ಜಿ.ನಾಗೇಶ್ವರರಾವ್...
ಹೀಗೆ ಹೇಳಿದರೆ, 'ಯಾರು ಇವರು?' ಅಂತ ಕೇಳುವವರೇ ಹೆಚ್ಚು. ಈ ತಲೆಮಾರಿನ ಸಿನಿಮಾ ಪ್ರೇಕ್ಷಕರಿಗೆ ಮಾತ್ರವಲ್ಲ, ಚಿತ್ರಜಗತ್ತಿಗೂ ಈ ಹೆಸರು ಅಪರಿಚಿತ. ಆದರೆ, ಕೇಶಶಿಲ್ಪಿ ನಾಗೇಶ್ ಅಂದ್ರೆ ಸಾಕು 'ವಿಗ್' ಲೋಕ ಚುರುಕುಗೊಳ್ಳುತ್ತದೆ. ಕಪ್ಪು ಬಿಳುಪಿನ ಕಾಲದ ದಿಗ್ಗಜ ಕಲಾವಿದರಿಂದ ಹಿಡಿದು ಈ ಕಾಲದ ಸ್ಟಾರ್ ನಟರವರೆಗೂ ಇವರ 'ವಿಗ್' ಕಥೆ ಸಾಗುತ್ತದೆ. ಬಿಗ್ ಸ್ಟೋರಿ ಎನಿಸುವ ಇವರ ತೆರೆ ಹಿಂದಿನ ಬದುಕನ್ನು ಕಂಡರೆ ಚಿತ್ರರಂಗದ ಸಾಹಸಿ 'ವಿಗ್' ಬಾಸ್ರನ್ನು ಕಂಡ ಅನುಭವಕ್ಕೆ ಪಾತ್ರರಾಗುತ್ತೇವೆ.
'ಕೇಶ ಅಂದ್ರೆ ಸುಮ್ಮನೆ ಅಲ್ಲ' ಎನ್ನುವ ಜಿ. ನಾಗೇಶ್ವರರಾವ್ ಚಿತ್ರೋದ್ಯಮದ ಮಾಸ್ಟರ್ ಪೀಸ್ ಅಲ್ಲಲ್ಲ, 'ವಿಗ್' ಸ್ಟಾರ್. ನೈಸ್ ರಸ್ತೆಯಂಥ ತಲೆಗಳನ್ನು ತೆರೆ ಮೇಲೆ ಸೂಪರ್ ಸ್ಟಾರ್ಗಳಂತೆ ಮಾಡುವ ಕಲೆ ಇವರಿಗೆ ದಕ್ಕಿದೆ. ಎರಡಿಂಚು ಕೂದಲು ಇಲ್ಲದಿದ್ದರೂ ನೀಲವೇಣಿಯಂತೆ ತೆರೆ ಮೇಲೆ ಲಕಲಕನೆ ಹೊಳೆಯುವ ಅಂದಗಾತಿಯರು ರೂಪಗೊಳ್ಳುವುದು ಇವರ 'ವಿಗ್' ಕಲೆಯಲ್ಲೇ.
ರಾಯಚೂರಿನ ಗಡಿ ಭಾಗಕ್ಕೆ ಅಂಟಿಕೊಂಡಿರುವ ಆಂಧ್ರದ ಮೆಹಬೂಬ್ ನಗರದಲ್ಲಿ 17 ಸೆಪ್ಟೆಂಬರ್ 1956ರಲ್ಲಿ ಹುಟ್ಟಿದವರು ನಾಗೇಶ್ವರರಾವ್. ಇವರ ತಂದೆ ರಾಮಮೂರ್ತಿ. ತಾಯಿ ಸರಸ್ಪತಿ. ಈ ದಂಪತಿಗೆ ಪ್ರಕಾಶ್ರಾವ್, ಜಿ. ನಾಗೇಶ್ವರರಾವ್, ಸಾಯಿಬಾಬು, ಸುಮಂತ್, ವಿದ್ಯಾವತಿ, ಅನುರಾಧ ಮಕ್ಕಳು. ಇವರು ಉಪವಾಸವಿದ್ದ ದಿನಗಳಿಗೆ ಲೆಕ್ಕವಿಲ್ಲ. ಇಂಥ ಕುಟುಂಬದಲ್ಲಿ ಹುಟ್ಟಿದ ನಾಗೇಶ್ವರರಾವ್ ವಿದ್ಯೆಗೆ ಗುಡ್ ಬೈ ಹೇಳಿ ಚಿನ್ನ ಬೆಳ್ಳಿ ಕೆಲಸ ಮಾಡತೊಡಗಿದರು. ಆದರೆ, ಮುಂದೆ ಬಡತನವೆಂಬ ಭೂತವನ್ನು ಒದ್ದೋಡಿಸಲು ನಾಗೇಶ್ವರರಾವ್ ಆಯ್ಕೆ ಮಾಡಿಕೊಂಡದ್ದು ಕೇಶಾಲಂಕಾರ. 12ನೇ ವಯಸ್ಸಿಗೆ ವಿಗ್ ಮಾಡುವುದನ್ನು ಕಲಿತು 1968ರಲ್ಲಿ ಚಿತ್ರರಂಗಕ್ಕೆ ಬಂದವರು. ಸಿನಿಮಾ, ಧಾರಾವಾಹಿ, ನಾಟಕ, ಮದುವೆ ಹೀಗೆ ಯಾವುದೇ ಸಂಭ್ರಮ ಇರಲಿ ಅಲ್ಲಿ ಇವರ ವಿಗ್ ಲಕಲನೆ ಹೊಳೆಯುತ್ತದೆ. ಹಾಗೆ ನೋಡಿದರೆ ನಾಗೇಶ್ವರರಾವ್ ಅವರಲ್ಲಿ ಒಬ್ಬ ಅದ್ಭುತ ಕಲಾವಿದನಿದ್ದಾನೆ. ನಟನೆ ಎನ್ನುವುದು ಇವರಿಗೆ ಬಾಲ್ಯದಲ್ಲೇ ಅಂಟಿದ ಕಲೆ. ವಿಗ್ ಮೇಕಿಂಗ್ ಜೊತೆಗೆ ಅಭಿನಯನ್ನೂ ಆರಂಭಿಸಿದ ಇವರು, 100 ಧಾರಾವಾಹಿಗಳು ಹಾಗೂ 100 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟು ವಿವರಣೆಯೊಂದಿಗೆ ವಿಗ್ ಮಾಸ್ಟರ್ ನಾಗೇಶ್ವರರಾವ್ ಅವರ ಮುಂದೆ ಕೂತಾಗ...
ಹಸಿವು ಎಂಬುದು ಎಂಥವರಿಗೂ ಬದುಕುವುದನ್ನು ಕಲಿಸುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ವಿಶ್ವಕರ್ಮ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರೂ ಆಡು ಭಾಷೆಯಲ್ಲಿ ಕರೆಯುವಂತೆ ಕ್ಷೌರಿಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ನನ್ನ ಬಡತನವೇ ಕಾರಣ. ಈಗ ನನಗೆ 60 ವರ್ಷ. ನನ್ನ ವೃತ್ತಿ ಈಗ ನನಗೆ ಗೌರವ ಕೊಟ್ಟಿರಬಹುದು. ಆದರೆ, ಒಂದು ಕಾಲದಲ್ಲಿ ಇದೇ ಕೆಲಸದಿಂದ ನಾನು ತೀರಾ ಕೀಳಾಗಿ ಕಾಣಲ್ಪಟ್ಟಿದ್ದೇನೆ. ನಮ್ಮ ನೆಂಟರು, ಆಪ್ತರು, ಸ್ನೇಹಿತರು ಬಂದಾಗ ಮನೆಯಲ್ಲಿದ್ದ ಕೂದಲು ಯಾರಿಗೂ ಕಾಣದಂತೆ ಬಚ್ಚಿಡುತ್ತಿದ್ದೆ. ಅಷ್ಟೆ ಅಲ್ಲ, ಆಗ ವಿವಾಹಕ್ಕೆ ಹೆಣ್ಣು ಸಿಗುವುದೂ ಕಷ್ಟವಾಗಿತ್ತು. ಅಂಥ ಪರಿಸ್ಥಿತಿಯಲ್ಲಿ ಈ ಕೇಶಾಲಂಕಾರ ಕಲಿತೆ. ನಟನಾಗಲು ಬಂದವನು ವಿಗ್ ಸ್ಟಾರ್ ಆದೆ.
'ಸೋದರರ ಸವಾಲ್' ನಾನು ಅಭಿನಯಿಸಿದ ಮೊದಲ ಚಿತ್ರ. ನಂತರ ವಜ್ರಮುಷ್ಠಿ, ಜೀವನ ಜೈತ್ರ, ಜ್ವಾಲಮುಖಿ, ಅದೇ ಕಣ್ಣು ಮುಂತಾದ ಚಿತ್ರಗಳಲ್ಲಿ ನಟಿಸಿದ್ದೇನೆ. ನಟನೆ ಹೊಟ್ಟೆ ತುಂಬಿಸಲಿಲ್ಲ. ಮಹಾಭಾರತ, ಪಂಚಮವೇದ, ಗಂಗೋತ್ರಿ, ವಿಶ್ವವಿನಾಯಕ ಧಾರಾವಾಹಿಗಳಲ್ಲಿ ಈಗಲೂ ಅಭಿನಯಿಸುತ್ತಿದ್ದೇನೆ. ಊಟವಿಲ್ಲದೆ ಮದ್ರಾಸಿನ ಬೀದಿಗಳಲ್ಲಿ ಅಲೆಯುತ್ತಿದ್ದಾಗ ನೆರವಿಗೆ ಬಂದವರು ನನ್ನ ಅಣ್ಣ ಪ್ರಕಾಶ್ರಾವ್. ಆಗಲೇ ಪ್ರಕಾಶ್ರಾವ್ ವಿಗ್ ಮೇಕರ್ ಆಗಿ ಮದ್ರಾಸಿನ ಚಿತ್ರರಂಗದಲ್ಲಿ ಪ್ರಸಿದ್ಧಿಯಾಗಿದ್ದರು. ಒಮ್ಮೆ ಸ್ಟುಡಿಯೋದಲ್ಲಿ ಬಿಳಿ ಬಟ್ಟೆ ಹಾಕಿಕೊಂಡು ಸ್ಟೈಲ್ ಆಗಿ ಹೋಗಿ ಬರುತ್ತಿದ್ದವರನ್ನು ನೋಡಿ, 'ಯಾರು ಇವರು' ಅಂತ ಕೇಳಿದೆ. 'ಮೇಕಪ್ ಕಲಾವಿದರು' ಅಂದರು. ಅವರ ಗತ್ತು ನೋಡಿ ನಾನು ಮೇಕಪ್ ಆರ್ಟಿಸ್ಟ್ ಆಗಬೇಕು ಅಂತ ನಿರ್ಧರಿಸಿದೆ.
ಆರಂಭದಲ್ಲಿ ಎಂಜಿಆರ್ ಬಳಿ 10 ವರ್ಷ ಕೆಲಸ. ಆಗ ದಿನಕ್ಕೆ 3 ರುಪಾಯಿ ಕೂಲಿ. ಇಡೀ ಒಂದು ವಿಗ್ಗೆ 30 ರಿಂದ 50 ರುಪಾಯಿ ಕೊಡೋರು. ಎಂಜಿಆರ್ ಮುಖ್ಯಮಂತ್ರಿಯಾದ್ರು. ನಾನು ಸ್ವತಂತ್ರವಾಗಿ ಎನ್ಟಿಆರ್ ಹತ್ತಿರ ಕೆಲಸಕ್ಕೆ ಸೇರಿದೆ. ಇಲ್ಲಿ 8 ವರ್ಷ ಕೆಲಸ ಮಾಡಿದೆ. 1976ರಲ್ಲಿ 'ಸೋದರರ ಸವಾಲ್', 'ಸ್ನೇಹಿತರ ಸವಾಲ್' ಚಿತ್ರಗಳ ಮೂಲಕ ಕನ್ನಡಕ್ಕೆ ಬಂದೆ. 1979ರಲ್ಲಿ ಬೆಂಗಳೂರಿಗೆ ಬಂದೆ. ಡಾ. ರಾಜ್ಕುಮಾರ್ ಅಭಿನಯದ 'ಶಂಕರ್ ಗುರು' ಚಿತ್ರದಿಂದ 'ಶಬ್ದವೇಧಿ'ವರೆಗೂ ನಾನೇ ಅಣ್ಣಾವ್ರುಗೆ ವಿಗ್ ಮಾಡಿಕೊಟ್ಟಿದ್ದು. ನಂತರ ನಟ ವಿಷ್ಣುವರ್ಧನ್ ಅವರ ಜೊತೆ 8 ವರ್ಷ ಕೆಲಸ ಮಾಡಿದೆ. ಜೊತೆಗೆ ಅಂಬರೀಶ್, ಅನಂತ್ನಾಗ್, ಶಂಕರ್ನಾಗ್, ರವಿಚಂದ್ರನ್, ವಜ್ರಮುನಿ, ರಮೇಶ್, ಶಿವರಾಜ್ಕುಮಾರ್, ಉಪೇಂದ್ರ, ಜಗ್ಗೇಶ್, ಭಾರತಿ, ಜಯಂತಿ, ಲೀಲಾವತಿ, ಹರಿಣಿ, ಮಂಜುಳಾ, ಕಲ್ಪನಾ, ಬಿ. ಸರೋಜದೇವಿ, ಗಾಯಿತ್ರಿ ಸೇರಿದಂತೆ ನೂರಾರು ನಟ, ನಟಿಯರಿಗೆ ವಿಗ್ ತಯಾರಿಸಿ ಕೊಟ್ಟಿದ್ದೇನೆ. ಮುಖ ಹೇಗೇ ಇರಲಿ, ಕೇಶಾಲಂಕಾರದಿಂದ ಆ ನಟ ಅಥವಾ ನಟಿ ತೆರೆ ಮೇಲೆ ಸೂಪರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದು ನನ್ನ ವಿಗ್ ಮಹಿಮೆ. ವಿಗ್ ಸಂಸ್ಕೃತಿ ಈಗ ಗ್ಲಾಮರ್ ಮಯವಾಗಿರುವುದರಿಂದ ತುಂಬಾ ನ್ಯಾಚುರಲ್ ಆಗಿ ವಿಗ್ ತಯಾರಿಸುವುದು ನನ್ನ ವಿಶೇಷತೆ.
ಒಂದು ವಿಗ್ ತಯಾರಿಸಲು 50 ರಿಂದ 1 ಲಕ್ಷ ಬೇಕಾಗುತ್ತದೆ. 25 ಸಾವಿರ ಹುಡುಗರು, 5 ಸಾವಿರ ಹುಡಗಿಯರು ಮದುವೆ ಸಮಯದಲ್ಲಿ ನನ್ನದೇ ವಿಗ್ ಧರಿಸಿದ್ದಾರೆ. 75 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದೇನೆ. 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಲಾವಿದರಿಗೆ ವಿಗ್, ಮೀಸೆ, ಕಣ್ಣುಹುಬ್ಬು, ಗಡ್ಡ ತಯಾರಿಸಿಕೊಟ್ಟಿದ್ದೇನೆ. ಚಿತ್ರದ ಪಾತ್ರಗಳು ಮತ್ತು ಅವುಗಳ ವಯಸ್ಸು ಹೇಳುತ್ತಾರೆ. ಅದಕ್ಕೆ ತಕ್ಕಂತೆ ವಿಗ್ ಮಾಡಿಕೊಡುತ್ತೇವೆ.. ಒಂದು ವಿಗ್ ಹೊಲಿದು ಅದಕ್ಕೆ ಶೇಪ್ ಕೊಟ್ಟು ಸಿದ್ಧ ಮಾಡಲು ಕನಿಷ್ಠ 2 ದಿನ ಬೇಕು.
ಕೂದಲಿಗೆ ತುಂಬಾ ಬೆಲೆ ಇದೆ. ತಿರುಪತಿಯಲ್ಲೇ ಕೂದಲು ಮಾರಾಟದಿಂದ ವರ್ಷಕ್ಕೆ 60ರಿಂದ 70 ಕೋಟಿ ವಹಿವಾಟು ಆಗುತ್ತದೆ. ಶೇ. 80 ಭಾಗ ಕೂದಲು ವಿದೇಶಕ್ಕೆ ರಫ್ತು ಆಗುತ್ತದೆ. ಇದರಲ್ಲಿ ಧರ್ಮಸ್ಥಳದ ಪಾಲೂ ಇದೆ. ನಾನು ಒಂದು ಕೆಜಿ ಕೂದಲಿಗೆ 3ರಿಂದ 4 ಸಾವಿರ ವೆಚ್ಚ ಮಾಡುತ್ತೇನೆ. ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳ, ಮುಂಬೈ ಮಾತ್ರವಲ್ಲ ಆಮೆರಿಕ, ಫ್ರಾನ್ಸ್, ನೈಜೀರಿಯಾ, ಆಫ್ರಿಕ, ಕೀನ್ಯಾ ಮುಂತಾದ ಕಡೆ ನನ್ನದೇ ಬ್ರಾಂಚ್ಗಳಿವೆ. ಅಲ್ಲಿನ ಕಂಪನಿಗಳ ಜೊತೆಗೆ ಸೇರಿ ಇಲ್ಲಿಂದ ವಿಗ್ಗಳನ್ನು ರಫ್ತು ಮಾಡುತ್ತೇನೆ. ಈ ವಿಗ್ ಕಸುಬು ಕಲಿಸಿಕೊಡಬೇಕೆಂಬ ಆಸೆ ಇದೆ. ಈಗ ನನ್ನ ಬಳಿ 10 ಮಂದಿ ಕೆಲಸ ಮಾಡುತ್ತಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣೆ ಮುಂದೆ ವಿಗ್ ಡಿಸೈನ್ ಅಂಗಡಿ ಇದೆ. ಇಲ್ಲಿಗೆ ಯಾರೇ ಬರಲಿ. ವಿಗ್ ಕಲೆ ಕಲಿಸಿಕೊಡುತ್ತೇನೆ.
... ಇಷ್ಟು ಹೇಳಿ ತಮ್ಮ ಮಾತು ಮುಗಿಸಿದ ಜಿ. ನಾಗೇಶ್ವರರಾವ್ ಮುಖದಲ್ಲಿ ಸಂತಸವಿತ್ತು. ವಿದ್ಯೆ ಇಲ್ಲದಿದ್ದರೂ ನಂಬಿದ ಕೆಲಸದಿಂದಲೇ ಸಾಧನೆಯ ಮೆಟ್ಟಿಲು ಹತ್ತಿದ ವ್ಯಕ್ತಿ. ಭಾರತದಿಂದ ಅಮೆರಿಕವರೆಗೂ ಈ ಅನಕ್ಷರಸ್ಥನ ವಿಗ್ ಸ್ಟೋರಿ ಚಾಚಿಕೊಂಡಿದೆ.
- ಆರ್. ಕೇಶವಮೂರ್ತಿ
ಚಿತ್ರಗಳು: ಡಿ.ಸಿ ನಾಗೇಶ್