ಒಂದು ಕಡೆ ಪಿ.ವಾಸು-ರವಿಚಂದ್ರನ್ ಕಾಂಬಿನೇಶನ್ನಿನ ದೃಶ್ಯವೈಭವಕ್ಕೆ ಗಾಂಧಿನಗರ ಅಣಿಯಾಗುತ್ತಿದ್ದರೆ, ಇತ್ತ ತು'ಟಿಪಿಟಿಕ್' ಎನ್ನದೆಯೇ ಸೈಲೆಂಟಾಗಿ ಟಿಪಿಕಲ್ ಕೈಲಾಸ ತೆರೆಯೇರುತ್ತಿದೆ. ಟಿಪಿಕಲ್ ಕೈಲಾಸ್ ಎಂಬ 'ನವೀನ' ಚಿತ್ರ ಎಲ್ಲ ದೊಡ್ಡದೊಡ್ಡ ಚಿತ್ರಗಳ ಅಬ್ಬರದ ನಡುವೆಯೂ ರಾಜ್ಯಾದ್ಯಂತ ಸುಮಾರು ಅರವತ್ತು ಥೇಟರುಗಳನ್ನು ಹೊಂದಿಸಿಕೊಂಡು ತೆರೆಕಾಣಲೇ ಬೇಕೆಂಬ ಛಲ ಹೊತ್ತು ಬಂದಿದೆ.
ನಿರ್ದೇಶಕರೂ ಸೇರಿದಂತೆ ಹದಿನೈದು ಜನ ಬಂಡವಾಳ ಹೂಡಿರುವ ಈ ಭಾರಿ ನಿರ್ಮಾಪಕ ಗಣದ ಚಿತ್ರ ಹಲವು ವಿಷಯಗಳಿಗೆ ಗಮನ ಸೆಳೆದಿದೆ.
ಈಗಾಗಲೇ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯರಾಗಿದ್ದರೂ ಸಿನಿಮಾದಲ್ಲಿ ಇನ್ನೂ ದೊಡ್ಡ ಬ್ರೇಕ್ ಸಿಗದಿರುವ ಸೃಜನ್ ಲೋಕೇಶ್ಗೆ ಈ ಚಿತ್ರದಿಂದ ಹೊಸದೊಂದು ನೋಡುಗ ವರ್ಗ ಸೃಷ್ಟಿಯಾಗಬಹುದು ಎಂಬ ನಂಬಿಕೆ ಒಂದೆಡೆ ಇದ್ದರೆ, ಯುವ ನಿರ್ದೇಶಕ ನವೀನ್ ಮಲ್ಲಿಕ್ರ ಸೃಜನಶೀಲತೆ ಬಗ್ಗೆ ಈಗಾಗಲೇ ಹಿರಿಯ ನಿರ್ದೇಶಕರಿಂದಲೇ ಒಳ್ಳೆಯ ಮಾತುಗಳು ಕೇಳಿಬಂದಿವೆ. ಬಹುದಿನಗಳ ನಂತರ ವಿ. ಮನೋಹರ್ ಸಂಗೀತ ನಿರ್ದೇಶನದ ಹಾಡುಗಳು ಜನಪ್ರಿಯವಾಗಿರುವುದು ಈ ಕೌಟುಂಬಿಕ ಹಾಸ್ಯಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್.
ಈ ಟಿಪಿಕಲ್ ಚಿತ್ರದ ಬಗ್ಗೆ ತಮ್ಮ ಟಿಪಿಕಲ್ ಶೈಲಿಯಲ್ಲಿ ನಾಯಕ ಸೃಜನ್ ಮಾತಾಡಿದ್ದು ಹೀಗೆ:
ಟಿಪಿಕಲ್ ಕೈಲಾಸ್ಗೂ, ಟಿಪಿ ಕೈಲಾಸಂಗೂ ಏನಾದರೂ ಸಂಬಂಧ ಇದೆಯಾ?
ಇದು ಕೈಲಾಸ ಎಂಬ ಕಥಾನಾಯಕನ ಟಿಪಿಕಲ್ ವ್ಯಕ್ತಿತ್ವದ ಬಗೆಗಿನ ಚಿತ್ರ. ನಾಯಕನ ವಿಭಿನ್ನ ವ್ಯಕ್ತಿತ್ವವೇ ಚಿತ್ರದ ಹೈಲೈಟು. ಅದಕ್ಕೆ ಲೋಕಲ್ ಭಾಷೆಯಲ್ಲಿ ಹೇಳೋ ರೀತಿಯಲ್ಲಿ 'ಟಿಪಿಕಲ್' ಅಂದಿದ್ದೇವೆ ಅಷ್ಟೇ. ಟಿಪಿ ಕೈಲಾಸಂ ಅವರಿಗೂ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ಅವರ ಶೈಲಿಯ ಫನ್ ಮತ್ತು ಪನ್ಗಳಿರುವ ಸದಭಿರುಚಿಯ ಸಂಭಾಷಣೆ ಚಿತ್ರದುದ್ದಕ್ಕೂ ಇರುತ್ತದೆ.
ಆದರೆ ಟ್ರೈಲರ್ ನೋಡಿದಾಗ ಅಲ್ಲಲ್ಲಿ ಡಬಲ್ ಮೀನಿಂಗ್ ಕೇಳಿದ ಹಾಗಾಯ್ತು. ಯಶಸ್ಸಿಗೆ ಆ ಥರದ ಸಂಭಾಷಣೆಯನ್ನು ನೆಚ್ಚಿದ್ದೀರಾ?
ಖಂಡಿತಾ ಇಲ್ಲ. ಈ ಚಿತ್ರಕ್ಕೆ ಸೆನ್ಸಾರ್ ಯು ಸರ್ಟಿಫಿಕೇಟ್ ಕೊಟ್ಟಿದೆ. ಮ್ಯೂಟು ಬೀಪು ಕೂಡ ಇಲ್ಲ. ಮನೆಮಂದಿಗೆಲ್ಲ ಮನರಂಜನೆ, ಒಂಚೂರು ಸೆಂಟಿಮೆಂಟು, ಎಮೋಶನ್ನು ಇದೆ. ಮಕ್ಕಳು ಬಂದರೂ ಎಂಜಾಯ್ ಮಾಡಿ ಹೋಗ್ತವೆ. ಆ ಗ್ಯಾರಂಟಿ ಕೊಡಬಲ್ಲೆ.
ನಿಮ್ಮ ಈ ಮೊದಲ ಚಿತ್ರಗಳು ಸೌಂಡಿಂಗ್ ಟೈಟಲ್ ಇದ್ರೂ ಸದ್ದು ಮಾಡಲಿಲ್ಲ. ಈ ಟಿಪಿಕಲ್ ಟೈಟಲ್ ಗೆಲ್ಲಿಸೀತಾ?
ಚಿತ್ರದ ಕಥೆ, ನಿರ್ದೇಶಕರ ಹೋಂವರ್ಕ್ ಹಾಗೂ ಕಾರ್ಯಕ್ಷಮತೆ ಅಷ್ಟೊಂದು ಯೋಜಿತವಾಗಿದೆ. ಹಾಗಾಗಿ ನಾನು ನನ್ನೆಲ್ಲ ಬೇರೆ ಚಿತ್ರಗಳಿಗಿಂತ ಇದರ ಮೇಲೆ ಹೆಚ್ಚು ಭರವಸೆ ಇಟ್ಟಿದ್ದೇನೆ. ಸುಖಾಸುಮ್ಮನೆ ಹೇಳ್ತಾ ಇಲ್ಲ. ಈ ಚಿತ್ರ ನಿಜಕ್ಕೂ ವಿಶೇಷವಾಗಿದೆ. ನೋಡಿದ ಮೇಲೆ ನೀವೇ ಹೇಳ್ತೀರ. ಶುಕ್ರವಾರದ ಜನಾಭಿಪ್ರಾಯಕ್ಕೆ ಹಾಗೂ ಮಾಧ್ಯಮದ ಅಭಿಪ್ರಾಯಕ್ಕೆ ಕಾಯ್ತಿದ್ದೇನೆ.
ನಿಮ್ಮ ಕಿರುತೆರೆ ಜನಪ್ರಿಯತೆ ಮತ್ತು ಮಕ್ಕಳ ಕಣ್ಣಲ್ಲಿರೋ ಸೃಜನ್ ಮಾಮಾ ಇಮೇಜು ಚಿತ್ರಕ್ಕೆ ಜನರನ್ನು ಸೆಳೆಯಲು ಸಹಾಯ ಆಗಬಹುದಾ ಅಥವಾ ಆ ಇಮೇಜಿಗೆ ಧಕ್ಕೆ ಆಗಬಹುದಾ?
ಕಿರುತೆರೆಯ ನಿರೂಪಣೆ ಮತ್ತು ಛೋಟಾ ಚಾಂಪಿಯನ್ ಕಾರ್ಯಕ್ರಮಗಳು ನನ್ನನ್ನು ಪುಟ್ಟ ಮಕ್ಕಳೊಂದಿಗೆ ಮತ್ತು ಅವರ ತಾಯಿತಂದೆಯರೊಂದಿಗೆ ಭಾವನಾತ್ಮಕವಾಗಿ ಬೆಸೆದಿದೆ. ಅದು ಖಂಡಿತಾ ಈ ಚಿತ್ರಕ್ಕೆ ಪೂರಕವಾಗಿರುತ್ತದೆ. ಚಿತ್ರವೂ ಆ ಭರವಸೆಯನ್ನು ಹುಸಿಗೊಳಿಸುವುದಿಲ್ಲ.
ನೀವೇ ಇನ್ನೂ ದೊಡ್ಡ ಯಶಸ್ಸಿಗಾಗಿ ಕಾಯ್ತಿರೋವ್ರು. ಹೊಸ ನಿರ್ದೇಶಕರ ಸಿನಿಮಾ ಒಪ್ಪಿಕೊಂಡಿದ್ದು ರಿಸ್ಕ್ ಅಲ್ವೇ?
ನಿರ್ದೇಶಕ ನವೀನ್ ದಿಢೀರ್ ಉದ್ಭವಿಸಿದವರಲ್ಲ. ತುಂಬಾ ಕಷ್ಟಪಟ್ಟಿದ್ದಾರೆ. ನಾಗತಿಹಳ್ಳಿ ಮೇಷ್ಟ್ರ ಬಳಿ ದುಡಿದು ಚಿತ್ರನಿರ್ದೇಶನ ಬರವಣಿಗೆಯ ಸೂಕ್ಷ್ಮ ಅರಿತಿದ್ದಾರೆ. ಸೂರಿ, ಅಶೋಕ್ ಪಾಟೀಲ್ರಂಥ ನುರಿತ ನಿರ್ದೇಶಕರ ಜೊತೆಗೂ ಪಳಗಿದ್ದಾರೆ. ಈ ಚಿತ್ರಕ್ಕಾಗಿ ತುಂಬಾ ಪೂರ್ವತಯಾರಿ ಮಾಡಿಕೊಂಡಿದ್ದಾರೆ. ಇಂಥ ಹೋರಾಟದ ಹಾದಿಯಲ್ಲಿರೋವ್ರೆ ನನ್ನಂಥವನಿಗೂ ಸ್ಪೂರ್ತಿ. ಎಲ್ಲರೂ ಸೇರಿ ಗೆದ್ದರೆ ಆ ಸಂತಸವೇ ಬೇರೆ. ಈ ಚಿತ್ರ ಗೆದ್ದರೆ, ಹದಿನೈದು ಸ್ವತಂತ್ರ ನಿರ್ಮಾಪಕರು ಸೃಷ್ಟಿಯಾಗಿ ಕನಿಷ್ಠ ಹದಿನೈದು ಚಿತ್ರಗಳು ನಿರ್ಮಾಣ ಆಗುತ್ತವೆ.
ಆ ಗೆಲುವಿನ ನಿರೀಕ್ಷೆಯಲ್ಲಿದ್ದೇವೆ.
ಹಾಸ್ಯ ಚಿತ್ರಗಳಲ್ಲಿ ಹಾಡುಗಳ ಪಾತ್ರವೇ ಇರೋಲ್ಲ. ನಿಮ್ಮ ಚಿತ್ರದ ಹಾಡುಗಳು ಅಚ್ಚರಿ ನೀಡಿದೆಯಲ್ಲ ?
ಹೌದು, ಭಟ್ರು, ಕಾಯ್ಕಿಣಿಯವರು, ನಮ್ಮ ನಿರ್ದೇಶಕ ನವೀನ್, ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ಎರಡು ಹಾಡುಗಳು ಈಗಾಗಲೇ ಜನರ ಮನಸು ರೀಚ್ ಆಗಿದೆ. ಅಲ್ಲಲ್ಲಿ ಕಾಲರ್ ಟ್ಯೂನ್ ಆಗಿಯೂ ಕೇಳಿದ್ದೇನೆ. ಮನೋಹರ್ ಅವರೂ ಒಂದು ಹಾಡು ಬರೆದಿದ್ದಾರೆ. ನನಗೆ ಮೊದಲ ಬಾರಿ ಒಳ್ಳೆಯ ಹಾಡುಗಳಿರೋ ಚಿತ್ರ ಸಿಕ್ಕಿದೆ ಅನ್ನೋ ಖುಷಿ.
ಮುಂದಿನ ಚಿತ್ರಗಳು ?
ಸದ್ಯಕ್ಕೆ ಬೇರೆ ಚಿತ್ರಗಳ ಮಾತುಕತೆ ನಡೀತಿದೆ. ಸಮೋಸ ಮತ್ತು ಸಪ್ನೋಂಕಾ ರಾಜಾ ಸಿದ್ಧವಾಗ್ತಿದೆ. ಸದ್ಯಕ್ಕೆ ಧ್ಯಾನವೆಲ್ಲ ಟಿಪಿಕಲ್ ಕೈಲಾಸ್ ಮೇಲೆ. ಈ ಚಿತ್ರ ಖಂಡಿತಾ ಒಳ್ಳೆಯ ಪ್ರತಿಕ್ರಿಯೆ ಪಡೆಯೋ ನಂಬಿಕೆ ಇದೆ. ಚಿತ್ರ ನೋಡಿ ನಿಮ್ಮ ಅನಿಸಿಕೆಯನ್ನು ಮುಕ್ತವಾಗಿ ತಿಳಿಸಿ. ಸ್ವೀಕರಿಸುತ್ತೇನೆ.
-ಎನ್ನೆಸ್