ಈ ಚಿತ್ರ ಒಂದು ರೀತಿಯಲ್ಲಿ ಹಲವರಿಗೆ 'ಮತ್ತೆ ಬಂದ್ರು' ಎನ್ನುವ ಹೊಗಳಿಕೆ ಮಾತನ್ನು ದಯಪಾಲಿಸುತ್ತದೆ. ಹೌದು, ತುಂಬಾ ಗ್ಯಾಪ್ ನಂತರ ಸಂಭಾಷಣೆಕಾರ ನಂಜುಂಡ ನಿರ್ದೇಶನಕ್ಕೆ ಬಂದಿದ್ದಾರೆ. ಎಲ್.ಎನ್. ಶಾಸ್ತ್ರಿ ರಾಗಗಳೊಂದಿಗೆ ಮತ್ತೆ ಸಂಗೀತ ನೀಡಲು ಬಂದಿದ್ದಾರೆ. ಫುಲ್ಟೈಮ್ ಗಾಯಕ, ಪಾರ್ಟ್ ಟೈಮ್ ನಟ ರಾಜೇಶ್ ಕೃಷ್ಣನ್ ಈ ಚಿತ್ರದಲ್ಲಿ ನಾಯಕನಾಗುವ ಮೂಲಕ ತುಂಬಾ ವರ್ಷಗಳ ನಂತರ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಚಿತ್ರದ ಹೆಸರು 'ಮೆಲೋಡಿ'. ಇದರ ನಿರ್ಮಾಪಕರು ಎಸ್. ಕೃಷ್ಣಮೂರ್ತಿ. ಚೇತನ್ ಚಿತ್ರದ ಮತ್ತೊಬ್ಬ ನಾಯಕ. ಮಲೆಯಾಳಿ ಹುಡುಗಿ ಕಾರ್ತಿಕಾ ಹಾಗೂ ಅಕ್ಷತಾ ಚಿತ್ರದ ನಾಯಕಿಯರು. ಕಿರುತೆರೆ ನಟಿ ಯಮುನಾ ಶ್ರೀನಿಧಿ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಸುದೀಪ್, ಹಿರಿಯ ನಿರ್ದೇಶಕ ಕೆ.ವಿ. ರಾಜು, ನಿರ್ಮಾಪಕರಾದ ಮುನಿರತ್ನ, ಬಾ.ಮಾ. ಹರೀಶ್, ಬಾ.ಮಾ. ಗಿರೀಶ್ ಮತ್ತಿತರರು ಆಗಮಿಸಿದ್ದರು. ಸುದೀಪ್ ಕ್ಲಾಪ್ ಮಾಡಿದರೆ, ಕೆ.ವಿ.ರಾಜು ಮೊದಲ ದೃಶ್ಯವನ್ನು ನಿರ್ದೇಶಿಸಿದರು. ಕೃಷ್ಣಮೂರ್ತಿ ಅವರಿಗೆ ಇದು ಮೊದಲ ಚಿತ್ರವಾಗಿದ್ದರಿಂದ ಎಲ್.ಎನ್. ಶಾಸ್ತ್ರಿ ಅವರೇ ಮುಂದೆ ನಿಂತು ಈ ಸಿನಿಮಾ ಮಾಡಿಸುತ್ತಿದ್ದಾರೆ. 'ಸೋಷಿಯಲ್ ನೆಟ್ ವರ್ಕ್ ಯುಗದಲ್ಲಿ ಯುವ ಜನಾಂಗ ಯಾವ ರೀತಿ ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದೆ' ಎನ್ನುವುದು ಚಿತ್ರದ ಒಂದು ಸಾಲಿನ ಕಥೆ. ಇಲ್ಲಿ ರಾಜೇಶ್ಕೃಷ್ಣನ್ ಹಾಗೂ ಚೇತನ್ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ರಾಜೇಶ್ ಅವರಿಗೆ ಸೂಕ್ತ ಪಾತ್ರ ಈ ಚಿತ್ರದಲ್ಲಿದೆ ಎನ್ನುವುದು ಅವರ ಮಾತು. ಚಿತ್ರ ಮೆಲೋಡಿಯಾಗುತ್ತದೆ. ಕಾರಣ, ಪ್ರೀತಿ, ಮನಸಿನ ಭಾವನೆಗಳು ಮೆಲೋಡಿಯಾಗಿಯೇ ಇರುತ್ತವೆ ಎಂಬುದು ನಿರ್ದೇಶಕರ ಮಾತು.