ಬೆಂಗಳೂರು: ರನ್ನ ಸಿನೆಮಾದ ಬಿಡುಗಡೆಯ ನಂತರ ರಚಿತಾ ರಾಮ್ ಒಪ್ಪಿಕೊಂಡಿದ್ದ ಸಿನೆಮಾಗಳ ಚಿತ್ರೀಕರಣಕ್ಕೆ ಕಾಯುತ್ತಿದ್ದು ಈಗ ಕಾಯುವಿಕೆ ಮುಕ್ತಾಯಗೊಂಡಿದೆ. ಏಪ್ರಿಲ್ ನಲ್ಲಿ ಸಹಿ ಮಾಡಿದ್ದ ಧ್ರುವ್ ಸರ್ಜಾ ಅವರೊಂದಿಗೆ ನಟಿಸಬೇಕಿದ್ದ 'ಭರ್ಜರಿ' ಸಿನೆಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಪುನೀತ್ ರಾಜಕುಮಾರ್ ಅವರೊಂದಿಗಿನ 'ಚಕ್ರವ್ಯೂಹ' ಚಿತ್ರೀಕರಣಕ್ಕೆ ಸಿದ್ದವಾಗಿದೆ.
ಆಗಸ್ಟ್ ೨೮ ರಂದು 'ಚಕ್ರವ್ಯೂಹ' ತಂಡವನ್ನು ರಚಿತಾ ರಾಮ್ ಸೇರಿಕೊಳ್ಳಲಿದ್ದಾರೆ. ಸದ್ಯಕ್ಕೆ ಶ್ರೀಮುರಳಿ ಅವರೊಂದಿಗೆ 'ರಥಾವರ' ಸಿನೆಮಾದ ಕೆಲವು ಹಾಡುಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. "ನಾನು ಭರ್ಜರಿ ಮತ್ತು ಚಕ್ರವ್ಯೂಹ ಸಿನೆಮಾಗಳಿಗೆ ಸಹಿ ಹಾಕಿದ ಮೇಲೆ ಹಲವಾರು ಅವಕಾಶಗಳು ಹುಡುಕಿ ಬಂದವು. ಆದರೆ ಒಪ್ಪಿಒಕೊಂಡಿರುವ ಈ ಸಿನೆಮಾಗಳನ್ನು ಪೂರೈಸದೆ ಬೇರೆ ಸಿನೆಮಾಗಳಿಗೆ ದಿನಾಂಕ ಕೊಡಲು ಸಾಧ್ಯವಾಗಲಿಲ್ಲ" ಎನ್ನುತ್ತಾರೆ ರಚಿತಾ.
ತಮ್ಮ ವೃತ್ತಿಪರ ಜೀವನದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ರಚಿತಾ "ನಾನು ನೈಜ ನಟಿಯಾಗಿ ಪ್ರದರ್ಶನ ನೀಡಬಲ್ಲ ಯೋಜನೆಗಳನ್ನಷ್ಟೇ ಒಪ್ಪಿಕೊಳ್ಳುತ್ತಿದ್ದೇನೆ. ನಾನು ದುಡ್ಡು ಗಳಿಸುವ ಯಂತ್ರವಾಗಲು ಬಯಸುವುದಿಲ್ಲ. 'ಬಾಹುಬಲಿ'ಯಂತಹ ಸಿನೆಮಾಗಳಲ್ಲಿ, ರಾಜಮೌಳಿ ಅಂತಹ ನಿರ್ದೇಶಕರ ಜೊತೆ ಕೆಲಸ ಮಾಡುವಾಸೆ" ಎನ್ನುತ್ತಾರೆ ಅವರು.
ದರ್ಶನ್, ಸುದೀಪ್ ಮತ್ತು ಗಣೇಶ್ ಅಂತಹ ಜನಪ್ರಿಯ ನಟರೊಂದಿಗೆ ನಟಿಸಿರುವ ರಚಿತಾ "ಪುನೀತ್ ಹೆಸರು ಕೇಳಿದಾಕ್ಷಣ ಅವರ ಎಂದೆಂದಿಗೂ ಹಸಿರಾಗಿರುವ ಸಿನೆಮಾ 'ಮಿಲನ' ನನಪಿಗೆ ಬರುತ್ತದೆ. ಅವರು ಅದ್ಭುತ ನಟ ಮತ್ತು ಅತಿ ಒಳ್ಳೆಯ ಡ್ಯಾನ್ಸರ್. ಚಕ್ರವ್ಯೂಹದ ಸ್ಕ್ರಿಪ್ಟ್ ನೋಡಿದರೆ ಬಹುಶಃ ನನಗೆ ನೃತ್ಯದ ಅವಕಾಶ ಇಲ್ಲ. ಆದರೆ ಅವರೊಂದಿಗೆ ಹೆಜ್ಜೆ ಹಾಕುವುದಕ್ಕೆ ಎದುರು ನೋಡುತ್ತಿದ್ದೇನೆ" ಎನ್ನುತ್ತಾರೆ ರಚಿತಾ.