ಸಿನಿಮಾ ಲೇಖನ

ಕೌಶಿಕ್ ಕಮಾಲ್

ಮೊದಲ ಚಿತ್ರಕ್ಕೆ ರಾಜ್ಯಪ್ರಶಸ್ತಿ ಪಡೆದುಕೊಂಡ 'ಬಿರ್ಸೆ' ಶ್ರೀನಿವಾಸ್ ಕೌಶಿಕ್‌ರ ಮತ್ತೊಂದು ಚಿತ್ರ ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೀತಿ, ಪ್ರೇಮ, ಸೆಂಟಿಮೆಂಟ್ ಹಾಗೂ ಪಕ್ಕಾ ಫ್ಯಾಮಿಲಿ ಓರಿಯೇಟೆಂಡ್ ಎನಿಸಿಕೊಂಡಿರುವ ಈ ಚಿತ್ರ ನಿರ್ದೇಶಕರ ಮತ್ತೊಂದು ಪ್ರಯೋಗ.

ವಿನೋದ್ ರಾಜ್ ಅಭಿನಯದ, ಲೀಲಾವತಿ ನಿರ್ಮಾಣದಲ್ಲಿ ತಯಾರಾಗಿ ಬಿಡುಗಡೆಯಾದ 'ಯಾರದು?' ಚಿತ್ರದ ಮೂಲಕ ಗಮನ ಸೆಳೆದವರು ನಿರ್ದೇಶಕ ಶ್ರೀನಿವಾಸ್ ಕೌಶಿಕ್. ಒಂದಿಷ್ಟು ಹೊಸ ರೀತಿಯ, ಪ್ರಯೋಗಾತ್ಮಕ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿರುವ ಕೌಶಿಕ್‌ಗೆ ಸಿನಿಮಾ ಭಾಷೆ ಮತ್ತದರ ವ್ಯಾಕರಣ ಚೆನ್ನಾಗಿ ಗೊತ್ತು. ನಾಯಕಿ ಪ್ರಧಾನ ಸಿನಿಮಾ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ದಿನಗಳಲ್ಲಿ ಅಷ್ಟಾಗಿ ಪರಿಚಿತಳಲ್ಲದ ಅಯೇಷಾ ಎನ್ನುವ ಹುಡುಗಿಯನ್ನು ನಾಯಕಿಯನ್ನಾಗಿಸಿ ನಿಜವಾದ ನಿರ್ದೇಶಕ ನಾಯಕ ಎಂಬ ಹೆಗ್ಗಳಿಕೆಯನ್ನು  'ಬೇಟೆ'ಯಾಡಿದವರು ಕೌಶಿಕ್. ಸಾಕಷ್ಟು ಗ್ಯಾಪ್ ತೆಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ 'ಅಂಗಾರಕ' ಚಿತ್ರದ ಮೂಲಕ. ಮತ್ತೊಂದು ಪ್ರಯೋಗವನ್ನು ಪ್ರೇಕ್ಷಕರ ಮುಂದಿಡಲು ತುದಿಗಾಲ ಮೇಲೆ ನಿಂತಿದ್ದಾರೆ.
 ಪ್ರಜ್ವಲ್ ದೇವರಾಜ್ ಹಾಗೂ ಪ್ರಣೀತಾ ಅಭಿನಯದಲ್ಲಿ ಮೂಡಿ ಬಂದಿರುವ 'ಅಂಗಾರಕ'ದ ಮೂಲಕ ಮತ್ತೊಂದು ಇನ್ನಿಗ್ಸ್ ಆರಂಭಿಸಿರುವ ಕೌಶಿಕ್, ಈ ಬಾರಿಗೆ ಗೆದ್ದೇ ಗೆಲ್ಲುವ ನಂಬಿಕೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಮತ್ತಷ್ಟು ಇಂಬು ನೀಡಿರುವುದು ಚಿತ್ರದ ಕಥೆ ಮತ್ತು ಅದರ ಸಂಭಾಷಣಾ ಶೈಲಿ. ಅದೇ ವಿಶ್ವಾಸ, ನಂಬಿಕೆಯಲ್ಲಿ ಅವರು 'ಚಿತ್ರಪ್ರಭ'ದೊಂದಿಗೆ ಮಾತಿಗೆ ಇಳಿದಾಗ...
ಹೌದು, ಅಂಗಾರಕ ಅಂದರೆ ಏನು? ಯಾರು ಇಲ್ಲಿ ಅಂಗಾರಕ?
ಅಂಗಾರಕ ಎನ್ನುವುದು ಕತೆಯ ಒಂದು ಭಾಗ. ಮಂಗಳ ಗ್ರಹವನ್ನು ಅಂಗಾರಕ ಎನ್ನುತ್ತೇವೆ. ಮಾಸ್ ಟೈಟಲ್, ಕಥೆಗೆ ಪೂರಕವಾಗಿರಲಿ ಎನ್ನುವ ಕಾರಣಕ್ಕೆ ಈ ಶೀರ್ಷಿಕೆ ಇಟ್ಟೆ. ಹೀಗಾಗಿ ಕಥೆಯೇ ಇಲ್ಲಿ ಅಂಗಾರಕ.
ನಿಮ್ಮ ವಿಶ್ವಾಸ ಹೆಚ್ಚಿಸಿರುವುದು ಕಥೆಯೋ ನಾಯಕನೋ?
ಇಲ್ಲಿ ನಾಯಕನ ಪಾತ್ರ ಮತ್ತು ಕಥೆ ಎರಡೂ ಮುಖ್ಯ. ಒಂದಕ್ಕೊಂದು ಸಂಬಂಧ ಇದೆ. ಒಳ್ಳೆಯ ಚಿತ್ರಕ್ಕೆ ಒಳ್ಳೆಯ ಕಥೆ ಬೇಕು. ಆ ಕಥೆ ಜನಕ್ಕೆ ತಲುಪಬೇಕು ಅಂದರೆ ನಾಯಕ ಬೇಕು. ಹೀಗಾಗಿ ನಾಯಕ ಮತ್ತು ಕಥೆ ಎರಡೂ ಚಿತ್ರದ ಮುಖ್ಯ ಪಿಲ್ಲರ್‌ಗಳು.

ಪ್ರಜ್ವಲ್ ಚಿತ್ರ ಅಂದರೆ ಗಾಂಧಿನಗರ ಗಂಭೀರವಾಗಿ ಪರಿಗಣಿಸದು. ಆದರೆ, ನೀವು ಅವರನ್ನೇ ನಾಯಕನಾಗಿಸಿದ್ದೀರಿ?
    ನನಗೇನು ಹಾಗನಿಸುತ್ತಿಲ್ಲ. ಅವರವರಿಗೆ ಅವರವರದ್ದೇ ಆದ ಮಾರುಕಟ್ಟೆ ಇರುತ್ತದೆ. ಎಷ್ಟೋ ಬಾರಿ ಚಿತ್ರದ ಸೋಲಿಗೆ ವ್ಯವಸ್ಥೆ ಕೂಡ ಕಾರಣವಾಗಿರುತ್ತದೆ. ಜನಕ್ಕೆ ತಲುಪುವುದಿಲ್ಲ. ನಾವು ಪ್ರಜ್ವಲ್‌ರನ್ನು ಆಯ್ಕೆ ಮಾಡಿಕೊಂಡಾಗ ಅವರ ಕೈಯಲ್ಲಿ ನಾಲ್ಕು ಚಿತ್ರಗಳಿದ್ದವು. ಸೋಲು, ಗೆಲುವು ಬಂದು ಹೋಗುತ್ತವೆ. ಅದನ್ನೇ ಲೆಕ್ಕ ಹಾಕಿಕೊಂಡು ನಾಯಕನ ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಪ್ರಜ್ವಲ್ ಚಿತ್ರದ ಕಥೆಗೆ ಸೂಕ್ತ ನಟ.

ಇಷ್ಟಕ್ಕೂ ಈ ಚಿತ್ರಕ್ಕೆ ಪ್ರಜ್ವಲ್ ಅವರೇ ನಾಯಕನಾಗಿ ಯಾಕೆ ಬೇಕಿತ್ತು?
    ಇಮೇಜ್‌ಗಳ ಒಳಗೆ ಬಂದಿಯಾಗಿರುವ ನಟ ಈ ಚಿತ್ರಕ್ಕೆ ಬೇಕಿರಲಿಲ್ಲ. ಯಾಕೆಂದರೆ ಇಮೇಜ್ ಇರೋ ಹೀರೋಗಳಿದ್ದರೆ ಅವರಿಗೆ ತಕ್ಕಂತೆ ಕಥೆ ಮಾಡಬೇಕು. ಕಥೆ ಎಷ್ಟೇ ಹೊಸತಿದ್ದರೂ ಅದು ನಾಯಕನ ಇಮೇಜ್ ಸುತ್ತಲೇ ಗಿರಕಿ ಹೊಡೆಯುತ್ತದೆ. ಆದರೆ, ಇಲ್ಲಿ ಪ್ರಜ್ವಲ್ ಕಥೆಗೆ ಸೂಕ್ತ ನಾಯಕ. ಈ ಎಲ್ಲ ಕಾರಣಕ್ಕೆ ಪ್ರಜ್ವಲ್ ಅವರೇ ಈ ಚಿತ್ರಕ್ಕೆ ಬೇಕಿತ್ತು.

ಚಿತ್ರದ ಇತರೆ ಕಲಾವಿದರ ಕುರಿತು ಹೇಳಿ?
ಪ್ರಣೀತಾ, ಹಾರ್ದಿಕಾ ಶೆಟ್ಟಿ, ಜೈಜಗದೀಶ್, ಅವಿನಾಶ್, ಮುನಿ, ಕುರಿ ಸುನೀಲ್, ಪಾಪಾ ಪಾಂಡು ಚಿದಾನಂದ್ ಹೀಗೆ ಬಹಳಷ್ಟು ಕಲಾವಿದರು ಅಭಿನಯಿಸಿದ್ದಾರೆ. ಎಲ್ಲರ ಪಾತ್ರಗಳಿಗೂ ಮಹತ್ವ ಇದೆ. ಪ್ರತಿ ಪಾತ್ರವೂ ಎಂಟ್ರಿಯಾದ ಕೂಡಲೇ ಕಥೆ ಹೊಸ ತಿರುವು ತೆಗೆದುಕೊಳ್ಳುತ್ತದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ. ಗೆಲುವಿನ ರೇಸ್‌ನಲ್ಲಿರುವ ಸಂಗೀತ ನಿರ್ದೇಶಕ ಆತ. ಆದರೆ, ಪ್ರಮೋಷನ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಯಾಕೆ?
    ಇದನ್ನು ಬೇರೆ ರೀತಿ ಇಷ್ಯು ಮಾಡುವುದು ಬೇಡ. ನಾವು ಪ್ರತಿ ಬಾರಿ ಚಿತ್ರದ ಕಾರ್ಯ ಆರಂಭಿಸಿದಾಗಲೂ ಅರ್ಜುನ್ ಹೊರಗೆ ಇದ್ದರು. ಇದು ಕಾಕತಾಳೀಯ. ಹೀಗಾಗಿ ಅವರು ಬರಲ್ಲ ಅಂತ ಏನು ಹೇಳಿರಲಿಲ್ಲ. ವೈಯಕ್ತಿಕವಾಗಿ ನಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ.

ಸರಿ, ಚಿತ್ರದ ಕಥೆ ಏನು?
ನಂಬಿಕೆ, ಆಚರಣೆಗಳು ಮುಖ್ಯವಲ್ಲ. ಪುಸ್ತಕಗಳು ಹೇಳಿರುವುದು ಕೂಡ ಸತ್ಯವಲ್ಲ. ಮಾನವೀಯ ಮೌಲ್ಯಗಳು ಮತ್ತು ಮನುಷ್ಯತ್ವಕ್ಕೆ ಬೆಲೆ ಕೊಡಬೇಕು. ಇಲ್ಲಿ ಭವಿಷ್ಯ, ಶಾಸ್ತ್ರ, ಸಂಪ್ರದಾಯಗಳು ಹೇಗೆ ದುರ್ಬಳಕೆಯಾಗುತ್ತಿವೆ ಎಂಬುದನ್ನು ಇಬ್ಬರ ಪ್ರೇಮಿಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇನೆ.

ನಿಮ್ಮ ಚಿತ್ರವನ್ನು ಯಾಕೆ ನೋಡಬೇಕು?
    ಸತ್ಯ ಕಲ್ಪನೆಗಳಿಗಿಂತ ವಿಚಿತ್ರವಾಗಿದೆ ಎನ್ನುವುದನ್ನು ತಿಳಿಯಲು. ಹಾಗೆ ನೂರಕ್ಕೆ ನೂರು ಪಾಲು ಇದು ಮನರಂಜನೆಯ ಸಿನಿಮಾ ಎಂಬ ಕಾರಣಕ್ಕೆ 'ಅಂಗಾರಕ' ಚಿತ್ರವನ್ನು ನೋಡಬಹುದು.

    ಚಿತ್ರದ ಹೈಲೈಟ್‌ಗಳೇನು?
    ಅರ್ಜುನ್ ಜನ್ಯರ ಸಂಗೀತ, ಹಾಡು, ಸೆಂಟಿಮೆಂಟ್, ಪ್ರಜ್ವಲ್ ದೇವರಾಜ್‌ರ ಅಭಿನಯ ಮತ್ತು ಮನರಂಜನೆ.

ಎಲ್ಲೆಲ್ಲಿ ಚಿತ್ರೀಕರಣ ಮಾಡಿದ್ದೀರಿ?
    ಹೆಚ್ಚಿನ ಭಾಗ ಬೆಂಗಳೂರಿನಲ್ಲೇ ಚಿತ್ರೀಕರಿಸಿದ್ದೇವೆ. ಉಳಿದಂತೆ ಶ್ರೀರಂಗಪಟ್ಟಣ, ಮೈಸೂರು, ದೇವರಾಯನ ದುರ್ಗ ಹಾಗೂ ಎರಡು ಹಾಡುಗಳನ್ನು ಬ್ಯಾಂಕಾಕ್ ಮತ್ತು ಪಟ್ಟಾಯದಲ್ಲಿ ಚಿತ್ರೀಕರಿಸಿದ್ದೇವೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!