ಚಿತ್ರದ ನಾಯಕ ಒಬ್ಬನೇ. ಆದರೆ, ನಾಯಕಿಯರು ಮಾತ್ರ ನಾಲ್ವರು. ಈ ಕಾರಣಕ್ಕಾದರೂ ನಾಯಕನ ಪಾಲಿಗೆ ಅದು ಲೈಫ್ ಇಸ್ ಬ್ಯೂಟಿಫುಲ್. ಅಂದಹಾಗೆ ಹೀಗೆ ಒಬ್ಬ ನಾಯಕನಿಗೆ ನಾಲ್ವರು ನಾಯಕಿಯರನ್ನು ಕರುಣಿಸಿರುವ ಚಿತ್ರದ ಹೆಸರು 'ಲೈಫ್ ಇಸ್ ಬ್ಯುತಿಫುಲ್'. ನಾಯಕನಾಗಿ ಕಾಣಿಸಿಕೊಳ್ಳುತ್ತಿರುವವನು ರಾಜೀವ್. ಕೆಲ ಚಿತ್ರಗಳ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಾಜೀವ್, ಢಮೊದಲ ಬಾರಿಗೆ ನಾಯಕನಾಗಿದ್ದಾನೆ. ಇವರ ಲೈಫ್ ಅನ್ನು ಬ್ಯೂಟಿಫುಲ್ ಮಾಡಿರುವವರು ನಾಗೇಂದ್ರ. ಇವರೇ ನಿರ್ದೇಶಕರು. ಇದು ನಾಗೇಂದ್ರ ಪಾಲಿಗೂ ಮೊದಲ ನಿರ್ದೇಶನ.
ಇತ್ತೀಚೆಗೆ ಮುಹೂರ್ತ ನಡೆಯಿತು. ಹೈದರಾಬಾದ್‌ನ ಸಮತಾ, ದೆಹಲಿಯ ಎಂಜಿಲಾ, ಬೆಂಗಳೂರಿನ ಭಾವನಾ ಹಾಗೂ ಮುಂಬೈನ ಶರಣ್ಯಾ ನಾಯಕಿಯರು. ಇ.ಎಚ್.ಎಸ್. ಪ್ರಸಾದ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಸಂದೀಪ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನಾಗೇಂದ್ರ ವೃತ್ತಿಯಲ್ಲಿ ಗುತ್ತಿಗೆದಾರ. ಹೈದರಾಬಾದ್‌ನಲ್ಲಿ ನೆಲೆಸಿದ್ದರೂ ಮೂಲತಃ ಬೆಂಗಳೂರಿಗರು. ಕೆಲ ವರ್ಷಗಳಿಂದ ಸಿಲಿಕಾನ್ ಸಿಟಿಯಲ್ಲೇ ತಮ್ಮ ಗುತ್ತಿಗೆ ಕಾರ್ಯ ಮುಂದುವರಿಸಿರುವ ನಾಗೇಂದ್ರ, ಸಿನಿಮಾ ಮಾಡುವ ಯೋಚನೆ ಬಂದಿದ್ದೇ ತಡ ಕತೆ ಸಿದ್ಧ ಮಾಡಿಕೊಂಡು ಬಂದು ರಾಜೀವ್ ಜತೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನಲ್ಲಿ ಕೆಲ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಇದೆ. ಈ ಚಿತ್ರದ ಮೂಲಕ ಸಂಬಂಧಗಳ ಮಹತ್ವ ಹೇಳಲು ಹೊರಟಿದ್ದಾರಂತೆ. ನಾಯಕ ಪ್ರತಿ ಹಂತದಲ್ಲಿ ಪ್ರೀತಿ ಮತ್ತು ಬದುಕನ್ನು ಹುಡುಕುತ್ತ ಹೋಗುತ್ತಾನೆ. ಆದರೆ, ಆತ ನಿರೀಕ್ಷಿಸಿದಂತೆ ಲೈಫ್ ಇರುತ್ತದೆಯೇ ಎಂಬುದು ಚಿತ್ರದ ತಿರುಳು.
ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. 'ಇಲ್ಲಿವರೆಗೂ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ತೆಲುಗಿನಲ್ಲೂ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅಲ್ಲಿ ವಿಲನ್ ಪಾತ್ರ ಮಾಡಿದ್ದ ನನಗೆ ನಾಗೇಂದ್ರ ಪರಿಚಯವಾದರು. ಒಳ್ಳೆಯ ಕಥೆ ಅನ್ನಿಸಿ ನಾಯಕನಾಗಿ ಅಭಿನಯಿಸಲು ಒಪ್ಪಿಕೊಂಡೆ. 2014ಕ್ಕೆ ಇದು ಅದ್ಭುತ ಚಿತ್ರವಾಗಲಿದೆ' ಎಂದರು ರಾಜೀವ್.
ಇನ್ನು ಸಮತಾಗೂ ಇದೇ ಮೊದಲ ಚಿತ್ರ. ಈಕೆ ಚಿತ್ರದ ಮುಖ್ಯ ನಾಯಕಿ. ಗ್ಲಾಮರ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಭಾವನಾಗೂ ಮೊದಲ ಚಿತ್ರವಿದು. ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದಾಳೆ. ಚಿತ್ರದಲ್ಲಿ ಈಕೆಯದ್ದು ಮನೆ ಮಗಳ ಪಾತ್ರ. ನಾಲ್ಕು ನಾಯಕಿರ ಪೈಕಿ ಮತ್ತಿಬ್ಬರು ಗೈರು ಹಾಜರಾಗಿದ್ದರು.