ಚಿತ್ರವೊಂದರ ಯಶಸ್ಸು ಅದರ ಟ್ರೈಲರ್ನ ಯಶಸ್ಸನ್ನು ಅವಲಂಬಿಸಿದೆಯಾ? ಸದ್ಯದ ಟ್ರೆಂಡ್ ನೋಡಿದರೆ ಹೌದು ಅನ್ನಲೇಬೇಕಿದೆ. ಟ್ರೈಲರ್ ಒಂದು ಚಿತ್ರವನ್ನು ಗೆಲ್ಲಿಸದೇ ಇರಬಹುದು. ಆದರೆ ಓಪನಿಂಗ್ ಕೊಡುವಲ್ಲಿ ಖಂಡಿತ ಪಾತ್ರವಹಿಸುತ್ತದೆ. ಟ್ರೈಲರ್ಗಳು ಟಾಕೀಸಲ್ಲಿ ರಿಲೀಸಾಗುತ್ತಿವೆ. ಯೂಟ್ಯೂಬಿನಲ್ಲಿ ಲಕ್ಷಾಂತರ ಹಿಟ್ ಗಳಿಸುತ್ತಿವೆ. ಯೂಟ್ಯೂಬ್ ಹಿಟ್ ಲೆಕ್ಕ ಆಧರಿಸಿ ಚಿತ್ರದ ಮೇಲಿನ ನಿರೀಕ್ಷೆ ಅಳೆಯಲಾಗುತ್ತಿದೆ. ಆ ಕಾರಣಕ್ಕೆ ಯೂಟ್ಯೂಬ್ಹಿಟ್ ಸಂಖ್ಯೆಯನ್ನು ಏರಿಸುವ ವಾಮಮಾರ್ಗಗಳೂ ಹುಟ್ಟಿಕೊಳ್ಳುತ್ತಿವೆ.
ಆದರೆ ಉಳಿದವರು ಕಂಡಂತೆ, ಉಗ್ರಂ ಮುಂತಾದ ಕೆಲ ಚಿತ್ರದ ಟ್ರೈಲರ್ಗಳು ನಿಜಕ್ಕೂ ಪ್ರೇಕ್ಷಕರಿಂದ ಹಾಗೂ ಸಿನಿಮಾವಲಯದವರಿಂದ ಪ್ರಾಮಾಣಿಕ ಹೊಗಳಿಕೆ ಪಡೆದುಕೊಂಡು ನಿರೀಕ್ಷೆ ಹೆಚ್ಚಿಸಿವೆ. ಮುರಳಿ ಅಭಿನಯದ ಉಗ್ರಂ ಚಿತ್ರದ ಟ್ರೈಲರನ್ನಂತೂ ನಟ ಪುನೀತ್ ಆದಿಯಾಗಿ ಇಡೀ ಇಂಡಸ್ಟ್ರಿ ಹಾಗೂ ಸಿನಿಪ್ರಿಯರು ಹಾಲಿವುಡ್ ಸಿನಿಮಾದಂತಿದೆ ಎಂದೆಲ್ಲಾ ಹೊಗಳಿದ್ದಾರೆ. ಚಕಚಕನೆ ಸರಿದಾಡುವ ದೃಶ್ಯಗಳು ಟ್ರೈಲರ್ನ ಫೋರ್ಸ್ ಹೆಚ್ಚಿಸಿ ಚಿತ್ರ ಕೂಡ ಅದೇ ಮಾದರಿಯಲ್ಲಿ ಸ್ಪೀಡಾಗಿ ಇರಬಹುದಾ ಎಂಬ ನಿರೀಕ್ಷೆ ಹುಟ್ಟಿಸಿದೆ. ಟ್ರೈಲರ್ ನೋಡಿದವರು ಅದರ ಸಂಕಲನ ಮೆಚ್ಚಿಮಾತಾಡುತ್ತಿರುವುದು ವಿಶೇಷ.
ಟ್ರೈಲರ್ನಿಂದಲೇ ಬೇಡಿಕೆ ಹೆಚ್ಚಿಸಿಕೊಂಡಿರುವ ಅನುಭವಿ ಕತ್ತರಿವೀರ ಶ್ರೀಕಾಂತ್ರೊಂದಿಗಿನ ಮಾತುಕತೆಯ ಟ್ರೈಲರ್ ಇಲ್ಲಿದೆ.
ಚಿತ್ರ ಹಳೆಯದಾದರೂ ಹೊಸ ಹೆಸರಿಟ್ಟುಕೊಂಡು ಟ್ರೈಲರ್ ಬರ್ತಾ ಇದ್ದ ಹಾಗೆ ಇಷ್ಟೊಂದ್ ಸುದ್ದಿ ಮಾಡಿದೆ. ಇದು ಬರೀ ಟ್ರೈಲರ್ರಲ್ಲಿ ನಿರೀಕ್ಷೆ ಹುಟ್ಟಿಸೋ ಗಿಮ್ಮಿಕ್ಕಲ್ಲ ತಾನೇ?ಖಂಡಿತಾ ಗಿಮಿಕ್ಕಿಲ್ಲ. ಟ್ರೈಲರ್ ಮಾತ್ರ ಅಲ್ಲ. ಚಿತ್ರ ಕೂಡ ಅಷ್ಟೇ ಸ್ಪೀಡ್ ಹಾಗೂ ಹೊಸ ಮಾದರಿಯಲ್ಲಿದೆ. ಒಂದು ಮಾತು. ಚಿತ್ರ ತಡವಾಗಿದ್ದರೂ ಇದು ಹಳೇ ಸರಕಲ್ಲ. ಇನ್ನಷ್ಟು ಹೊಸ ಐಡಿಯಾಗಳೊಂದಿಗೆ ಅಪ್ಡೇಟಾಗಿ ಬಂದಿದ್ದೇವೆ. ಈಗಿರುವ ಹೊಸ ಅಲೆಗೆ ಪೂರಕವಾಗಿಯೇ ಇದೆ ಎಂಬ ಗ್ಯಾರಂಟಿ ಕೊಡಬಲ್ಲೆ.
ಎಡಿಟಿಂಗ್ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ. ಟ್ರೈಲರ್ ಯಶಸ್ಸಿನಲ್ಲಿ ನಿಮ್ಮ ಪಾತ್ರ ಏನು?
ಉಗ್ರಂ ನನ್ನ ವೃತ್ತಿಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಲಿದೆ. ಈ ಚಿತ್ರ ನೋಡಿದ ಮೇಲೆ ಚಿತ್ರದ ಎಡಿಟಿಂಗ್ ನೀವೇ ಮೆಚ್ತೀರ. ರೆಗ್ಯುಲರ್ ಚಿತ್ರಗಳಲ್ಲಿ 60-65 ಸೀನ್ಗಳಿದ್ದರೆ ಉಗ್ರಂನಲ್ಲಿ 220 ಸೀನ್ಸ್ ಇವೆ. ಅವಿಷ್ಟೂ ಕೇವಲ ಎರಡೂಕಾಲು ಗಂಟೆ ಅವಧಿಯಲ್ಲಿ ಬಂದು ಹೋಗುತ್ತವಂದ್ರೆ ಚಿತ್ರದ ಸ್ಪೀಡ್ ಮತ್ತು ಫೋರ್ಸ್ಹೇಗಿರಬಹುದು ಊಹಿಸಿ. ನಿರ್ದೇಶಕರೊಂದಿಗೆ ಕೂತು ಚರ್ಚಿಸಿ ನನ್ನೆಲ್ಲ ಕ್ರಿಯೇಟಿವಿಟಿ ಬಳಸಿ ಈ ಚಿತ್ರಕ್ಕೆ ಎಡಿಟಿಂಗ್ ಮಾಡಿದ್ದೇನೆ.
ಇದೇ ನಿಮ್ಮ ಮೊದಲ ಸಿನಿಮಾನಾ?
ಇಲ್ಲ, ಈ ಮೊದಲು ಆಟೋ, ಭದ್ರ, ಮುರಳಿ ಮೀಟ್ಸ್ ಮೀರಾ ಚಿತ್ರಗಳ ಸಂಕಲನ ಮಾಡಿದ್ದೇನೆ. ಚತುರ್ಭು ಅಂತೊಂದು ಹೊಸ ಚಿತ್ರ ಮುಗಿಸಿದ್ದೇನೆ. ಅದರ ಟ್ರೈಲರ್ ಕೂಡ ಸದ್ಯದಲ್ಲಿ ಬರಲಿದೆ. ಉಗ್ರಂನಷ್ಟೇ ಅದ್ಭುತವಾಗಿ ಬಂದಿದೆ.
ಟಿವಿ ಸೀರಿಯಲ್ ಎಡಿಟ್ ಮಾಡ್ತಾ ಇದ್ದ ನಿಮಗೆ ಸಿನಿಮಾ ಎಡಿಟಿಂಗ್ ಚಾಲೆಂಜಿಂಗ್ ಅನಿಸಲಿಲ್ವ?
ಇದು ಕ್ರಿಯೇಟಿವಿಟಿಗೆ ಸಂಬಂಧಪಟ್ಟ ವಿಭಾಗ. ಹಾಗಾಗಿ ವ್ಯತ್ಯಾಸ ಅನಿಸೋದಿಲ್ಲ. ಆದರೆ ಸಿನಿಮಾ ಎಡಿಟಿಂಗ್ ತುಂಬಾ ಥ್ರಿಲ್ ಕೊಡುತ್ತೆ. ನನ್ನ ಇಪ್ಪತ್ತೆರಡು ವರ್ಷಗಳ ಎಡಿಟಿಂಗ್ ಅನುಭವ ಹಾಗೂ ಸಾವಿರಾರು ಸಿನಿಮಾಗಳನ್ನು ನೋಡಿ ಕಲಿತಿರುವ ಪಾಠ ನನಗೆ ಈ ಸಿನಿಮಾ ಎಡಿಟಿಂಗ್ಗೆ ಸಹಕಾರಿ ಆಗಿದೆ.
ಇಪ್ಪತ್ತೆರಡು ವರ್ಷಗಳಿಂದ ಎಡಿಟರ್ ಆಗಿದ್ದೀರಾ?
ಹೌದು. ದಶಕಗಳ ಹಿಂದೆ ಬಂದ ಚಂದನ ಟಿವಿಯ ಜನಪ್ರಿಯ ಕಾರ್ಯಕ್ರಮ 'ಸಿರಿಗಂಧ'ಕ್ಕೂ ನಾನೇ ಎಡಿಟರ್. ಆರ್ಯಭಟ ಪ್ರಶಸ್ತಿ ಕೂಡ ಬಂದಿದೆ.
ಎಡಿಟಿಂಗ್ ಅನ್ನೋದು ತೆರೆಮರೆಯಲ್ಲಿ ಉಳಿದು ಹೋಗುವ ಕೆಲಸ ಅಲ್ವಾ?
ಹೌದು. ಕೆಲವು ತಾಂತ್ರಿಕ ವಿಭಾಗಗಳೇ ಹಾಗೆ. ಇವೆಲ್ಲ ನಿರ್ದೇಶಕರಿಗೆ ಪೂರಕ ಕೆಲಸಗಳು. ಹಾಗಾಗಿ ಆ ಬಗ್ಗೆನೋ ರಿಗ್ರೆಟ್ಸ್.
ಚಿತ್ರ ಲ್ಯಾಗ್ ಆಗಿದೆ ಅಂತ ಪ್ರೇಕ್ಷಕ ಗೊಣಗಿದಾಗ, ವಿಮರ್ಶೆಗಳಲ್ಲಿ ಬರೆದಾಗ ಹಾಗೂ ರಿಲೀಸಾದ ಮೇಲೆ ಟ್ರಿಮ್ ಮಾಡಬೇಕಾದ ಪ್ರಸಂಗ ಬಂದಾಗ ಏನನಿಸುತ್ತದೆ?
ನಮ್ಮ ಕ್ರಿಯಾಶೀಲತೆ ಮತ್ತು ಐಡಿಯಾಗಳನ್ನು ಎಡಿಟಿಂಗ್ನಲ್ಲಿ ಬಳಸಿದರೂ ಕೂಡ ಅಂತಿಮ ಪ್ರಾಡಕ್ಟ್ ನಿರ್ದೇಶಕರ ಪರಿಕಲ್ಪನೆಯಂತೆಯೇ ಮಾಡಿರುತ್ತೇವೆ. ಹಾಗಾಗಿ ಎಡಿಟಿಂಗ್ ಚೆನ್ನಾಗಿದೆ ಎಂಬ ಹೊಗಳಿಕೆ ಬಂದರೂ, ನೀವಂದಂತೆ ತೆಗಳಿಕೆ ಬಂದರೂ ಅದು ನಿರ್ದೇಶಕರಿಗೆ ಸಲ್ಲಬೇಕಾದ್ದು.
ಎಡಿಟಿಂಗ್ ಅನುಭವ ಇದ್ದವನು ಒಳ್ಳೆಯ ನಿರ್ದೇಶಕ ಆಗಬಹುದೇ? ಆ ಬಗ್ಗೆ ಯೋಚಿಸಿಲ್ವಾ?
ಹೌದು ಈಗ ಸುಮಾರು ಎಡಿಟರ್ಸ್ ನಿರ್ದೇಶನ ಮಾಡ್ತಿದ್ದಾರೆ. ಜಾಕ್ಸನ್ ಮಾಡ್ತಿರೋ ಸನತ್, ಜಯಮ್ಮನ ಮಗ ಮಾಡಿರೋ ವಿಕಾಸ್ ಎಲ್ಲ ನನ್ನೊಂದಿಗೆ ಎಡಿಟಿಂಗ್ ಕಲಿತವರೇ. ಮುಂದೊಮ್ಮೆ ನನಗೂ ನಿರ್ದೇಶನ ಮಾಡುವ ಬಯಕೆ ಇದೆ. ಕಾಲ ಕೂಡಿ ಬರಬೇಕಷ್ಟೆ.
ಕತ್ತರಿಸಿ ಜೋಡಿಸುವುದು ತಮ್ಮ ಟೈಲರ್ಮೇಡ್ ಕೆಲಸ ಎಂಬಂತೆ ಶ್ರದ್ಧೆಯಿಂದ ಹಾಗೂ ಕ್ರಿಯಾಶೀಲತೆಯಿಂದ ಮಾಡಿಕೊಂಡು ಹೋಗುತ್ತಿರುವ ಶ್ರೀಕಾಂತ್ಗೆ ಈಗ ಟ್ರೈಲರ್ ಮೇಡ್ ಕೆಲಸದ ಮೂಲಕ ಹೆಸರು ಬಂದಿದ್ದರೂ, ಅವರು ಮಿತಭಾಷಿ. ಮಾತು ಜಾಸ್ತಿ ಆದರೆ ಲ್ಯಾಗ್ ಆದೀತು ಎಂಬ ಆತಂಕ. ಹಾಗಾಗಿ ಹೇಳಬೇಕಾದ್ದನ್ನ ಶಾರ್ಟ್ ಆ್ಯಂಡ್ ಸ್ವೀಟಾಗಿ ಹೇಳಿ 'ಕಟ್' ಮಾಡಿದರು.
-ನವೀನ್ ಸಾಗರ್