ಉಗ್ರಂ ಚಿತ್ರದ ನಂತರ ಮುರಳಿ ಮತ್ತೊಮ್ಮೆ ತೆರೆ ಮೇಲೆ ಕಾಣಿಸಲು ರೆಡಿಯಾಗುತ್ತಿದ್ದಾರೆ. ಅವರ 'ಬಹುಕಾಲ'ದ 'ಕನಸು' ಎಂಬಂತಿರುವ ಮುರಾರಿ ಚಿತ್ರ ಬಿಡುಗಡೆ ಆಗುತ್ತಿದೆ. ಒಬ್ಬ ನಟ ತನ್ನ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ ಸಾಕಷ್ಟು ಸಂಭ್ರಮದಲ್ಲಿರೋದು ಸಹಜ. ಆದರೆ ಮುರಳಿ ಅವರನ್ನು ಈ ಬಗ್ಗೆ ಕೇಳಿದರೆ, ನೋ ಕಾಮೆಂಟ್ಸ್ ಎನ್ನುತ್ತಾರೆ. ಅವರ ಈ ಬೇಸರಕ್ಕೆ ಕಾರಣವೂ ಇದೆ. ಉಗ್ರಂ ಚಿತ್ರ ಬಿಡುಗಡೆಗೆ ಮುನ್ನ ಇದೇ ಮುರಾರಿ ಚಿತ್ರವನ್ನು ಬಿಡುಗಡೆ ಮಾಡಲು ಯಾವ ಆಸಕ್ತಿಯನ್ನೂ ನಿರ್ಮಾಪಕರು ತೋರಿಸಿರಲಿಲ್ಲ. ಅಲ್ಲದೆ, ಅವರು ನನಗೆ ಹೇಳಿದ ರೀತಿಯಲ್ಲಿ ಸಿನಿಮಾ ಮಾಡಿಲ್ಲ, ಈ ಚಿತ್ರ ಬಿಡುಗಡೆಯಾಗದಿದ್ದರೇ ನನಗೆ ಒಳ್ಳೆಯದು ಎಂಬ ಅನಿಸಿಕೆ ಮುರಳಿ ಅವರದ್ದು.
ಒಂದು ಕಾಲದಲ್ಲಿ, ಯಾವಾಗ ಬಿಡುಗಡೆ ಮಾಡುತ್ತೀರಿ? ಎಂದು ಕೇಳಿದರೆ 'ಆ ಸಿನಿಮಾ ಕಥೆ ಅಷ್ಟೇ' ಎಂಬಂತೆ ಎಸ್ಕೇಪಿಸಮ್ ವಾದ ಮಂಡಿಸಿ ಪರಾರಿ ಆಗುತ್ತಿದ್ದ ಮುರಾರಿ ನಿರ್ಮಾಪಕರು ಅಟ್‌ಲೀಸ್ಟ್ ಯಾರಿಗಾದರೂ ಚಿತ್ರವನ್ನು ಮಾರಿ 'ದಿ ಮ್ಯಾನ್ ಹೂ ಸೋಲ್ಡ್ ಹಿಸ್ ಮುರಾರಿ' ಎನಿಸಿಕೊಳ್ಳಲೂ ತಯಾರಿರಲಿಲ್ಲ. ಆದರೆ, ಈಗ ಅದೇ ನಿರ್ಮಾಪಕರು ಮತ್ತೆ ಮುರಾರಿಯ ಮೊರೆ ಹೋಗಿದ್ದಾರೆ. ಅದಕ್ಕೆ ಕಾರಣ ಉಗ್ರಂನ ಯಶಸ್ಸು ಎಂಬುದನ್ನು ಒತ್ತಿ ಹೇಳಬೇಕಿಲ್ಲ ಬಿಡಿ. ಆದರೆ ನನಗೆ ಲಾಸ್ ಆಗುತ್ತೆ ಎನ್ನುತ್ತಿರೋದು ಚಿತ್ರದ ನಾಯಕ ಮುರಳಿ. ಅವರ ಮಾತಿನಲ್ಲೂ ಸತ್ಯ ಇದೆ ಬಿಡಿ. ಒಂದು ಕಾಲದಲ್ಲಿ ಸೋಲುಗಳಿಂದ ಕಂಗೆಟ್ಟು ನನ್ನದೊಂದು ಸಿನಿಮಾ ಬಿಡುಗಡೆಯಾದರೆ ಸಾಕು ಎಂದು ಕಾಯುತ್ತಿದ್ದ ಕಾಲದಲ್ಲಿ ಮುರಾರಿ ಚಿತ್ರಕ್ಕೆ ಜೀವ ಸಿಗಲಿಲ್ಲ. ಆದರೆ ಈಗ ಉಗ್ರಂ ಚಿತ್ರದಿಂದ ಅವರ ಇಮೇಜ್ ಬದಲಾಗಿದೆ. ಅವರ ಮೇಲೆ ಪ್ರೇಕ್ಷಕರಿಗೆ ನಂಬಿಕೆ ಬಂದಿದೆ. ಈ ಸಮಯದಲ್ಲಿ ಯಾವುದೋ ಕಾಲದ ಹಳಸಲು ಚಿತ್ರ ಬಿಡುಗಡೆಯಾದರೆ ಅದು ಮುರಳಿ ಇಮೇಜನ್ನು ಡ್ಯಾಮೇಜ್ ಮಾಡೋದು ಖಂಡಿತ. ಅಲ್ಲದೆ ಉಗ್ರಂ ಹಿಟ್ ಆಯ್ತು ಎಂಬ ಕಾರಣಕ್ಕೆ, ಮುರಳಿ ಇದ್ದಾರೆ ಎಂಬ ಕಾರಣಕ್ಕೆ ಯಾವ ಪ್ರೇಕ್ಷಕರೂ ಎಂಥ ಸಿನಿಮಾವನ್ನಾದರೂ ನೋಡಿ ಗೆಲ್ಲಿಸುತ್ತಾರೆ ಎಂಬುದು ಸುಳ್ಳು. ಅದು ಚಿತ್ರದ ನಿರ್ಮಾಪಕರಿಗೂ ಗೊತ್ತು. ಆದರೂ ಅವರು ಬಿಡುಗಡೆಯ ಹಾದಿ ಹಿಡಿದಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ತಮ್ಮ ಹೊಸ ಚಿತ್ರದ ಬಗ್ಗೆ ಸುಳಿವನ್ನೂ ನೀಡುತ್ತಾರೆ ಮುರಳಿ.
ಹಳೆ ನಿರ್ದೇಶಕರೊಬ್ಬರಿಗೆ ರೀ ಎಂಟ್ರಿ ಎನ್ನುವಂಥ ಚಿತ್ರದೊಂದಿಗೆ ಮುರಳಿ ಅಭಿನಯದ ಹೊಸ ಚಿತ್ರಕ್ಕೆ ಪ್ಲಾಟ್ ರೆಡಿ ಆಗ್ತಿದೆಯಂತೆ. ಒಂದು ಕಾಲದಲ್ಲಿ ಅವರು ಸೋತಿರಬಹುದು, ಆದರೆ ಅವರಲ್ಲಿ ಸಾಮರ್ಥ್ಯ ಇದೆ, ಹಾಗಾಗಿ ನಿರ್ದೇಶಕರಾಗಿ ಅವರಿಗೆ ಇದು ರೀ ಬರ್ತ್, ಆದರೆ ಅವರು ಯಾರು ಎಂಬುದನ್ನು ಈಗಲೇ ಕೇಳಬೇಡಿ, ಸಿನಿಮಾ ಅನೌನ್ಸ್ ಆಗುವವರೆಗೂ ಅದು ಸಸ್ಪೆನ್ಸ್ ಎನ್ನುತ್ತಾರೆ ಮುರಳಿ. ಒಂದು ಕಾಲದಲ್ಲಿ ಸೋಲುಗಳಿಂದ ಹತಾಶರಾಗಿದ್ದು, ಉಗ್ರಂನಿಂದ ಗೆಲುವು ಕಂಡ ಮುರಳಿ ಅಂಥವರನ್ನು ಬಿಟ್ಟರೆ ಇನ್ಯಾರಿಂದ ಸೋತವರನ್ನು ಎತ್ತಿ ನಿಲ್ಲಿಸುವ ಇಂಥ ಕೆಲಸ ಆಗೋಕೆ ಸಾಧ್ಯ, ಅಲ್ಲವೇ.
- ಹ್ಯಾರಿ