ಗಾಂಧಿನಗರ ಹೆಚ್ಚು ಕಮ್ಮಿ ನಟ ಶ್ರೀಮುರಳಿಯನ್ನು ಮರೆತೇ ಬಿಟ್ಟಿತ್ತು. ಆದರೆ, 'ಉಗ್ರಂ' ಮೂಲಕ ಗೆಲುವು 'ನಂದೇ' ಎಂದು ಯಶಸ್ಸಿನ ರೇಸಿನಲ್ಲಿ ಸಾಗುತ್ತಿದ್ದಾರೆ. ಹಾಗೆ ಸೋತು ಗೆದ್ದವರು ಇಲ್ಲಿದ್ದಾರೆ.
ಯಾವುದೋ ಗಳಿಗೆಯಲ್ಲಿ ಸೋಲು ಇವರನ್ನು ಸುನಾಮಿಯಂತೆ ಆವರಿಸಿಕೊಂಡಿತ್ತು. ಒಂದಿಷ್ಟು ಸಿನಿಮಾಗಳು ಕೈಯಲ್ಲಿದ್ದರೂ 'ಗೆಲುವು' ಮಾತ್ರ ಮರುಭೂಮಿಯ ಓಯಸಸ್‌ನಂತೆ. ಬೇರೆಯವರು ಇರಲಿ, 'ನಾವು ಒಂದಲ್ಲ ಒಂದು ದಿನ ಎದ್ದು ಬರುತ್ತೇವೆ' ಎನ್ನುವ ನಂಬಿಕೆ, ಭರವಸೆ ಸ್ವತಃ ಈ ನಟರಿಗೂ ಇರಲಿಲ್ಲವೆನೋ!? ಹೀಗಾಗಿ ಇದ್ದಷ್ಟು ದಿನ ಬಂದ ಸಿನಿಮಾಗಳಲ್ಲಿ ಒಪ್ಪಿಕೊಳ್ಳುತ್ತಲೇ ಒಂದು ಸಣ್ಣ ಯಶಸ್ಸಿಗಾಗಿ ಜಾತಕ ಪಕ್ಷಿಗಳಂತೆ ಕಾದಿದ್ದೇ ಕಾದಿದ್ದು. ಉಹೂಂ, ಏನೇ ಸಾಹಸ ಮಾಡಿದರೂ ಯಶಸ್ಸಿನ ಕುದುರೆ ಇವರ ಮುಂದೆ ಶರಣಾಗಲಿಲ್ಲ. ಈ ನಟರನ್ನು ಕೊನೆಗೂ ಗೆಲವು ಆತ್ಮೀಯವಾಗಿ ಅಪ್ಪಿಕೊಂಡಿದೆ. ಸೋಲಿನ ನಂತರ ಗೆಲುವು ಕಂಡ ಇವರು ಸದ್ಯ ಚಿತ್ರರಂಗದ 'ಬಾದ್‌ಷಾ'ಗಳು.
ಗಾಂಧಿನಗರದ ಮಟ್ಟಿಗೆ ಈ 'ಕಂ ಬ್ಯಾಕ್' ಎನ್ನುವುದು ತುಂಬಾ ಮಹತ್ವ. ಆರಂಭದಲ್ಲಿ ದೊರತ ಗೆಲುವಿಗಿಂತ ನೂರು ಪಟ್ಟು ಜವಾಬ್ದಾರಿ ಹೆಚ್ಚಿಸುವ ಗೆಲುವು ಇದಾಗಿರುತ್ತದೆ. ಹೀಗಾಗಿ ಯಶಸ್ಸಿನ ಜೊತೆಗೆ ಅಂಥ ಜಬಾವ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ನಟ ಶಿವರಾಜ್‌ಕುಮಾರ್ ಅವರನ್ನೇ ತೆಗೆದುಕೊಳ್ಳಿ, ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರದ ನಂತರ ನಟ ಶಿವರಾಜ್‌ಕುಮಾರ್‌ರಿಗೆ ಅಂಥ ಮತ್ತೊಂದು ದೊಡ್ಡ ಹಿಟ್ ಸಿಗಲಿಲ್ಲ. ಚಿತ್ರ- ವಿಚಿತ್ರ ಆ್ಯಂಗಲ್‌ಗಳಲ್ಲಿ ಲಾಂಗು ಜಳಪಿಸಿದರೂ ಹ್ಯಾಟ್ರಿಕ್ ಹೀರೋ ಲಾಂಗ್ ಸದ್ದು ಮಾಡಲಿಲ್ಲ. ಮತ್ತೆ 'ಜೋಗಿ' ಪ್ರೇಮ್ ಅವರೇ ಬಂದು 'ಜೋಗಯ್ಯ' ಅಂದ್ರೂ ಪ್ರೇಕ್ಷಕ ಯಾಕೋ 'ಹೋಗಯ್ಯ' ಅಂದು ಬಿಟ್ಟ. 'ಜೋಗಿ' ನಂತರ ಬಂದ 'ಸತ್ಯ ಇನ್ ಲವ್', 'ಸಂತ', 'ಶಿವ', 'ಚೆಲುವೆಯೇ ನಿನ್ನೇ ನೋಡಲು', 'ಲಕ್ಷ್ಮಿ', 'ಸುಗ್ರೀವ', 'ಅಂದರ್ ಬಾಹರ್' ಮುಂತಾದ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿತ್ತು. ನಿರೀಕ್ಷಿಸಿದಂತೆ ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲಿಲ್ಲ. ಇದರ ನಡುವೆ 'ತಮಸ್ಸು' ಹಾಗೂ 'ಮೈಲಾರಿ' ಚಿತ್ರಗಳು ಕೊಂಚ ರಿಲೀಪ್ ಕೊಟ್ಟರೂ, ಒಬ್ಬ ನಟನಾಗಿ ಶಿವರಾಜ್‌ಕುಮಾರ್ ಅವರಿಗೆ ಸಿಗಬೇಕಾದ ಗೆಲುವು ಸಿಕ್ಕಿದ್ದು ಮಾತ್ರ 'ಭಜರಂಗಿ' ಚಿತ್ರದಲ್ಲಿ. ಹರ್ಷ ನಿರ್ದೇಶನದ ಈ ಚಿತ್ರ ಶಿವರಾಜ್‌ಕುಮಾರ್ ಅವರ ಪಾಲಿಗೆ 'ಕಂ ಬ್ಯಾಕ್' ಎನ್ನುವ ಮುದ್ರೆ ಹಾಗಿದ್ದು ನಿಜ. ಈಗ ಸೆಂಚುರಿ ಸ್ಟಾರ್ ಕೈಯಲ್ಲಿ ಎಂಟು ಚಿತ್ರಗಳಿವೆ.
ಪ್ರೇಮ್ ಅಂದರೆ ಯಾರು? ಅಂತ ಕೇಳುವ ಒಂದು ಕಾಲವಿತ್ತು. ಹೀಗಾಗಿ ಸದಾ ಅವರ ಹೆಸರಿಗೆ 'ನೆನಪಿರಲಿ' ಹೆಸರು ರೇಷನ್ ಕಾರ್ಡ್‌ನಂತೆ ತಗಲಾಕಿಕೊಂಡಿತು. ರತ್ನಜ ಅವರ 'ನೆನಪಿರಲಿ' ಚಿತ್ರದ ಹೊರತಾಗಿ ಪ್ರೇಮ್‌ರನ್ನು ಗುರುತಿಸುವುದಕ್ಕೆ ಆಗಲೇ ಇಲ್ಲ. ಅದೇ ರತ್ನಜ ಮತ್ತು ಪ್ರೇಮ್ ಕಾಂಬಿನೇಷನ್‌ನಲ್ಲಿ ಬಂದ 'ಹೊಂಗನಸು' ಚಿತ್ರ ಕೂಡ ಪ್ರೇಮ್‌ಗೆ ಗೆಲುವಿನ ರುಚಿ ತೋರಿಸಲಿಲ್ಲ. ಒಂದು ಹಂತದಲ್ಲಿ ನಟ ಪ್ರೇಮ್ ಆರಕ್ಕೇರದ, ಮೂರಕ್ಕಿಳಿಯದ ನಟರಾಗಿಯೇ ಇದ್ದು ಬಿಟ್ಟರು. ಆದರೆ, ಯಾವಾಗ ನಿರ್ದೇಶಕ ಆರ್. ಚಂದ್ರು ಕೈಯಲ್ಲಿ 'ಚಾರ್ಮಿನಾರ್' ನಿರ್ಮಾಣವಾಯಿತೊ, ಪ್ರೇಮ್ ಅದೃಷ್ಟ ಕುಲಾಯಿಸಿತು.
ಗಣೇಶ್ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಮಟ್ಟಕ್ಕೆ ಗೆಲುವು ಇವರ ಖಾಸಗಿ ಸೊತ್ತಾಗಿತ್ತು. ಅದು 'ಚೆಲುವಿನ ಚಿತ್ತಾರ', 'ಕೃಷ್ಣ' ಚಿತ್ರಗಳ ತನಕ. ಆದರೆ, ಆ ನಂತರ ಬಂದ 'ಅರಮನೆ', 'ಸರ್ಕಸ್', 'ಬೊಂಬಾಟ್', 'ಸಂಗಮ', 'ಉಲ್ಲಾಸ ಉತ್ಸಾಹ', 'ಮಳೆಯಲಿ ಜೊತೆಯಲಿ', 'ಕೂಲ್', 'ಏನೋ ಒಂಥರಾ', 'ಮದುವೆ ಮನೆ', 'ಶೈಲೂ', 'ಮುಂಜಾನೆ' ಹೀಗೆ ಯಾವ ಚಿತ್ರಗಳೂ ಗೋಲ್ಡ್ ರೇಟನ್ನು ಹೆಚ್ಚಿಸಲಿಲ್ಲ. ಈ ಪೈಕಿ ಕೆಲವು ಚಿತ್ರಗಳು ಗಣೇಶ್ ಅವರನ್ನೇ ಗಾಂಧಿನಗರದಿಂದ ನಾಪತ್ತೆಯಾಗಿಸುವಷ್ಟು ಸೋಲು ಕಂಡವು. ಆದರೆ, ಮಂಜು ಸ್ವರಾಜ್ ನಿರ್ದೇಶನದ 'ಶ್ರಾವಣಿ ಸುಬ್ರಮಣ್ಯ' ಚಿತ್ರ ನಟ ಗಣೇಶ್‌ರಿಗೆ ಮರು ಜೀವ ನೀಡಿತು. ಗಣೇಶ್ ಮತ್ತೆ ಗೋಲ್ಡನ್ ಸ್ಟಾರ್ ಆಗಿ ಗೆಲುವಿನ ನಗೆ ಬೀರುತ್ತಿದ್ದಾರೆ.
ಸೂರಿ ಅವರ 'ದುನಿಯಾ'ದಲ್ಲಿ ಎದ್ದು ಬಂದ ನಟ ವಿಜಯ್. ಈಗಲೂ ಅವರ ಹೆಸರಿಗೆ 'ದುನಿಯಾ' ಚಿತ್ರ ಕಾಯಂ ಪ್ಯಾನ್ ಕಾರ್ಡ್. ಹೊಸ ಚಿತ್ರರಂಗಕ್ಕೆ ಬಂದ ಗೆಲ್ಲಬಹುದು ಎನ್ನುವ ಸಂದೇಶ ತಲುಪಿಸುವಲ್ಲಿ 'ಮುಂಗಾರು ಮಳೆ'ಯಷ್ಟೇ 'ದುನಿಯಾ' ಕೂಡ ಮಹತ್ವದ ಪಾತ್ರ ವಹಿಸಿತು. ಹೀಗೆ ಯಶಸ್ಸಿನ ಹೊಸ ಅಲೆ ಬೀಸಿದ 'ದುನಿಯಾ'ದ ನಾಯಕ ವಿಜಯ್ ಆ ನಂತರ ಅದೇ ಗೆಲುವಿನ ಅಲೆಯನ್ನು ಮುಂದುವರೆಸಿದರೆ ಎಂದರೆ ಇಲ್ಲ ಅಂತಲೇ ಹೇಳಬೇಕು. 'ದುನಿಯಾ' ನಂತರ ಸುಮಾರು 16ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಜಯ್ ನಟಿಸಿದ್ದಾರೆ. ಆದರೆ, ಯಾವ ಚಿತ್ರವೂ ಮೊದಲ ಚಿತ್ರದ ಗೆಲುವನ್ನು ಮೀರಿಸಲಿಲ್ಲ. ಈ ಪೈಕಿ 'ಭೀಮಾತೀರದಲ್ಲಿ' ಚಿತ್ರ ಮಾತ್ರ ಒಂದಿಷ್ಟು ಸೌಂಡು ಮಾಡಿತು. ಆ ನಂತರ ಹೆಚ್ಚು ಸುದ್ದಿ ಮಾಡಿ ನಿರ್ಮಾಪಕನ ಜೇಬು ತುಂಬಿಸಿದ್ದು 'ಜಯಮ್ಮನ ಮಗ' ಚಿತ್ರ. ಈ ಚಿತ್ರದಿಂದ ವಿಜಯ್ ಅವರ 'ದುನಿಯಾ' ಮತಷ್ಟು ಬದಲಾಗಬಹುದೇ ಗೊತ್ತಿಲ್ಲ. ಆದರೆ, ಗೆಲುವು ಮಾತ್ರ 'ಜಯಮ್ಮನ ಮಗ' ಚಿತ್ರದ ಮೂಲಕ ಅವರ ಕೈ ಹಿಡಿದಿದೆ.
'ಉಪ್ಪಿ ಟು' ಮಾಡುವುದರಲ್ಲಿ ಬ್ಯುಸಿಯಾಗಿರುವ ಉಪೇಂದ್ರರಿಗೂ ಮತ್ತು ಗೆಲುವಿಗೂ ಮಾರು ದೂರವಾಗಿ ಯಾವುದೋ ಕಾಲವಾಗಿತ್ತು. 'ಓಂ', 'ಎ', 'ಉಪೇಂದ್ರ'ದಂತ ಚಿತ್ರಗಳನ್ನು ಕೊಟ್ಟ ಉಪೇಂದ್ರ ಸಿನಿಮಾ ಎಂದಾಕ್ಷಣ ಪಕ್ಕಾ 'ಟೋಪಿವಾಲ' ಗುರು ಎನ್ನುವಂತಾಗಿತ್ತು. ಇಂಥ ಗೆದ್ದು ಸೋತ ನಟನಿಗೆ ಮತ್ತೆ ಉಸಿರಾಡುವಂತೆ ಮಾಡಿದ್ದು ಆರ್. ಚಂದ್ರು ನಿರ್ದೇಶನದ 'ಬ್ರಹ್ಮ' ಚಿತ್ರ. ಚಿತ್ರದ ವಿತರಕರು ಹೇಳುವ ಪ್ರಕಾರ 'ಬ್ರಹ್ಮ' ಚಿತ್ರ ಈಗಾಗಲೇ ಕೋಟಿಕೋಟಿ ಹಣ ಬಾಚಿಕೊಂಡಿದೆಯಂತೆ. ಹೀಗಾಗಿ ನಟ ಉಪೇಂದ್ರ ಅವರಿಗೆ ಈಗ ಗೆಲುವಿನ ಕಾಲ ಎನ್ನಬಹುದು.
ಹೀಗೆ ಸೋತು ಗೆದ್ದವರ ಪೈಕಿ ಹೊಸ ಸೇರ್ಪಡೆ ಅಂದರೆ ನಟ ಶ್ರೀಮುರಳಿ. 'ಚಂದ್ರ ಚಕೋರಿ' ನಾಯಕ ಶ್ರೀಮುರಳಿ ಎಲ್ಲಿ ಹೋದರು ಎಂದು ಪ್ರಶ್ನಿಸುವಷ್ಟು ಅವರನ್ನು ಸೋಲು ಆವರಿಸಿಕೊಂಡಿತು. ಮೊದಲ ಚಿತ್ರದ ಹೊರತಾಗಿ ಇಲ್ಲಿತನಕ ಸುಮಾರು 19 ಚಿತ್ರಗಳಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಆದರೆ, ಯಾವ ಚಿತ್ರವೂ ಅವರನ್ನು ಗೆಲುವಿನ ಅಂಗಳದಲ್ಲಿ ನಿಲ್ಲಿಸಲೇ ಇಲ್ಲ. 'ಶ್ರೀಮುರಳಿ ಕನ್ನಡ ಚಿತ್ರರಂಗದಲ್ಲಿ ನಿಲ್ಲೋದೇ ಇಲ್ಲ ಬಿಡಿ' ಎನ್ನುವ ಗಾಳಿ ಸುದ್ದಿಗಳು ಬಲವಾಗಿ ಹರಡುತ್ತಿರುವಾಗಲೇ 'ಉಗ್ರಂ' ಅಪ್ಪಳಿಸಿತು. ಎಲ್ಲ ಕಡೆ ಈಗ 'ಉಗ್ರಂ' ಚಿತ್ರದ್ದೇ ಮಾತು. ನಿಜವಾಗಲೂ 'ಮರುಜನ್ಮ' ಪಡೆದ ನಟ ಶ್ರೀಮುರಳಿ. 'ಮೊದಲ ಬಾರಿಗೆ ಗೆಲುವಿನ ಭಯ ಎದುರಿಸುತ್ತಿದ್ದೇನೆ. ಮುರಳಿ ಸಿನಿಮಾ ಅಂದ್ರೆ ನಾಲ್ಕು ಜನ ಚಿತ್ರಮಂದಿರಕ್ಕೆ ಬರುತ್ತಿರಲಿಲ್ಲ. ಆದರೆ, 'ಉಗ್ರಂ' ಅದನ್ನ ಬದಲಾಯಿಸಿದೆ' ಎನ್ನುತ್ತಾರೆ ಶ್ರೀಮುರಳಿ.
-ಕೇಶವ