'ಡಬ್ಬಿಂಗ್ ಬರಲಿ, ಹಂಗಂತ ನಾನು ಯಾವ ಸಿನಿಮಾಗಳನ್ನೂ ಡಬ್ ಮಾಡಿ ಇಟ್ಕೊಂಡಿಲ್ಲ'
'ನಾನು ಡಬ್ಬಿಂಗ್ಸಿನಿಮಾ ನೋಡಲ್ಲ, ಆದ್ರೆ ಡಬ್ಬಿಂಗ್ ಬೇಕು'
'ಜನ ಡಬ್ಬಿಂಗ್ ಸಿನಿಮಾ ನೋಡಲ್ಲ ಬಿಡ್ರಿ, ಆದ್ರೆ ಡಬ್ಬಿಂಗ್ ಬರಬೇಕು'
'ಡಬ್ಬಿಂಗ್ ಸಿನಿಮಾ ಕಾನ್ಸೆಪ್ಟೇ ವೇಸ್ಟು, ಯಾರದ್ದೋ ಅಭಿನಯಕ್ಕೆ ಯಾರೋ ಲಿಪ್ಸಿಂಕ್ ಮಾಡೋದು
ಬಾಲಿಶವಾಗಿ ಕಾಣುತ್ತೆ. ಆದ್ರೆ ಬೇಡ ಅಂತ ಹೇಳೋಕೆ ನೀವ್ಯಾರು, ಅದು ನಮ್ಮ ಹಕ್ಕು. ಅದನ್ನು ಯಾರೂ ಕಿತ್ಕೊಬಾರದು. ನಮಗೆ ಡಬ್ಬಿಂಗ್ ಬೇಕು'
ಇದು ಡಬ್ಬಿಂಗ್ ಪರ ಮಾತನಾಡುತ್ತಿರುವವರ ಲೇಟೆಸ್ಟ್ ವರಸೆ. ಇವರು ಡಬ್ಬಿಂಗ್ ಮಾಡಲ್ಲ, ನೋಡಲ್ಲ ಅಂದ್ರೂ ಇವರಿಗೆ ಡಬ್ಬಿಂಗ್ ಬೇಕು. ಕಾರಣ ಅದು ಇವರ ಹಕ್ಕಿನ ಪ್ರಶ್ನೆಯಂತೆ. ಹಾಗಾಗಿ ಡಬ್ಬಿಂಗ್ ಎನ್ನುವುದು ಈಗ ಅಹಂನ ವಿಷಯವೂ ಆಗಿದೆ. ಅದು ಹೋಗಲಿ ಬಿಡಿ. ಇಂಡಸ್ಟ್ರಿ ಹೊರಗೆ ನಿಂತು ಮಾತನಾಡುವವರಿಗೆ ಡಬ್ಬಿಂಗ್ ಬಂದರೂ, ಬಿಟ್ಟರೂ ಏನೂ ಬದಲಾವಣೆಯಾಗುವುದಿಲ್ಲ. ಹಾಗಾಗಿ, ಅದು ಅವರದ್ದು ಕಣ್ಣಿನ ಚಪಲ ಅಲ್ಲದೆ, ಕೇವಲ ನಾಲಿಗೆ ಚಪಲವಾ ಎಂಬ ಅನುಮಾನ ಹುಟ್ಟುವಂತೆ ಮಾತನಾಡುತ್ತಾರೆ. ಡಬ್ಬಿಂಗ್ ಬಂದ್ರೆ ನಮ್ಮ ಸಂಸ್ಕೃತಿ ಹಾಳಾಗಲ್ಲ ಎನ್ನುವುದು ಎಷ್ಟು ಸತ್ಯವೋ, ಡಬ್ಬಿಂಗ್ ಸಿನಿಮಾಗಳಿಂದ ನಮ್ಮ ಸಿನಿಮಾರಂಗ ಉದ್ಧಾರ ಕೂಡ ಆಗೊಲ್ಲ ಅನ್ನೋದೂ ಅಷ್ಟೇ ಸತ್ಯ ಎಂಬುದನ್ನು ಇವರು ಅರ್ಥಮಾಡಿಕೊಳ್ಳುವುದಿಲ್ಲ.
ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಆತಂಕಕಾರಿ ಎನಿಸುತ್ತಿರುವುದು ಬದಲಾಗಿರುವ ಕೆಲವು ಉದ್ಯಮದ ಮಂದಿಯ ಬಣ್ಣ. ಡಬ್ಬಿಂಗ್ನ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾಕು ಎಂದು ಕೆಲವರು ಪ್ರಯತ್ನ ಪಡುತ್ತಿದ್ದರೆ, ಇಂಥವರು ತಾವೇ ಚಿತ್ರರಂಗದ ದೊಣೆನಾಯಕರು ಎಂಬಂತೆ ವರ್ತಿಸುತ್ತಿದ್ದಾರೆ.
ರಾಜೇಂದ್ರಸಿಂಗ್ಬಾಬು, ರಾಮು, ಗಣೇಶ್ರ ಗೆಳೆಯರ ಬಳಗ ಈಗ ಡಬ್ಬಿಂಗ್ ಬೇಕು ಅಂತಿದೆ. ಆದರೆ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಸಿಂಗ್ ಬಾಬು ನಿಜಕ್ಕೂ ಅಚ್ಚರಿ ಹುಟ್ಟಿಸಿದ್ದಾರೆ. ಮಹಾತ್ಮಾ ಪಿಕ್ಚರ್ಸ್ನಂಥ ಬ್ಯಾನರ್ನಿಂದ ಬಂದ ರಾಜೇಂದ್ರಸಿಂಗ್ಬಾಬುರಂಥ ನಿರ್ದೇಶಕರು ಡಬ್ಬಿಂಗ್ ಬೇಕು ಎನ್ನುತ್ತಿರುವುದು ಡಬ್ಬಿಂಗ್ ಸಮಸ್ಯೆಗಿಂತಲೂ ಹೆಚ್ಚಿನ ಆತಂಕ ಹುಟ್ಟಿಸಿದೆ. ಇತ್ತೀಚಿನವರೆಗೂ ಡಬ್ಬಿಂಗ್, ರಿಮೇಕ್ ಬೇಡ ಎನ್ನುತ್ತಿದ್ದ ಬಾಬು ಈಗ ಬೇಕು ಎನ್ನುತ್ತಿರುವುದು ಕೇಳಿದರೆ ಎಲ್ಲೋ ಲಿಪ್ಸಿಂಕ್ ಮಿಸ್ ಆಗ್ತಾ ಇದೆಯಲ್ಲ ಎನಿಸಬಹುದು. ಸಿಂಗ್ ಬಾಬು ತಮ್ಮ ಕೋತಿಗಳು ಸಾರ್ ಕೋತಿಗಳು ಚಿತ್ರದಲ್ಲಿ 'ರಿಮೇಕ್ ನೋಡೋದು ನಮಗೆಲ್ಲಿ ಕರ್ಮ' ಎಂದು ರಿಮೇಕ್ಗೆ ಹೆಸರಾಗಿದ್ದ ಎಸ್. ನಾರಾಯಣ್ರಿಂದಲೇ ಹಾಡಿಸಿದ್ದವರು. ಆದರೆ ಈಗ ಇದ್ದಕ್ಕಿದ ್ದಂತೆ ಅದೇ ರಾಗದಲ್ಲಿ ಬೇರೆ ಹಾಡು ಹಾಡುತ್ತಿದ್ದಾರೆ ಸಿಂಗ್ ಬಾಬು. ಡಬ್ಬಿಂಗ್ ನೋಡೋ ಕರ್ಮ ಬೇಕು ಎನ್ನುತ್ತಿರುವ ಅವರಿಗೆ ಈಗ ತಮ್ಮ ನಿರ್ದೇಶನದ ಮೇಲೆ ಅವರಿಗೇ ನಂಬಿಕೆ ಇರಲಿಕ್ಕಿಲ್ಲ ಎನಿಸಿದರೆ ಆಶ್ಚರ್ಯವಿಲ್ಲ. ಅವರ ಮಾತು ಕೇಳಿದವರಿಗೆ, ಇದೇ ನಿರ್ದೇಶಕರಾ ನಾಗರಹೊಳೆ, ಬಂಧನ, ಮುತ್ತಿನಹಾರ, ಹಿಮಪಾತ, ಭೂಮಿತಾಯಿಯ ಚೊಚ್ಚಲ ಮಗ, ಅಂತ ಸಿನಿಮಾ ಮಾಡಿದ್ದು ಅಂತಲೂ, ರೆಬೆಲ್ಸ್ಟಾರ್ನನ್ನು ಹುಟ್ಟುಹಾಕಿದ ಇವರ ಸಾಮರ್ಥ್ಯ ಏನಾಯಿತು ಅಂತಲೂ ಆಶ್ಚರ್ಯವಾಗಬಹುದು.
ಇನ್ನು, ಕೋಟಿ ರಾಮು. ಮೊನ್ನೆ ಒಂದೇ ದಿನ ಎರಡು ದಿನಪತ್ರಿಕೆಯಲ್ಲಿ ಡಬ್ಬಿಂಗ್ ಬೇಕು, ಡಬ್ಬಿಂಗ್ ಬೇಡ ಎಂದು ಇವರು ಹೇಳಿದ ವರದಿಗಳು ಪ್ರಕಟವಾಗಿದ್ದು, ರಾಮು ಅವರ ಧೋರಣೆಯಲ್ಲಿನ ದಿಢೀರ್ ಬದಲಾವಣೆಗೆ ಸಾಕ್ಷಿ. ತೆಲುಗಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಬೇಕಾದಷ್ಟು ಮಾಸ್ ಹೀರೋಯಿನ್ಗಳಿದ್ದಾರೆ, ಅವರ ಸಿನಿಮಾಗಳು ಡಬ್ ಆಗಿ ಇಲ್ಲಿ ಬಂದರೆ ತಮ್ಮ ಪತ್ನಿ ಮಾಲಾಶ್ರೀ ಅವರ ಆ್ಯಕ್ಷನ್ ಸಿನಿಮಾಗಳೇ ಮೊದಲು ಮಾರ್ಕೆಟ್ ಕಳೆದುಕೊಳ್ಳೋದು ಎನ್ನುವುದು ರಾಮು ಅವರಿಗೆ ಗೊತ್ತಿಲ್ಲವೋ ಏನೋ ಅಂತೂ ಅವರು ಡಬ್ಬಿಂಗ್ ಅನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಎ.ಗಣೇಶ್ರಂಥ ಕೆಲವು ಸೋತಿರುವ ನಿರ್ಮಾಪಕರು, ಡಬ್ಬಿಂಗ್ ಬಂದರೆ ಕೋಟಿಗಟ್ಟಲೆ ದುಡ್ಡು ಹಾಕಿ ಸಿನಿಮಾ ಮಾಡುವ ನಿರ್ಮಾಪಕರು ಕಂಠದಾನ ಮಾಡುವ ಕೆಲಸಕ್ಕೆ ಚಿಲ್ಲರೆ ಹಣ ಹೊಂದಿಸಲಾಗದೆ ನಮಗೆ ಡಬ್ಬಿಂಗ್ ರೈಟ್ಸ್ ಕೊಡ್ತಾರೆ ಎಂಬ ನಂಬಿಕೆಯಲ್ಲಿ ಕಾಯುತ್ತಿದ್ದಾರೆ. ಇದುವರೆಗೂ ಡಬ್ಬಿಂಗ್ ಬಗ್ಗೆ ಅನಿಶ್ಚಿತತೆ ಇನ್ನೂ ಇದೆ. ಆ ಕಾರಣಕ್ಕಾಗಿ ಇವರಿಗೆ ಈಗ ಕೆಲವು ಪರಭಾಷಾ ಸಿನಿಮಾಗಳ ಹಕ್ಕುಗಳು ಸಿಕ್ಕಿರಬಹುದು. ಆದರೆ ಒಮ್ಮೆ ಡಬ್ಬಿಂಗ್ ಸುಲಲಿತವಾಗಿ ನಡೆಯಲಾರಂಭಿಸಿದ ಮೇಲೆ ಇವರ ಆಟ ನಡೆಯುತ್ತದೆಯೇ? ಅದು ಗಣೇಶ್ ಅವರಿಗೇ ಗೊತ್ತು. ಪಾಪ, ಈ ನಿರ್ಮಾಪಕರಿಗೆ ಅದ್ಯಾವ್ಯಾವ ಸ್ಟಾರ್ಗಳು ಕಾಲ್ಶೀಟ್ ಕೊಡಲ್ಲ ಅಂದ್ರೊ
ಅಂತೂ ಈಗ ಇವರಿಗೆ ಡಬ್ಬಿಂಗ್ ಅಂದ್ರೆ ಪ್ರೀತಿ.
ಡಬ್ಬಿಂಗ್ ಸಿನಿಮಾಗಳೆಂದರೆ ಸೃಜನಶೀಲತೆಗೂ ನಮಗೂ ಸಂಬಂಧ ಇಲ್ಲ ಎನ್ನುವಂಥವು.
ಯಾರೋ ಲಿಪ್ಸ್ಟಿಕ್ ಹಾಕಿಕೊಂಡು ಅಭಿನಯಿಸಿದ್ದಕ್ಕೆ, ಇನ್ಯಾರೋ ಲಿಪ್ಸಿಂಕ್ ಮಾಡಿ ಕಂಠ ನೀಡುತ್ತಾರೆ. ಇನ್ನು, ಡಬ್ಬಿಂಗ್ ಸಿನಿಮಾಗಳಿಗೆ ಯಾರೂ ಪ್ರೆಸ್ಮೀಟ್ ಕರೆದು ಕಂಠದಾನ ಮಾಡುವ ಸಮಯದ ತಮ್ಮ ಅನುಭವಗಳನ್ನು ಯಾವ ಚಿತ್ರತಂಡಗಳು ಹಂಚಿಕೊಳ್ಳುವುದೂ ಇಲ್ಲ, ಅಸಲಿಗೆ ಚಿತ್ರತಂಡ ಅನ್ನೋದೇ ಇರಲ್ಲ, ಯಾರ್ಯಾರು ಹೆಂಗೆಂಗೆ ಕಂಠದಾನ ಮಾಡಿದ್ದಾರೆ ಅಂತ ಯಾರೂ ವಿಮರ್ಶೆಯನ್ನೂ ಬರೆಯುವುದಿಲ್ಲ. ಹಾಗಾಗಿ ಇಂಥ ಚಿತ್ರಗಳಿಗೆ ಸಿಗುವ ಪ್ರಚಾರ ಕಡಿಮೆಯೇ. ಪ್ರಚಾರ ಸಿಗದ ಸಿನಿಮಾಗಳೆಲ್ಲಾ 6-5 2 ಆಗಲ್ಲ. ಆದರೆ ಸಮಸ್ಯೆ ಚಿತ್ರಮಂದಿರಗಳದ್ದು.
ಡಬ್ಬಿಂಗ್ ಬಂದ್ರೆ ನಮ್ಮ ಸಿನಿಮಾದವರಿಗೆ ಕೆಲಸ ಇರಲ್ಲ ಅನ್ನೋ ವಾದಕ್ಕೆ ಕಾರಣ, ನಮ್ಮಲ್ಲಿರುವ ಚಿತ್ರಮಂದಿರಗಳ ಕೊರತೆ. ಆಂಧ್ರ ತಮಿಳುನಾಡಲ್ಲಿ ಇರುವಷ್ಟು ಚಿತ್ರಮಂದಿರಗಳು ಇಲ್ಲಿದ್ದಿದ್ದರೆ ಯಾರೂ ಡಬ್ಬಿಂಗ್ ಬೇಡ ಎನ್ನುತ್ತಿರಲಿಲ್ಲ. ಅಲ್ಲದೆ, ನಮ್ಮ ಎಷ್ಟು ಸಿನಿಮಾಗಳು ಅಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ?. ನಾಮ್ಕೇ ವಾಸ್ತೇ ಎನ್ನುವಂತೆ ಅಲ್ಲೊಂದು, ಇಲ್ಲೊಂದು. ಆದರೆ ತೆಲುಗು, ತಮಿಳು ಚಿತ್ರಗಳು ಇಲ್ಲಿ ಎಷ್ಟು ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ದೊಡ್ಡ ಸ್ಟಾರ್ ನಟರ ತೆಲುಗು, ತಮಿಳು ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂದರೆ ನಮ್ಮ ಅದೆಷ್ಟೋ ಕನ್ನಡ ಸಿನಿಮಾಗಳು ಬಿಡುಗಡೆಯನ್ನು ಮುಂದೂಡುತ್ತವೆ. ಅದು ಕ್ವಾಲಿಟಿ ಬಗೆಗಿನ ಹೆದರಿಕೆ ಅಲ್ಲ. ಚಿತ್ರಮಂದಿರಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ. ಈ ಚಿತ್ರಮಂದಿರಗಳ ಕೊರತೆ ತೆಲುಗು, ತಮಿಳು ಉದ್ಯಮದಲ್ಲಿಲ್ಲ. ಹಾಗಾಗಿ ಅವರಿಗೆ ಡಬ್ಬಿಂಗ್ ಸಿನಿಮಾಗಳ ಬಗ್ಗೆ ಭಯ ಇಲ್ಲ. ಕರ್ನಾಟಕದಲ್ಲಿ ಡಬ್ಬಿಂಗ್ ಬಂದರೆ, ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಡಬ್ಬಿಂಗ್ ಬೇಕು ಎನ್ನುತ್ತಿರುವ ನಿರ್ಮಾಪಕರು ಬರೀ ಮಾತನಾಡುವುದನ್ನು ಬಿಟ್ಟು ಅಷ್ಟೊಂದು ಸಿನಿಮಾಗಳನ್ನು ಪ್ರದರ್ಶಿಸಲು ಹೊಸ ಚಿತ್ರಮಂದಿರಗಳ ವ್ಯವಸ್ಥೆ ಮಾಡುವುದು ಹೇಗೆ ಎಂಬ ಬಗ್ಗೆಯೂ
ತಲೆಕೆಡಿಸಿಕೊಂಡರೆ ಒಳ್ಳೆಯದು.
ಹರಿ