ಅವರೆಲ್ಲ ಏನಾದರೂ ಮಾಡಿ ಮನೆಯೊಂದನ್ನು ಹಾಳು ಮಾಡಲು ಸಜ್ಜಾಗಿ ನಿಂತಿದ್ದರು. ಪೊಲೀಸ್ ತಂಡ, ನಾಲ್ಕು ಜೆಸಿಬಿಗಳು, ದಾಂಡಿಗರ ಗುಂಪು. ಎಲ್ಲರಿಗೂ ಒಂದೇ ಗುರಿ, ಸುಂದರವಾಗಿದ್ದ ಮನೆ ಕೆಡವಿಬಿಡಬೇಕು. ಪಾಪ ಆಗಲೇ ತನ್ನ ಅಪ್ಪನನ್ನು ಕಳೆದುಕೊಂಡು ಆ ಹುಡುಗಿ ತನ್ನ ಮನೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಇನ್ನಿಲ್ಲದಂತೆ ಹರಸಾಹಸ ಮಾಡುತ್ತಿದ್ದಳು. ಪೊಲೀಸರು ಬಿಡಬೇಕಲ್ಲ, ಕೊನೆಗೂ ಲಕ್ಷಾಂತರ ರುಪಾಯಿ ವೆಚ್ಚದ ಮನೆ ಹಾಳು ಮಾಡಿಬಿಟ್ಟರು. ನೂರಾರು ನಿಂತು ನೋಡುತ್ತಿದ್ದರು. ಕಾನೂನು, ಪೊಲೀಸು ಎಲ್ಲ ಒಂದು ಕಡೆ. ಸಾಲದಕ್ಕೆ ಮಾಧ್ಯಮಗಳ ದಂಡು ಕೂಡ ಈ ಮನೆಹಾಳು ಕೆಲಸವನ್ನು ನೋಡಲೆಂದೇ ಕಾದು ಕುಳಿತಿದ್ದರು. ಅಪ್ಪ-ಅಮ್ಮ ಇಲ್ಲದ ಹುಡುಗಿ ತನ್ನ ಮನೆ ಕೆಡವುತಿದ್ದನ್ನು ನೋಡಿ ನೆಲಕ್ಕುರುಳಿದಳು. ಹೀಗೊಂದು ಮನೆಹಾಳು ಕೆಲಸ ನಡೆದದ್ದು ಎಲ್ಲಿ ಅಂತೀರಾ? ಬೈಲೂರಿನಲ್ಲಿ. ಅಂದಹಾಗೆ ಈ ಮನೆ ಹಾಳು ಮಾಡಿದ್ದು ರೀಲು ಹೌದು, ರಿಯಲ್ಲು ಹೌದು. ಮೊದಲು ರಿಯಲ್. ಆ ನಂತರ ರೀಲು. ನಿಮ್ಮ ಊಹೆ ಸರಿಯಾಗಿದೆ. ಒಂದು ನೈಜ ಘಟನೆ ರೀಲಿನಲ್ಲಿ ದೃಶ್ಯವಾಗುತ್ತಿದೆ.
ಆದರೆ, ರಿಯಲ್ ಆಗಿ ಮನೆ ಕೆಡವಿ ಒಂದು ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ದು ಎಸ್‌ಇಝಡ್. ಅರ್ಥಾತ್ ವಿಶೇಷ ಆರ್ಥಿಕ ವಲಯ ಎನ್ನುವ ಜನ ಸಾಮಾನ್ಯರ ವಿರೋಧಿ ಯೋಜನೆ. ಈ ಎಸ್‌ಇಝಡ್‌ಗಾಗಿ ತುಂಬಾ ಹಿಂದೆಯೇ ಬದುಕಿನ ನೆಲೆಯನ್ನು ಕಳೆದುಕೊಂಡ ಕುಟುಂಬದ ಕಥೆಯನ್ನೇ ತೆರೆ ಮೇಲೆ ತರುತ್ತಿದೆ ರಿಕ್ಕಿ ಚಿತ್ರ.
ಹೀಗಾಗಿ ಅಂದು ರಿಯಲ್ ಈಗಿ ನಡೆದ ಮನೆಹಾಳು ಕೆಲಸವನ್ನು ಇಂದು ರೀಲ್‌ನಲ್ಲಿ ಮುಂದೆ ನಿಂತು ನಿರ್ದೇಶಕ ರಿಷಬ್ ಶೆಟ್ಟಿಯಿಂದ ಮಾಡಿಸಿದ್ದು ನಿರ್ಮಾಪಕರಾದ ಎಸ್.ವಿ.ಬಾಬು ಹಾಗೂ ಎ. ಗಣೇಶ್. ಮನೆ ಕಳೆದುಕೊಂಡ ಪಾತ್ರದಲ್ಲಿ ನೆಲಕ್ಕೆ ಬಿದ್ದು ಒದ್ದಾಡಿದ್ದು ನಟಿ ಹರಿಪ್ರಿಯಾ. ಈಕೆಯ ಕಣ್ಣೀರಿಗೆ ಸಾಕ್ಷಿಯಾಗಿದ್ದು ಚಿತ್ರದ ನಾಯಕ ರಕ್ಷಿತ್ ಶೆಟ್ಟಿ. ಆದರೆ, ಈ ಘಟನೆ ಕೇಳಿ ಇವರು ಮನೆಹಾಳು ಮಾಡುವವರು ಎಂದು ಪಾಪ ಬಾಬು ಮತ್ತು ಗಣೇಶ್ ಅವರನ್ನು ಕಾಳೆಲೆಯಬೇಡಿ. ಅದು ದೂರದ ಕಾರ್ಕಳದ ಬೈಲೂರು. ಬೆಂಗಳೂರಿನಿಂದ ಅತ್ಯಂತ ದುರ್ಗಮ ತಿರುವುಗಳನ್ನು, ಹಸಿರು ಗುಡ್ಡಗಳನ್ನು ದಾಟಿ ಕಾರ್ಕಳ ತಲುಪಿ, ಮತ್ತೆ ಅಲ್ಲಿಂದ 20 ಕಿಲೋಮೀಟರ್ ದೂರ ಸಾಗಿ ಬೈಲೂರಿನ ಗದ್ದೆಯಲ್ಲಿ ಇಳಿಯುವಷ್ಟರಲ್ಲಿ ಬೆವರು ಕಿತ್ತುಕೊಂಡು ಬರುತ್ತಿತ್ತು. ದೂರದಿಂದ ಪ್ರಯಾಣ ಮಾಡಿದವರಿಗಿಂತಲೂ ಅಲ್ಲಿ ಕೆಲಸ ಮಾಡುತ್ತಿದ್ದವರೇ ಬೆವರಿನಲ್ಲಿ ಸ್ನಾನ ಮಾಡಿದಂತಿದ್ದರು. ನಿಜವಾದ ಅರ್ಥದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ಅವರೆಲ್ಲ ಕನ್ನಡ ಸಿನಿಮಾ ಮಾಡುತ್ತಿದ್ದರು. ಹೀಗಾಗಿ ಸಾಮಾನ್ಯವಾಗಿ ಪತ್ರಿಕಾಗೋಷ್ಟಿಗಳಲ್ಲಿ ಕೇಳುವಂತೆ, ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎನ್ನುವ ಮಾತಿಗೆ ಅವರ ಕೆಲಸ ಅರ್ಥ ಪೂರ್ಣವಾಗಿತ್ತು. ಹೀಗೆ ಬಿಸಿಲು, ಬೆವರನ್ನು ಲೆಕ್ಕಿಸದೆ ಬೈಲೂರಿನ ಗದ್ದೆಯಲ್ಲೊಂದು ಮನೆ ಕಟ್ಟಿ ಅದರ ಮುಂದೆ ಚಿತ್ರೀಕರಣ ಮಾಡುವುದರಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಪತ್ರಕರ್ತರಿಗೊಂದು ವಿಷ್ ಮಾಡಿ ಆ್ಯಕ್ಷನ್ ಕಟ್ ಹೇಳುವುದರಲ್ಲಿ ಮುಳುಗಿದರು.
ಎಸ್‌ಇಝಡ್ ಅವಾಂತರ, ಮನೆ ಕಳೆದುಕೊಂಡ ಕುಟುಂಬ, ಕಾಡು, ನಕ್ಸಲೀಯರು ಇದರ ನಡುವೆ ರಾಧಾ ಮತ್ತು ಕೃಷ್ಣನ ಪ್ರೇಮ ಕಥೆಯನ್ನು ಕಟ್ಟಿಕೊಡುವ ರಿಷಬ್ ಶೆಟ್ಟಿ, ಒಂದು ಕಮರ್ಷಿಯಲ್ ಚಿತ್ರದೊಳಗೆ ಸಾಮಾಜಿಕ ಕಳಕಳಿಯನ್ನು ತೋರುವ ನಿಟ್ಟಿನಲ್ಲಿ ರಿಕ್ಕಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಚಿತ್ರೀಕರಣ ಮಾಡುವ ತಂಡ. ತಾವು ಅಂದುಕೊಂಡಂತೆ ಪ್ರತಿ ದೃಶ್ಯವೂ ತೆರೆ ಮೇಲೆ ಬರಲಿದೆ ಎನ್ನುವ ಸಮಾಧಾನ ನಿರ್ದೇಶಕ ರದ್ದು.
- ಆರ್. ಕೇಶವಮೂರ್ತಿ