ಬೆಂಗಳೂರು: ಈಗಾಗಲೇ ತಮಿಳು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿರುವ ಖ್ಯಾತ ದಕ್ಷಿಣ ಭಾರತದ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಅವರು ಈಗ ಕನ್ನಡ ಚಿತ್ರರಂಗಕ್ಕೆ ಬರಲಿದ್ದು, ಅಪ್ಪನೇ ಸಿನೆಮಾ ನಿರ್ದೇಶನ ಮಾಡಲಿದ್ದಾರೆ. ಚೇತನ್, ಐಶ್ವರ್ಯ ಎದುರು ನಟಿಸುತ್ತಿದ್ದು ಇನ್ನೂ ಹೆಸರಿಡದ ಚಿತ್ರ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆ. ತಮಿಳು ಸಿನೆಮಾ 'ಪಟ್ಟಥು ಯಾನೈ' ನಲ್ಲಿ ಐಶ್ವರ್ಯ ಪಾದಾರ್ಪಣೆ ಮಾಡಿದ್ದರು.
ಇದನ್ನು ಧೃಢೀಕರಿಸಿದ ನಟ-ನಿರ್ದೇಶಕ ಅರ್ಜುನ್ ರೊಮ್ಯಾಂಟಿಕ್ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ದೇಶಭಕ್ತಿ ವಿಷಯಗಳ ಸಿನೆಮಾ ಕಡೆ ವಾಲುವ ಅರ್ಜುನ್ ಈಗ ರೋಮ್ಯಾಂಟಿಕ್ ವಿಷಯ ಎತ್ತಿಕೊಂಡಿರುವುದು ವಿಷೇಶ. "ಅದ್ಭುತವಾದ ಲವ್ ಸ್ಟೋರಿ ಇದು. ನಿರ್ದೇಶಕನಾಗಿ ವಿಭಿನ್ನವಾಗಿ ತೊಡಗಿಸಕೊಳ್ಳಲಿದ್ದೇನೆ" ಎನ್ನುತ್ತಾರೆ.
ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿರುವ ಅರ್ಜುನ್ ಈ ಸಿನೆಮಾದಲ್ಲಿ ನಟನೆಯಿಂದ ದೂರ ಉಳಿಯಲು ಚಿಂತಿಸಿದ್ದಾರೆ. "ಇಲ್ಲಿ ನೀವು ವಿಭಿನ್ನ ಅರ್ಜುನ್ ನನ್ನು ನೋಡಲಿದ್ದೀರಿ. ಹಲವಾರು ವರ್ಷಗಳಿಂದ ಈ ಕಥೆ ನನ್ನ ತಲೆಯಲ್ಲಿ ಓಡುತ್ತಿತ್ತು. ಈಗ ಸ್ಕ್ರಿಪ್ಟ್ ರೂಪಕ್ಕೆ ಇಳಿಸಿದ್ದೇನೆ. ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ದೇಶನ ಮಾಡಬೇಕಷ್ಟೆ" ಎನ್ನುತ್ತಾರೆ.
ತಾಂತ್ರಿಕ ವರ್ಗದ ಆಯ್ಕೆ ಜಾರಿಯಲ್ಲಿದ್ದು ಜನವರಿ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.