ಅಂತೂ ಇಂತೂ ಅಜಯ್ರಾವ್ ಅಭಿನಯದ ಚಿತ್ರವೊಂದು ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಬೇಕಿದ್ದ 'ರೋಸ್' ಈಗ ಜೂನ್ನಲ್ಲಿ ತೆರೆಕಾಣಲಿದೆ. ಚಿತ್ರದ ನಿರ್ಮಾಪಕರು ಸಿನಿಮಾಕ್ಕೆ 3 ಕೋಟಿ ಸುರಿದು ಬಿಡುಗಡೆಗೆ ದುಡ್ಡಿಲ್ಲದೆ ಒದ್ದಾಡಿದ ಕಷ್ಟ ಇನ್ನಿಲ್ಲ. ಇನ್ನು ಚಿತ್ರದ ಸ್ಯಾಟಲೈಟ್ ರೈಟ್ಸ್ ಅಂತೂ ಕೇಳುವವರಿಲ್ಲವಂತೆ. ಇದೇ ಹಾಡುಗಳನ್ನು ಯಾವುದಾದರೂ ಸ್ಟಾರ್ ಸಿನಿಮಾಗೆ ಕೊಟ್ಟಿದ್ದಿದ್ದರೆ ನನ್ನ ಸ್ಟಾರೇ ಬದಲಾಗುತ್ತಿತ್ತು ಅಂತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅಂದುಕೊಂಡಿದ್ದರೂ ಅಚ್ಚರಿ ಇಲ್ಲ. ಅಜಯ್ರಾವ್ ಹೀರೋ ಅಂದಾಕ್ಷಣ ಇವೆಲ್ಲ ಮಾಮೂಲಿ ಬಿಡಿ ಎಂದು ಗಾಂಧಿನಗರ ಮಾತನಾಡಿಕೊಳ್ಳುವ ಮಟ್ಟಕ್ಕೆ ಅಜಯ್ರ ಇಮೇಜ್ ಬಂದು ನಿಂತಿರುವುದು ಅದಕ್ಕೆ ಕಾರಣ. ಕೃಷ್ಣನ್ ಲವ್ಸ್ಟೋರಿಯ ನಂತರ ಅಜಯ್ಗೆ ಕೆಲವು ಸಿನಿಮಾಗಳು ಸಿಕ್ಕರೂ ಸಕ್ಸಸ್ ಮಾತ್ರ ಸಿಕ್ಕಿಲ್ಲ. ಮ್ಯಾರೇಜ್ ಸ್ಟೋರಿ ಒಂದಿಷ್ಟು ಸೌಂಡ್ ಮಾಡಿದ್ದು ಬಿಟ್ಟರೆ ಮನಸಿನ ಮಾತು, ಅದ್ವೈತ, ಬ್ರೇಕಿಂಗ್ ನ್ಯೂಸ್ಗಳು ಹಣ ಬಿಡಿ, ಸುದ್ದಿಯನ್ನೂ ಮಾಡಲಿಲ್ಲ. ಇದರ ನಡುವೆ, ಅವರ ನಾಯಕತ್ವದ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಬರುವುದೇ ದುಸ್ತರವಾಗಿರುವಾಗ ತನ್ನ ಮುಖ ನೋಡಲೆಂದೇ ಜನ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವಂತೆ, ಇನ್ನೊಬ್ಬರ ಸಿನಿಮಾದಲ್ಲಿ ಅಜಯ್ರಾವ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದೂ ಆಯಿತು. ಆದರೆ, ಅದೂ ವರ್ಕ್ ಔಟ್ ಆಗಲಿಲ್ಲ. ಇದರ ಜೊತೆಗೆ ಎಂ.ಎಸ್.ರಮೇಶ್ ನಿರ್ದೇಶನದ ಅಜಯ್ ಅಭಿನಯದ 'ಕೃಷ್ಣ ಸನ್ ಆಫ್ ಸಿಎಂ' ಚಿತ್ರ ಎಲೆಕ್ಷನ್ ಮೇಲೆ ಎಲೆಕ್ಷನ್ ಮುಗಿದು ಹೊಸ ಸಿಎಂ, ಪಿಎಂಗಳು ಬಂದರೂ ಇನ್ನೂ ಬಿಡುಗಡೆಯ ಭಾಗ್ಯ ಕಾಣದೆ ಡಬ್ಬದಲ್ಲೇ ಕೂತಿದೆ. ಜೊತೆಗೆ 'ಜೈ ಭಜರಂಗಬಲಿ' ಎನ್ನುವ ಹೆಸರಿನ ಚಿತ್ರ ಕೂಡ ಹೆಚ್ಚು ಕಮ್ಮಿ ಎಲ್ಲರಿಗೂ ಮರೆತೇ ಹೋಗಿದೆ. ಹೀಗೆ ಅಜಯನ ಎಲ್ಲಾ ಸಾಹಸಗಳು ಕೈ ಕೊಟ್ಟಿದ್ದೇ ಹೆಚ್ಚು. ಈಗ 'ರೋಸ್' ಕೂಡ ಅದೇ ಎರಡು ಚಿತ್ರಗಳ ಹಾದಿ ಹಿಡಿದು ಅಜಯ್ರಾವ್ 'ಹ್ಯಾಟ್ರಿಕ್ ಹೀರೋ' ಆಗುವ ರೇಸ್ನಲ್ಲಿ ಇರುತ್ತಾರೆ ಎನ್ನುವ ಹೊತ್ತಿಗೆ 'ರೋಸ್' ಅಂತೂ ಇಂತೂ ಬಿಡುಗಡೆಗೆ ಬಂದಿದೆ. ಈ ಎಲ್ಲ ಕಾರಣಗಳಿಂದಲೇ ಅಜಯ್ ತಮ್ಮದೇ ಹೋಮ್ ಬ್ಯಾನರ್ ಶುರುಮಾಡಿ 'ಕೃಷ್ಣಲೀಲಾ' ಮೂಲಕ ಮತ್ತೆ ಶಶಾಂಕ್ರ ಮೊರೆ ಹೋಗಿದ್ದಾರೆ. ಹಾಗಾಗಿ, ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವಂತೆ ಶಶಾಂಕ್ರಿಂದ ಬಂದರೆ ಮಾತ್ರ ಹಿಟ್ ಎನ್ನುವ ಪರಿಸ್ಥಿತಿ ಅಜಯ್ ಅವರದ್ದು. ಈ ನಡುವೆ 'ರೋಸ್' ಬಿಡುಗಡೆಯ ಭಾಗ್ಯ ಕಾಣುತ್ತಿರುವುದು ಅಜಯ್ ಪಾಲಿಗೆ ಸಮಾಧಾನ. ಇದಾದರೂ ಹಿಟ್ ಆದರೆ 'ರೋಸ್'ಗಾರ್ ಯೋಜನೆ ಅಡಿಯಲ್ಲಿ ಅಜಯ್ ಪಾಲಿಗೆ ಮತ್ತೆ 'ಅಚ್ಚೇ ರೋಜ್'ಗಳು ಬರಬಹುದು.
-ಹ್ಯಾರಿ