ಅದು 1970ರ ದಶಕ. ಕನ್ನಡ ಚಲನಚಿತ್ರರಂಗದ ವಸಂತ ಕಾಲ. ಹೊಸ ಆಲೋಚನೆಗಳಿಗೆ ಮತ್ತು ಹೊಸ ಬಗೆಯ ತಂತ್ರಜ್ಞಾನಕ್ಕೆ ನಮ್ಮ ಸಿನಿಮಾರಂಗ ತನ್ನನ್ನು ಒಡ್ಡಿಕೊಳ್ಳುತ್ತಿತ್ತು. ಪ್ರೇಕ್ಷಕರನ್ನು ರಂಜಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗ ಮತ್ತು ಪ್ರಯತ್ನಗಳು ಎಡೆತಡೆಯಿಲ್ಲದೆ ಸಾಗುತ್ತಿತ್ತು. ಅಂತಹ ಮಿಂಚಿನ ಸಂಚಲನದ ಹಿಂದೆ ಇದ್ದ ಶಕ್ತಿಯ ಹೆಸರು ಶಂಕರ್‌ನಾಗ್. ಕೇವಲ 10 ವರ್ಷಗಳಲ್ಲಿ ವೃತ್ತಿ ಬದುಕಿನ 10 ದಶಕದ ಕೆಲಸ ಮಾಡಿ ಅದ್ಭುತಗಳನ್ನು ಸಾಧಿಸಿ ಮೋಡದ ಮರೆಗೆ ಸರಿದ ಅಸೀಮ ವೇಗಿ. ಆತ ಬದುಕಿದ್ದರೆ ಇವತ್ತಿಗೆ ಭರ್ತಿ 60 ವರ್ಷ ತುಂಬಿರುತ್ತಿತ್ತು.
ಶಂಕರ್‌ನಾಗ್ ಎಂಬ ಹೆಸರು ಕೇಳಿದ ಕೂಡಲೇ ಸೌಮ್ಯ ಮುಖ, ಮುಖದ ತುಂಬ ನಿರ್ಮಲ ನಗು, ಕುರುಚಲು ಗಡ್ಡ ಮತ್ತು ಒರಟು ಧ್ವನಿಯ ವ್ಯಕ್ತಿತ್ವವೊಂದು ಎದ್ದು ನಿಲ್ಲುತ್ತದೆ. ಅದರ ಜತೆಗೇ ಒಂದಷ್ಟು ವಿಭಿನ್ನ ಪಾತ್ರಗಳು.
ಶಂಕರ್ ಕ್ರಿಯಾಶೀಲತೆಗೆ ಮುನ್ನುಡಿ ಬರೆದ ಮಿಂಚಿನ ಓಟ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿಸಿ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ಆಟೋರಾಜ ಚಿತ್ರದ ಅಭಿನಯ ಶಂಕರ್‌ರನ್ನು ಆಟೋಚಾಲಕರ ಆರಾಧ್ಯ ದೈವವನ್ನಾಗಿಸಿತು. ಜೊತಚೆಗ ಶಂಕರ್ ಆಟೋ ಡ್ರೈವರ್‌ಗಳ ಪ್ರೀತಿಯ ಶಂಕ್ರಣ್ಣ ಆಗಿ ಬಿಟ್ರು. ತಮ್ಮ 11 ವರ್ಷದ ವೃತ್ತಿ ಜೀವನದಲ್ಲಿ ಶಂಕರ್ ನಟಿಸಿ, ನಿರ್ದೇಶಿಸಿದ ಚಿತ್ರಗಳ ಸಂಖ್ಯೆ 80. ಒಂದೇ ವರ್ಷದಲ್ಲಿ 16 ಚಿತ್ರ ಬಿಡುಗಡೆಗೊಳಿಸಿದ ಹೆಗ್ಗಳಿಕೆ.
ವರನಟ ಡಾ. ರಾಜ್‌ಗೆ ಶಂಕರ್ ಎಂದರೆ ಬಲುಪ್ರೀತಿ. ಅದೇ ಕಾರಣಕ್ಕೆ ರಾಜ್ ಅಭಿನಯದ ಒಂದು ಮುತ್ತಿನ ಕಥೆ ಚಿತ್ರ ನಿರ್ದೇಶಿಸುವ ಅಪೂರ್ವ ಅವಕಾಶ. ಈ ಚಿತ್ರದಲ್ಲಿ ಶಂಕರ್ ಪ್ರದರ್ಶಿಸಿರುವ ತಾಂತ್ರಿಕ ನೈಪುಣ್ಯ ಬೆರಗು ಮೂಡಿಸುವಂಥದ್ದು. ಈ ಚಿತ್ರದ ದೃಶ್ಯವೊಂದನ್ನು ಸಮುದ್ರದ ಆಳಕ್ಕೆ ಹೋಗಿ ಚಿತ್ರೀಕರಿಸಬೇಕಾಗಿತ್ತು. ಅದಕ್ಕಾಗಿ ಕೆನಡಾಕ್ಕೆ ಹೋಗಿ ಚಿತ್ರೀಕರಿಸಬೇಕಾಗಿತ್ತು. ಅದಕ್ಕಾಗಿ ಕೆನಾಡಕ್ಕೆ ಹೋಗಿ ಅತ್ಯಾಧುನಿಕ ಕ್ಯಾಮೆರಾ ತಂದರು. ಲಂಡನ್‌ಗೆ ಹೋಗಿ ಕೃತಕ ಅಕ್ಟೋಪಸ್ ತಂದರು. ಮಾಲ್ದೀವ್ಸ್‌ನಿಂದ ಕ್ಯಾಮೆರಾಮನ್ ಕರೆಸಿ ಇಡೀ ದೃಶ್ಯವನ್ನು ಅಂಡಮಾನ್‌ನಲ್ಲಿ ಚಿತ್ರಿಸಿದರು. ಅಂತಹ ಸಾಹಸಿ ಶಂಕರ್‌ನಾಗ್. ಅಂತೆಯೇ ಆ್ಯಕ್ಸಿಡೆಂಟ್ ಚಿತ್ರೀಕರಣ ಸಂದರ್ಭ ಬೆಳಕಿನ ಹೊಸ ತಂತ್ರಜ್ಞಾನ ಬಳಸಿಕೊಂಡು ಕೃತಕ ಸೂರ್ಯನನ್ನೇ ಸೃಷ್ಟಿಸಿದರು.
1987ರಲ್ಲಿ ಶಂಕರ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಧಾರವಾಹಿ ಅವರ ದೈತ್ಯ ಪ್ರತಿಭೆಯನ್ನು ಕನ್ನಡಿಗರ ಮುಂದೆ ತೆರೆದಿಟ್ಟಿತು. ಇಂದಿಗೂ ಈ ಧಾರವಾಹಿ ದೂರದರ್ಶನದಲ್ಲಿ ಪ್ರಸಾರಗೊಂಡಿರುವ ಧಾರವಾಹಿಗಳ ಪೈಕಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕನ್ನಡದ ಹೊಸ ಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದಾಗ ಹಿನ್ನೆಲೆ ಸಂಗೀತದ ರೆಕಾರ್ಡಿಂಗ್ ಸೌಲಭ್ಯಗಳು ಬೆಂಗಳೂರಿನ ಯಾವ ಸ್ಟುಡಿಯೋಗಳಲ್ಲೂ ಇರಲಿಲ್ಲ. ಅದನ್ನು ಕಂಡ ಶಂಕರ್ ಅತ್ಯಾಧುನಿಕ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಲು ನಿರ್ಧರಿಸಿದರು. ಅದರ ಪರಿಣಾಮವೇ ಬೆಂಗಳೂರಿನ ಪ್ರಪ್ರಥಮ ರೆಕಾರ್ಡಿಂಗ್ ಸ್ಟುಡಿಯೋ ಸಂಕೇತ್ ಎಲೆಕ್ಟ್ರಾನಿಕ್ಸ್.
ರಂಗಭೂಮಿಯನ್ನೂ ಅಷ್ಟೇ ಪ್ರೀತಿಸಿ ಬೆಳೆಸಿ ಆರಾಧಿಸಿದವರು ಶಂಕರ್. ಬೆಂಗಳೂರಿನ ಪ್ರತಿಬಡಾವಣೆಯಲ್ಲೂ ರಂಗ ಚಟುವಟಿಕೆ ನಡೆಸಲು ರಂಗ ಮಂದಿರ ನಿರ್ಮಿಸಲು ಅವರು ಸರ್ಕಾರವನ್ನು ಒತ್ತಾಯಿಸಿದ್ದರು. ಬೆಂಗಳೂರಿನಲ್ಲಿ ವಿಶ್ವದರ್ಜೆಯ ಬೃಹತ್ ರಂಗ ಮಂದಿರ ನಿರ್ಮಿಸಿ ಒಂದೇ ಸೂರಿನಡಿ ರಂಗಭೂಮಿ ಕಲಾವಿದರು, ತಂತ್ರಜ್ಞರು ಮತ್ತು ವೀಕ್ಷಕರನ್ನು ತಂದು ನಿಲ್ಲಿಸುವ ಮಹತ್ತರ ಕನಸನ್ನು ಕಂಡಿದ್ದರು. ಶಂಕರ್‌ರ ಈ ಕನಸಿನ ಕೂಸು ಅವರ ಅರ್ಧಾಗಿ ಆರುಂಧತಿ ನಾಗ್‌ರಿಂದ ಪೂರ್ತಿಯಾಯಿತು. ಈಗ್ಗೆ ಇಪ್ಪತ್ತು ವರ್ಷ ಹಿಂದೆಯೇ ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ, ಅತೀ ಕಡಿಮೆ ವೆಚ್ಚದಲ್ಲಿ ಬಡಬಗ್ಗರಿಗೆ ಮನೆ ನಿರ್ಮಿಸುವ ಮತ್ತು ಬೆಂಗಳೂರು ನಗರಕ್ಕೆ ಮೆಟ್ರೋ ರೈಲು ತರುವ ಕನಸು ಕಂಡಿದ್ದರು. ಈ ಎಲ್ಲ ಯೋಜನೆಗಳ ಅನುಷ್ಠಾನದ ಸಂಪೂರ್ಣ ನೀಲನಕ್ಷೆ ರಾಜ್ಯ ಸರ್ಕಾರದ ಮುಂದಿಟ್ಟಿದ್ದರು. ಇದು ಅವರ ಕ್ರಿಯಾಶೀಲತೆ, ಸೃಜನಶೀಲತೆ, ದೂರದೃಷ್ಟಿಗೆ ಹಿಡಿದ ಕೈಗನ್ನಡಿ.
-ಎಸ್. ಉಮೇಶ್
umesha_S@infosys.com