ಪ್ರೇಕ್ಷಕನ ಈ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ನಾನು ನಿಜಕ್ಕೂ ನಿರೀಕ್ಷಿಸಿರಲಿಲ್ಲ. ಅಂತೂ ನನ್ನೂರಿನ ಜನ ನನ್ನ ಜೊತೆಗೆ ನನ್ನ ಚಿತ್ರವನ್ನೂ ಗೆಲ್ಲಿಸಿದ್ದಾರೆ... ಹೀಗೆ ಒಂದೇ ಉಸಿರಿನಲ್ಲಿ ಹೇಳಿಕೊಂಡರು ನಟ, ನಿರ್ದೇಶಕ ಪ್ರಕಾಶ್ ರೈ. ಅವರ ಈ ಸಂಭ್ರಮದ ಮಾತು, 'ಒಗ್ಗರಣೆ' ಚಿತ್ರಕ್ಕೆ ಸಂಬಂಧಿಸಿದ್ದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 'ನಾನು ನನ್ನ ಕನಸು' ಚಿತ್ರದ ನಂತರ ಎರಡನೇ ಬಾರಿಗೆ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಪ್ರೇಕ್ಷಕರ ಮುಂದೆ ನಿಂತ ರೈ ಅವರ, ನಿರೀಕ್ಷೆ ಹುಸಿಯಾಗಿಲ್ಲ. ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ 'ಒಗ್ಗರಣೆ' ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗಳಿಕೆಯ ದೃಷ್ಟಿಯಿಂದಲೂ ರಾಜ್ಯದ 80 ಚಿತ್ರಮಂದಿರಗಳಲ್ಲಿ 'ಒಗ್ಗರಣೆ' ಘಾಟು ಜೋರಾಗಿ ಕೆಲಸ ಮಾಡುತ್ತಿದೆ. 'ತುಂಬಾ ಖುಷಿಯಾಗುತ್ತಿದೆ. ಜನರ ಈ ಸಿನಿಮಾ ಪ್ರೀತಿಗೆ ನಾನು ಯಾವತ್ತಿಗೂ ಋಣಿ. ಐಎಎಸ್ ಅಧಿಕಾರಿ ಕುಟುಂಬ ಸಿನಿಮಾ ಮೆಚ್ಚಿಕೊಂಡಿದ್ದು, ಸಾಹಿತಿ ಕುಂ. ವೀರಭದ್ರಪ್ಪ ಚಿತ್ರ ನೋಡಿ, 'ಇದು ಅವಿವಾಹಿತರ ಪ್ರೌಢ ಪ್ರೇಮದ ದೃಶ್ಯ ಕಾವ್ಯ' ಎಂದು ಹೊಗಳಿದ್ದು, ನನ್ನ ಗೆಳೆಯನೊಬ್ಬ ತನ್ನ ಕುಟುಂಬ ಸಮೇತರಾಗಿ ಚಿತ್ರ ನೋಡಿ, 'ವರ್ಷಕ್ಕೊಂದು ಇಂಥ ಚಿತ್ರ ಮಾಡುವ ಪ್ರಕಾಶ್' ಅಂತ ಹೇಳಿದ್ದು, ಮಡಿಕೇರಿ, ಮಂಗಳೂರು, ಮೈಸೂರಿನ ನನ್ನ ಆ ದಿನಗಳ ಹಲವು ಗೆಳೆಯರು ಅವರ ಕುಟುಂಬ ಸಮೇತರಾಗಿ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ನೋಡಿದ ಬಹಳಷ್ಟು ಮಂದಿ ನನಗೆ ಫೋನ್ ಮಾಡಿ ಮಾತನಾಡಿದ್ದಾರೆ. ಇದೆಲ್ಲ ನೋಡಿದಾಗ ಮತ್ತಷ್ಟು ಒಳ್ಳೆಯ ಸಿನಿಮಾ ಮಾಡುವ ಉತ್ಸಾಹ ಹೆಚ್ಚಾಗುತ್ತದೆ. ಇಲ್ಲಿವರೆಗೂ ನನ್ನನ್ನು ಪ್ರೀತಿಸಿದ್ದಾರೆ. ಈಗ ನನ್ನ ಸಿನಿಮಾವನ್ನೂ ಮೆಚ್ಚಿಕೊಂಡಾಡುತ್ತಿದ್ದಾರೆ. ಪ್ರೇಕ್ಷಕರ ಈ ಪ್ರೀತಿ ಮುಂದೆ ನಾನು ಏನೂ ಅಲ್ಲ' ಎಂದು ತಮ್ಮ ಚಿತ್ರದ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ ಪ್ರಕಾಶ್ ರೈ.
ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ತೆರೆ ಕಂಡರೂ ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಿರುವುದು ರೈ ಅವರ ಸಂಭ್ರಮಕ್ಕೆ ಮತ್ತೊಂದು ಕಾರಣ. 'ಒಳ್ಳೆಯ ಸಿನಿಮಾ ಕೊಟ್ಟರೆ ನನ್ನೂರಿನ ಜನ ಕೈ ಬಿಡಲ್ಲ ಎಂದುಕೊಂಡೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. 'ನಾನು ನನ್ನ ಕನಸು' ಸಿನಿಮಾ ಚಿತ್ರಮಂದಿರಕ್ಕಿಂತ ಟಿವಿಯಲ್ಲಿ ಆಪ್ತವಾಯಿತು. ಆದರೆ, 'ಒಗ್ಗರಣೆ' ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಕರೆತರುತ್ತಿದೆ. ನನ್ನ ಪ್ರಕಾರ ಜನ ಯಾವ ರೀತಿಯ ಚಿತ್ರವನ್ನು ನಿರೀಕ್ಷೆ ಮಾಡಿದ್ದರೋ ಅದೇ ಚಿತ್ರವನ್ನು ಕೊಟ್ಟಿದ್ದೇನೆ ಅನಿಸುತ್ತಿದೆ. ನನ್ನ ಆಲೋಚನಾ ಕ್ರಮವನ್ನು ದೃಶ್ಯ ರೂಪದಲ್ಲಿ ಹೇಳಿದ್ದೇನೆ. ಪ್ರೇಕ್ಷಕ ಕೂಡ ಅದನ್ನು ನೋಡಿ ನಕ್ಕಿದ್ದಾನೆ' ಎನ್ನುವ ಪ್ರಕಾಶ್ ರೈಗೆ ಈ ಗೆಲುವು, 'ಬೇರೆ ಎಲ್ಲ ಕಡೆ ಓಡಾಡಿದ್ದು ಸಾಕು. ನಿನ್ನ ಊರಿಗೆ ಬಂದು ಬಿಡು' ಎನ್ನುವಂತಾಗಿದೆಯಂತೆ. 'ನಾನು ನನ್ನ ಕನಸು' ಸಿನಿಮಾ ಮಾಡಿದಾಗ ಪ್ರೇಕ್ಷಕನಿಗೆ ನಂಬಿಕೆ ಇರಲಿಲ್ಲ. ರೈ ಒಬ್ಬ ನಟನಾಗಿ ಗೊತ್ತು. ಆದರೆ, ನಿರ್ದೇಶಕನಾಗಿ ಏನು ಮಾಡುತ್ತಾನೆ, ಯಾವ ರೀತಿ ಸಿನಿಮಾ ಕೊಡಬಲ್ಲ ಎಂಬುದರ ಬಗ್ಗೆ ನಂಬಿಕೆ ಇರಲಿಲ್ಲ. ಈಗಲೂ 'ಒಗ್ಗರಣೆ' ಚಿತ್ರ ಮೊದಲ ದಿನದ ಪ್ರದರ್ಶನ ಅಬ್ಬರವಿರಲಿಲ್ಲ. ಈಗ ಅದು ಜನರನ್ನು ಸೆಳೆಯುತ್ತಿದೆ. ಚಿತ್ರಮಂದಿರಕ್ಕೆ ಒಬ್ಬರನ್ನು ಕರೆತರುವುದೇ ದೊಡ್ಡ ಸಾಹಸ. ಅಂಥದರಲ್ಲಿ ಇಡೀ ಕುಟುಂಬವನ್ನು ಹೊರಡಿಸುವುದು ಅಂದರೆ ಅಷ್ಟು ಸುಲಭವಿಲ್ಲ. ಆ ಕೆಲಸವನ್ನು 'ಒಗ್ಗರಣೆ' ಮಾಡುತ್ತಿದೆ.
'ಕುಟುಂಬ ಸಮೇತರಾಗಿ ನೋಡುವ ಇಂಥ ಚಿತ್ರಗಳನ್ನು ಹೆಚ್ಚಾಗಬೇಕು' ಎನ್ನುವ ಪ್ರಕಾಶ್ ರೈ, ಒಳ್ಳೆಯ ಚಿತ್ರವನ್ನು ತೆಲುಗು, ತಮಿಳು ಚಿತ್ರರಂಗದವರಂತೆ ಇಡೀ ಉದ್ಯಮ ಸೇರಿ ಕೊಂಡಾಡುವ ವಾತಾವರಣ ಸೃಷ್ಟಿಯಾಗಬೇಕು ಎಂಬುದು ರೈ ಆಸೆ. 'ರೇಣಿಗುಂಟ' ಎನ್ನುವ ಹೊಸಬರ ಚಿತ್ರವನ್ನು ಸೂಪರ್‌ಸ್ಟಾರ್ ರಜನಿಕಾಂತ್ ನೋಡಿ ಮೆಚ್ಚಿಕೊಂಡು ಮಾತನಾಡಿದಂತೆ, ತೀರಾ ಇತ್ತೀಚೆಗೆ ತೆಲುಗಿನ 'ಮನಂ' ಚಿತ್ರವನ್ನು ಅಲ್ಲಿನ ಸಿನಿಮಾ ಮಂದಿ ನೋಡಿ ತಾವೇ ಮುಂದೆ ನಿಂತು ಆ ಚಿತ್ರದ ಬಗ್ಗೆ ಮಾತನಾಡಿದಂತೆ ಇಲ್ಲೂ ಅಂಥ ಪರಂಪರೆ ಹೆಚ್ಚಾದರೆ, 'ಒಗ್ಗರಣೆ'ಯಂಥ ಸಿನಿಮಾಗಳ ಜೀವಂತಿಕೆ ಮತ್ತಷ್ಟು ಚಿಗುರುತ್ತದೆ.
-ಆರ್. ಕೇಶವಮೂರ್ತಿ