ಸಿನಿಮಾ ಸುದ್ದಿ

ಹೆದರಬ್ಯಾಡ್ರಿ ಅಂತ....

ಹಲವು ಹಿರಿಯ ನಟನಟಿಯರಿಂದ ಹಿಡಿದು ಇಂದಿನ ಧ್ರುವಸರ್ಜಾ, ರಾಧಿಕಾ ಪಂಡಿತ್, ಪಾರೂಲ್ ವರೆಗೆ ಎಲ್ಲರನ್ನೂ ತಮ್ಮ ಮೇಕಪ್ ಕೈಚಳಕದ ಮೂಲಕ ಚೆಂದವಾಗಿಸಿದ ಮೇಕಪ್ ಮನ್ ದೇವರಾಜ್ ಕುಮಾರ್ ನಿರ್ದೇಶಕನ ಕ್ಯಾಪ್ ಧರಿಸಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗಂತೂ ಈ ಥರದ ದಿಢೀರ್ ಬಡ್ತಿ ಇದೇ ಮೊದಲಿರಬೇಕು. ಆದರೆ ಪ್ರಸಾಧನ ಕಲಾವಿದ ದೇವರಾಜ್‍ರ ಉತ್ಸಾಹ ಹಾಗೂ ಸಿನಿಮಾನುಭವ ಕಂಡವರು ಈ ವಿಷಯ ಕೇಳಿ ಅಚ್ಚರಿಪಡುತ್ತಿಲ್ಲ.

ಹೌದು ದೇವರಾಜ್ ಕುಮಾರ್ ನಿರ್ದೇಶಕನಾಗಿದ್ದಾರೆ. ಚಿತ್ರದ ಹೆಸರು ಡೇಂಜರ್ ಜೋನ್! ಹೆಸರೇ ಹೇಳುವಂತೆ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ಇಂದಿನ ಸ್ಯಾಂಡಲ್  ವುಡ್ ಟ್ರೆಂಡ್ ಎಂಬಂತಿರುವ ಹಾರರ್ ಸಬ್ಜೆಕ್ಟ್ ಆಯ್ಕೆ  ಮಾಡಿಕೊಂಡಿದ್ದಾರೆ. ಈ ಸಂತಸ ಹಂಚಿಕೊಳ್ಳಲೆಂದೇ ಶೂಟಿಂಗ್‍ಗೆ ಹೊರಡುವ ಮುನ್ನ ಅವರು ಮಾಧ್ಯಮವನ್ನು ಭೇಟಿ ಮಾಡಲು ಆಸೆ ಪಟ್ಟದ್ದು.

ಅಂದಿನ ಮಾಧ್ಯಮಗೋಷ್ಠಿಯಲ್ಲಿ ದೇವರಾಜ್ ಎಲ್ಲರಿಗಿಂತ ಹೆಚ್ಚು  ಎಕ್ಸೈಟ್ ಆಗಿದ್ದರು. ಅದಕ್ಕೆ ಕಾರಣವೂ ಇತ್ತು. ಅವರ ಕುರಿತು ಚಿತ್ರೋದ್ಯಮದ ಖ್ಯಾತರಾದ, ನಿರ್ದೇಶಕ ಶಶಾಂಕ್, ಧ್ರುವಸರ್ಜಾ, ರಾಧಿಕಾಪಂಡಿತ್, ಪಾರೂಲ್, ಸಂಗೀತ ನಿರ್ದೇಶಕರು, ಹಲವು ಹಿರಿಯ ನಟರು ಆಡಿದ ಒಳ್ಳೆಯ ಮಾತುಗಳನ್ನಾಡಿದ್ದರು. ಆ ವೀಡಿಯೋತುಣುಕು ಪ್ರದರ್ಶಿಸಿಲಾಯ್ತು. ಚೊಚ್ಚಲ ಚಿತ್ರ ಅನಿಸದಂಥ ತಾಂತ್ರಿಕವಾಗಿ ಉತ್ಕೃಷ್ಟವೆನಿಸುವ ಫಸ್ಟ್ ಲುಕ್ ತೋರಿಸಲಾಯಿತು. ಶಬ್ಧ ಮತ್ತು ಚಿತ್ರದಲ್ಲಿ ನಿಜಕ್ಕೂ ಒಂದಷ್ಟು ಹೆದರಿಕೆ ಹುಟ್ಟಿಸಬಲ್ಲ ಗಿಮಿಕ್‍ಗಳಿರುವುದು ಸ್ಪಷ್ಟವಾಯ್ತು.

ಇದೇ ಮೊದಲ ಬಾರಿ ವೇದಿಕೆಯೊಂದರಲ್ಲಿ ಮಾತನಾಡುತ್ತಿದ್ದೇನೆ. ಭಯ ಆಗ್ತಿದೆ ಅಂತಲೇ ಮಾತು ಶುರುಮಾಡಿದ ದೇವರಾಜ್ ಮಾಧ್ಯಮದವರ ಪ್ರಶ್ನೆಗಳಿಂದ ಇನ್ನಷ್ಟು ಬೆವರಿದರು. ಹಾರರ್ ಚಿತ್ರ ಮಾಡುತ್ತಿರುವವರೇ ಹೀಗೆ ಹೆದರಿದರೆ ಹೇಗೆ ಎಂಬ ಕಮೆಂಟುಗಳ ನಡುವೆಯೇ  ಕೊಂಚ ಸುಧಾರಿಸಿಕೊಂಡ ದೇವರಾಜ್, ಮಾಧ್ಯಮದವರ ಒತ್ತಾಯಕ್ಕೆ ಮಣಿದು, ಕಥೆಯ ಕೆಲವು ಎಳೆಗಳನ್ನು ಮಾತ್ರ ಬಹಿರಂಗಗೊಳಿಸಿದರು. ತಮ್ಮ ಸ್ನೇಹಿತ ಹೇಳಿದ ನೈಜಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಸಿನಿಮೀಯವಾಗಿ ಹೇಳಹೊರಟಿರುವ ದೇವರಾಜ್, ಮೂರುರಸ್ತೆ ಕೂಡುವ ಜಾಗದ ಬಗೆಗಿರುವ ಮೂಢನಂಬಿಕೆಯನ್ನು ಮುಖ್ಯವಾಗಿಟ್ಟುಕೊಂಡು ದೆವ್ವದ ಅಸ್ತಿತ್ವದ ಬಗ್ಗೆ ಪ್ರಶ್ನೆ ಹಾಕುವ ಸಿನಿಮಾ ಮಾಡಲಿದ್ದಾರಂತೆ.

ಇದೇ ಇಪ್ಪತ್ತರಿಂದ ಸಕಲೇಶಪುರದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದು, ಇಪ್ಪತ್ತು ದಿನ ಶೂಟಿಂಗ್ ಮಾಡುವ ಯೋಜನೆ ನಿರ್ದೇಶಕರದ್ದು. ರೂಪ್ ಶೆಟ್ಟಿ ಎಂಬ ತುಳುಚೆಲುವ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು, ಈಗಾಗಲೇ ಆತ ದಿಬ್ಬಣ ಎಂಬ ತುಳುಚಿತ್ರದಲ್ಲಿ ನಟಿಸಿ ಅದರ ಬಿಡುಗಡೆಗೆ ಕಾಯುತ್ತಿದ್ದಾರೆ.

ಎಫ್ ಎಮ್ ವಾಹಿನಿಯೊಂದರಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿರುವ ರೂಪ್ ಶೆಟ್ಟಿ ಡ್ಯಾನ್ಸ್  ರಿಯಾಲಿಟಿ ಶೋ ಮೂಲಕ ಈಗಾಗಲೇ ಜನರಿಗೆ ಪರಿಚಿತರು. ಚಿತ್ರದ
ನಾಯಕಿಯ ಆಯ್ಕೆ ಇನ್ನೂ ಆಗಬೇಕಿದ್ದು, ಜಯಮ್ಮನ ಮಗ ಖ್ಯಾತಿಯ ಉದಯ್, ವರ್ಧನ್, ಅಭಿಷೇಕ್ ಮುಂತಾದ ಪ್ರತಿಭೆಗಳು ಮಾತ್ರ ಈಗಾಗಲೇ ತಾರಾಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಪದೇಪದೇ, ನಮಕ್ ಹರಾಮ್, ಈ ದಿಸ್ ಹೇಳಿದೆ ನೀ ಬೇಕಂತ ಚಿತ್ರಗಳಿಂದ ಪರಿಚಿತವಾಗಿರುವ ಸತೀಶ್ ಪ್ರಧಾನ್ ಮೊದಲ ಬಾರಿಗೆ ಹಾರರ್ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಮಳವಳ್ಳಿ ಸಾಯಿಕೃಷ್ಣ, ನಿರ್ದೇಶಕ ದೇವರಾಜ್ ಮತ್ತು ಬನವಾಸಿ ಗೀತೆಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರದ ನಿರ್ದೇಶನ ಕೈಗೆತ್ತಿಕೊಂಡಿರುವ ದೇವರಾಜ್ ಈ ಚಿತ್ರದ ಮೇಕಪ್ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಡಲಿದ್ದಾರಾ ಅಥವಾ ಅವರೇ ಮೇಕಪ್‍ಮನ್ ಕೂಡ ಆಗಿರುತ್ತಾರಾ ಎಂಬುದು ಇನ್ನೂ ಗೊತ್ತಾಗಬೇಕಿದೆ.

SCROLL FOR NEXT