ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ 'ವಿರಾಟ್' ಸಿನೆಮಾವನ್ನು ಈಗ ನಿರ್ಮಾಪಕ ಹಾಗೂ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಲಿಯ ಮಾಜಿ ಅಧ್ಯಕ್ಷ ಸಿ ಕಲ್ಯಾಣ್ ವಹಿಸಿಕೊಂಡಿರುವುದರಿಂದ, ನೆನೆಗುದಿಗೆ ಬಿದ್ದಿದ್ದ ಸಿನೆಮಾ ಶೀಘ್ರದಲ್ಲೆ ಬೆಳ್ಳಿತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ನಿರ್ದೇಶಕ ಎಚ್ ವಾಸು ಅವರ ಪ್ರಕಾರ, ದರ್ಶನ್ ಅವರು ಐರಾವತ ಚಿತ್ರೀಕರಣ ಮುಗಿಸಿದ ನಂತರ ಜೂನ್ ೧೦ ರಿಂದ ವಿರಾಟ್ ಸಿನೆಮಾದ ಚಿತ್ರೀಕರಣ ಮುಂದುವರೆಯಲಿದೆ ಎಂದಿದ್ದಾರೆ. "೨೦% ಚಿತ್ರೀಕರಣವಷ್ಟೇ ಉಳಿದಿದೆ. ಇದಕ್ಕೆ ಹೆಚ್ಚೆಂದರೆ ೩೦ ದಿನ ಹಿಡಿಯಬಹುದು. ದರ್ಶನ್ ಅವರು ಚಿತ್ರೀಕರಣಕ್ಕಾಗಿ ೨೦ ದಿನಗಳನ್ನು ನೀಡಿದ್ದಾರೆ. ಕೊನೆಯ ಕ್ಷಣದ ಕೆಲಸಗಳಿಗಾಗಿ ೧೦ ದಿನಗಳನ್ನು ಸೇರಿಸಿಕೊಂಡಿದ್ದೇನೆ" ಎಂದು ಅವರು ವಿವರಿಸುತ್ತಾರೆ.
೨೦೧೧ ರಲ್ಲೇ ಸಿನೆಮಾ ಸೆಟ್ಟೇರಿದ್ದರೂ, ನಿರ್ಮಾಪಕ ರತನ್ ಕುಮಾರ್ ಅವರ ಹಣಕಾಸಿನ ತೊಂದರೆಯಿಂದ ಚಿತ್ರೀಕರಣ ಅರ್ಧದಲ್ಲೇ ನಿಂತಿತ್ತು. ಇದರಿಂದ ದರ್ಶನ್ ಅವರು ಬೇರೆ ಸಿನೆಮಾ ಕೂಡ ಕೈಗೆತ್ತುಕೊಳ್ಳದೆ ಕಾಯುವ ಪರಿಸ್ಥಿತಿ ಬಂದಿತ್ತು ಎನ್ನಲಾಗಿದೆ. "ನಾವು ಎಲ್ಲ ತೊಂದರೆಗಳನ್ನು ಬಗೆಹರಿಸಿಕೊಂಡಿದ್ದೇವೆ. ದರ್ಶನ್ ಅವರ ಐರಾವತ ಸಿನೆಮಾದ ಬಿಡುಗಡೆಯ ನಂತರವೇ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಆಕ್ಷನ್ ಮತ್ತು ಡ್ರಾಮಾ ಒಟ್ಟಿಗೆ ಇರುವ ವಿರಾಟ್ ಸಿನೆಮಾದಲ್ಲಿ ವಿದಿಶಾ, ಚೈತ್ರ ಚಂದ್ರನಾಥ್ ಮತ್ತು ಇಶಾ ಚಾವ್ಲಾ ಮೂರು ಜನ ಮುಖ್ಯ ನಟಿಯರು. ಎಂ ಎಸ್ ರಮೇಶ್ ಅವರ ಸಂಭಾಷಣೆಯಿದ್ದು, ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದರೆ, ಎವಿ ಕೃಷ್ಣಕುಮಾರ್ ಸಿನೆಮ್ಯಾಟೊಗ್ರಾಫರ್.