ಶ್ರೀಮಯ್ಯಾ ಎಂಬ ನಟಿ ಕನ್ನಡ ಚಿತ್ರರಂಗದಲ್ಲಿ ನಟಿಯರು 'ಆ ಥರ' ಮೂವ್ ಮಾಡದೇ ಇದ್ರೆ ಅವಕಾಶಗಳೇ ಸಿಗೊಲ್ಲ ಎಂದು ಬಾಂಬ್ ಹಾಕಿದ್ದಾರೆ.
ಆದರೆ ಅಂಥ ಬೇಡಿಕೆ ಇಟ್ಟದ್ದು ಯಾರು ಎಂದು ಹೇಳದೇ ಇಡೀ ಚಿತ್ರ ರಂಗವನ್ನೇ ದೂಷಿಸಿರುವುದರಿಂದ ಬಾಂಬ್ ಹಾಕಿದ್ದಾರೆ ಎನ್ನುವುದಕ್ಕಿಂತ ಇದನ್ನು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದೇ ಹೇಳಬೇಕು. ಅಷ್ಟಕ್ಕೂ ಈ ಶ್ರೀಮಯ್ಯಾ ಅಂದ್ರೆ ಯಾರು ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಯಾಕೆಂದರೆ ಅವಕಾಶಗಳೇ ಸಿಗುತ್ತಿಲ್ಲ ಎಂಬುದೇ ಇವರ ದೂರು. ಆದರೂ ಕಷ್ಟಪಟ್ಟು ಕಲಬೆರಕೆ ಎಂಬ ಚಿತ್ರದಲ್ಲಿ ಅದು ಹೇಗೋ ಅವಕಾಶ ಗಿಟ್ಟಿಸಿದ್ದಾರೆ ಶ್ರೀ. ನಟಿಯರಿಂದ ಇಂಥ ದೂರುಗಳು ಬರೋದು ಚಿತ್ರರಂಗದಲ್ಲಿ ಕಾಮನ್. ಆದರೆ ಯಾರೂ ಕೂಡ ಯಾರತ್ತಲೂ ಬೆರಳು ಮಾಡಿ ತೋರಿಸದೆ ಇಡೀ ಚಿತ್ರರಂಗವನ್ನೇ ದೂರುವುದು ಎಷ್ಟು ಸರಿ?
ಚಿತ್ರರಂಗವನ್ನು ಹಲವು ದಶಕಗಳವರೆಗೆ ಆಳಿದ ಎಷ್ಟೋ ನಟ ನಟಿ, ತಂತ್ರಜ್ಞರು ಇಂದಿಗೂ ಪತ್ರಿಕಾಗೋಷ್ಟಿಗಳಲ್ಲೂ ಬಗ್ಗಿ ವೇದಿಕೆ ಮುಟ್ಟಿ ನಮಸ್ಕರಿಸಿ ಮೇಲೆ ಹತ್ತುವಷ್ಟು ಚಿತ್ರರಂಗದ ಮೇಲೆ ಗೌರವ ಉಳಿಸಿಕೊಂಡಿದ್ದಾರೆ. ಹಾಗಾಗಿ ಒಂದು ಕೊಳೆ ಮನಸ್ಸನ್ನು ನೋಡಿ ಇಡೀ ಚಿತ್ರರಂಗದ ನೈತಿಕತೆಯನ್ನು ಪ್ರಶ್ನಿಸೋದು ಸರಿಯಲ್ಲಿ ಎಂದು ನಟ ಜಗ್ಗೇಶ್ ಮತ್ತು ನಟಿ ತಾರಾ ಹೇಳಿರುವುದು ಸರಿಯಾಗಿಯೇ ಇದೆ. ಕಾಂಪ್ರೋಮೈಸ್ ಆಗದೆ ಯಾರಿಗೂ ಅವಕಾಶ ಸಿಗೋಲ್ಲ ಅನ್ನೋ ಥರ ಶ್ರೀ ಅವರು ಮಾತನಾಡಿರೋದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಿದ್ದರೆ ಇದುವರೆಗೆ ಅವಕಾಶ ಪಡೆದು ಮಿಂಚಿದವರೆಲ್ಲ ಅದೇ ದಾರಿ ಹಿಡಿದೇ ಹೆಸರು ಮಾಡಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ.
ಒಬ್ಬ ನಟಿಯಾಗಿ ನನಗೆ ಅಂಥ ಸನ್ನಿವೇಶ ಯಾವತ್ತೂ ಎದುರಾಗಿಲ್ಲ ಎಂದು ತಾರಾ ಹೇಳಿದ್ದಾರೆ. ತಾರಾ ಒಬ್ಬರೇ ಅಲ್ಲ, ಅಂಥ ಅನೇಕ ನಟಿಯರು ನಮ್ಮ ನಡುವೆ ಇದ್ದಾರೆ. ಅಂಥದ್ದರಲ್ಲಿ ನಿಜವಾದ ಪ್ರತಿಭೆಗೆ ಇಲ್ಲಿ ಬೆಲೆಯಿಲ್ಲ ಎಂಬ ಶ್ರೀ ಅವರ ಮಾತು ಅಸಂಬದ್ಧ ಎನಿಸುತ್ತದೆ. ಅಷ್ಟಕ್ಕೂ ಹೊಸ ಪ್ರತಿಭೆಗಳಿಗೆ ಅವಕಾಶ ಇಲ್ಲ ಎಂದು ಹೇಳಿದ್ದರೆ ಅದು ಸರಿಯಾಗುತ್ತಿತ್ತೇನೋ. ಏಕೆಂದರೆ ಶ್ರೀ ತಾನು ನಿಜವಾದ ಪ್ರತಿಭೆ ಎಂಬುದನ್ನು ಪ್ರೂವ್ ಮಾಡಲು ಅವರಿಗೆ ಇನ್ನೂ ಅವಕಾಶವೇ ಸಿಕ್ಕಿಲ್ಲವಲ್ಲ. ಹಾಗಾಗಿ ತನಗೆ ಆ ಥರ ಬೇಡಿಕೆ ಇಟ್ಟವರು ಯಾರು ಎಂಬುದನ್ನು ಹೇಳುವವರೆಗೂ ಶ್ರೀ ಅವರ ದೂರು ಸತ್ಯವೋ ಸುಳ್ಳೋ ಎಂಬುದು ಗೊತ್ತಾಗುವುದಿಲ್ಲ. ಏಕೆಂದರೆ ಅವಕಾಶ ಸಿಗದೇ ಇದ್ದಾಗ ಅನೇಕ ನಟಿಯರು ಪ್ರಚಾರಕ್ಕಾಗಿ ಇಂಥ ದಾರಿ ತುಳಿದಿರುವ ಉದಾಹರಣೆಗಳೂ ನಮ್ಮಲ್ಲಿವೆ. ಹಾಗಾಗಿ ಶ್ರೀಮಯ್ಯಾ, ತಮಗೆ ನಿಜಕ್ಕೂ ಅಂಥ ಅನುಭವ ಆಗಿದ್ದರೆ ಆ ಹೆಸರು ಹೇಳಿಬಿಡುವುದು ಒಳ್ಳೆಯದು. ಸುಮ್ಮನೆ ಅನಾಮಧೇಯರತ್ತ ಬೆರಳು ತೋರಿಸಿ ಮಾತನಾಡಿದರೆ ಮಾಧ್ಯಮಗಳಲ್ಲಿ ಅದೊಂದು ಸ್ಟೋರಿಯಾಗಿ ಉಳಿಯುತ್ತದಷ್ಟೇ ಹೊರತು, ಇದರ ಹಿಂದಿನ ನಿಜವಾದ ಸ್ಟೋರಿ ಯಾರಿಗೂ ಗೊತ್ತಾಗುವುದಿಲ್ಲ.