದು ದೃಶ್ಯವನ್ನು ನೀವು ಕಮಲ್‌ಹಾಸನ್‌ಗೆ ನಟಿಸಿ ತೋರಿಸಿದ ಸಂದರ್ಭವಿತ್ತೇ?
ಅವರಿಗೆ ನಟಿಸಿ ತೋರ್ಸೋ ಅವಶ್ಯಕತೆಯಿಲ್ಲ. ಆ್ಯಕ್ಟಿಂಗ್ ಬಗ್ಗೆ ಕಮಲ್ ಸರ್‌ಗೆ ನಾನು ಹೇಳಿ ಕೊಡ್ಬೇಕಾಗಿಲ್ಲ. ಅದ್ಭುತ ಅವರು. ಆದ್ರೆ ಸಿನಿಮಾದಲ್ಲಿ ಏನಾಗುತ್ತೆ ಅಂದ್ರೆ ಎಷ್ಟೇ ದೊಡ್ಡ ಆ್ಯಕ್ಟರ್‌ಗೂ ಕ್ಯಾಮೆರಾ ಕ್ಯಾಮೆರಾನೇ. ಕನ್ನಡಿಯಾಗೋಕೆ ಸಾಧ್ಯವಿಲ್ಲ. ಹಾಗಾಗಿ ಟೇಕ್ ಆದ ತಕ್ಷಣದಲ್ಲಿ ಅವರ ನಟನೆ ಚೆನ್ನಾಗಿತ್ತು ಸಾರ್ ಅನ್ನೋದಕ್ಕಾಗಲೀ ಅಥವಾ ಇದಕ್ಕೆ ಮ್ಯಾಚ್ ಆಗ್ತಿಲ್ಲ ಸಾರ್ ಅನ್ನೋದಕ್ಕಾಗಲೀ ಒಬ್ಬರು ಬೇಕಾಗ್ತಾರೆ. ಅದನ್ನು ನಾನು ಮಾಡಿದ್ದೇನೆ. ಆ್ಯಕ್ಟರ್‌ನ್ನು ನಂಬುವಂಥ ಡೈರೆಕ್ಟರ್ ಅಥವಾ ಡೈರೆಕ್ಟರ್‌ನ್ನು ನಂಬುವಂಥ ಆ್ಯಕ್ಟರ್ ಇದ್ದಾಗ ಆ ಚಿತ್ರ ಚೆನ್ನಾಗಿ ಮೂಡಿ ಬರುತ್ತದೆ. ನಮ್ಮೊಳಗಿನ ಕೆಮಿಸ್ಟ್ರಿ ಚೆನ್ನಾಗಿರೋದರಿಂದಲೇ ಇಷ್ಟು ದೊಡ್ಡ ಚಿತ್ರವನ್ನು ಐದೇ ತಿಂಗಳಲ್ಲಿ ಪೂರ್ತಿಗೊಳಿಸಲು ಸಾಧ್ಯವಾಗಿದೆ.
ನಿರ್ದೇಶಕನಾಗಿ ದೊಡ್ಡ ಹೆಸರು ಮಾಡುವುದರೊಂದಿಗೆ ನಟನೆಗೆ ಬ್ರೇಕ್ ನೀಡುತ್ತೀರಾ?
ಖಂಡಿತಾ ಇಲ್ಲ. ಇದುವರೆಗೆ ನಾನು ನಿರ್ದೇಶಿಸಿದ ಎಲ್ಲ ಚಿತ್ರಗಳಲ್ಲಿಯೂ ನಾನೊಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದೆ. ಆದರೆ ಇದೇ ಮೊದಲ ಬಾರಿಗೆ ಉತ್ತಮ ವಿಲನ್ ಮೂಲಕ ಸಂಪೂರ್ಣವಾಗಿ ನಿರ್ದೇಶಕನಾಗಿ ಮಾತ್ರ ತೊಡಗಿಸಿಕೊಂಡಿದ್ದೇನೆ. ಇದರಲ್ಲಿನ ಜವಾಬ್ದಾರಿ ತುಂಬ ಹೆಚ್ಚಿತ್ತು ಅನ್ನೋದೇ ಅದಕ್ಕೆ ಕಾರಣ. ಒಬ್ಬ ಕಲಾವಿದನಾಗಿ ನಟನೆಯೇ ನನ್ನ ವೃತ್ತಿ. ನಿರ್ದೇಶನಕ್ಕೆ ತೊಡಗಿಸಿಕೊಂಡರೆ ಒಂದು ವರ್ಷಪೂರ್ತಿ ಅದರಲ್ಲೇ ತೊಡಗಿಸಿ ಕೊಳ್ಳಬೇಕಾಗುತ್ತೆ. ಹಾಗಾಗಿ ನಟನಾ ಬದುಕು ಇದ್ದದ್ದೇ.
-ಶಶಿಕರ ಪಾತೂರು