ತೆಲುಗಿನಿಂದ ನೇರವಾಗಿ ಕನ್ನಡಕ್ಕೆ ಬಂದಿರುವ 'ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಶ್ಯಾಮ್. ಜೆ.ಚೈತನ್ಯ ನಿರ್ದೇಶನ ಮಾಡಿರುವ ಈ ಚಿತ್ರದ ನಿರ್ಮಾಪಕರು ಡಾ. ಮಲಿನೆನಿ ಲಕ್ಷಯ್ಯ. ಡಾ.ವಿ.ನಾಗೇಂದ್ರ ಪ್ರಸಾದ್ ಚಿತ್ರದ ಎಲ್ಲ ಹಾಡುಗಳನ್ನು ಬರೆದಿದ್ದು, ಎ.ಕೆ. ರಿಶಾಲಸಾಯಿ ಸಂಗೀತ ಸಂಯೋಜಿಸಿದ್ದಾರೆ.
ಪೂಜಾಶ್ರೀ, ಅಶ್ವಿನಿ ಚಂದ್ರಶೇಖರ್, ಅರುಣ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅನುಪ್ ಸೀಳಿನ್, ಸಂತೋಷ್, ಪ್ರಶಾಂತಿನಿ, ಹರಿ ಚರಣ್, ಹೇಮಾಂಬಿಕ ಪ್ರಿಯಾಂಕ ಹಾಡುಗಳಿಗೆ ಧ್ವನಿಯಾಗಿದ್ದಾರೆ. 'ಈಗಾಗಲೇ ಈ ಚಿತ್ರ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದೆ. ಅದನ್ನೇ ಕನ್ನಡದಲ್ಲೂ ಮಾಡಿದ್ದೇವೆ. ತೆಲುಗಿನಲ್ಲಿ ಎ ಸರ್ಟಿಫಿಕೇಟ್ ಸಿಕ್ಕಿದ್ದ ಈ ಚಿತ್ರಕ್ಕೆ ಕನ್ನಡದಲ್ಲಿ ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಈಗಿನ ಟ್ರೆಂಡ್‍ಗೆ ತಕ್ಕಂತೆ ಈ ಚಿತ್ರವನ್ನು ಮಾಡಿದ್ದೇನೆ. ಮೂವರು ಅಮಾಯಕ ಹುಡುಗಿಯರ ಕಥೆ ಇದಾಗಿದೆ' ಎಂಬುದು ನಿರ್ದೇಶಕರ ಮಾತು. ಅಂದು ಚಿತ್ರತಂಡಕ್ಕೆ ಶುಭ ಕೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ಮಾಜಿ ಅಧ್ಯಕ್ಷ ಎಚ್.ಡಿ. ಗಂಗರಾಜು, ನಿರ್ದೇಶಕ ಕಂ ನಿರ್ಮಾಪಕ ದಿನೇಶ್ ಗಾಂಧಿ ನಿರ್ದೇಶಕರಾದ ನಾಗಣ್ಣ, ವಾಸು ಮುಂತಾದವರು ಆಗಮಿಸಿದ್ದರು.
ನಾಗಣ್ಣ ಹಾಗೂ ವಾಸು ಚಿತ್ರದ ಹಾಡುಗಳ ವಿಡಿಯೋ ಬಿಡುಗಡೆ ಮಾಡಿದರೆ, ಥಾಮಸ್ ಆಡಿಯೋ ಸಿಡಿ ಬಿಡುಗಡೆ ಮಾಡಿದರು. `ಹಲವು ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುತ್ತೇವೆ. ಆದರೆ, ಕೆಲವು ಚಿತ್ರಗಳ ಹೆಸರು ಕೇಳಿದಾಗ ಆ ಚಿತ್ರದ ಹಾಡುಗಳು ನೆನಪಾಗುತ್ತವೆ. ಈ ಚಿತ್ರದ ಹೆಸರು ಕೇಳಿದಾಗ ನನ್ನ ಹಾಡಿನ ಚರಣಗಳು ನೆನಪಾದಾವು. ನನ್ನ ಮಟ್ಟಿಗೆ ಈ ಚಿತ್ರದಲ್ಲಿ ಒಳ್ಳೆಯ ಹಾಡುಗಳನ್ನೇ ಬರೆದಿದ್ದೇನೆ ಎನ್ನುವ ನಂಬಿಕೆ ಇದೆ. ಇದು ತೆಲುಗಿನಿಂದ ರಿಮೇಕ್ ಆಗಿರುವ ಸಿನಿಮಾ ಅಂತ ಗೊತ್ತೇ ಆಗಲಿಲ್ಲ.
ಆಡಿಯೋ ಬಿಡುಗಡೆ ದಿನ ಗೊತ್ತಾಯಿತು. ಬೇರೆ ಭಾಷೆಯ ನೆರಳು ಸೋಕದಂತೆ ಹಾಡುಗಳನ್ನು ಬರೆದಿದ್ದೇನೆ. ಈ ಸಿನಿಮಾ ಗೆದ್ದು, ಚಿತ್ರ ತಂಡಕ್ಕೆ ಒಳ್ಳೆಯದಾಗಲಿ' ವಿ.ನಾಗೇಂದ್ರ ಪ್ರಸಾದ್. ಈ ಚಿತ್ರದ ನಿರ್ಮಾಪಕ ಡಾ. ಮಲಿನೆನಿ ಲಕ್ಷ್ಮಯ್ಯ. ನಟರು ಕೂಡ. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಇದು ನಮ್ಮ ಬ್ಯಾನರ್ನಲ್ಲಿ ಮೊದಲ ನಿರ್ಮಾಣದ ಚಿತ್ರ. ಮುಂದೆ ಒಳ್ಳೆಯ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ' ಎಂದರು ಡಾ.ಮಲಿನೆನಿ ಲಕ್ಷ್ಮಯ್ಯ. ಚಿತ್ರದ ನಾಯಕ ಅರುಣ್. ಈ ಹಿಂದೆ `ಗೊಂಬೆಗಳ ಲವ್' ಚಿತ್ರದಲ್ಲಿ ಅಭಿನಯಿಸಿದ್ದವರು. ಈಗ `ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಮೂವರು ನಾಯಕಿರು ಮುಸುಕುಧಾರಿ ಹುಡುಗಿಯರು. ಇವರ ಮುಸುಕಿನ ಹಿಂದಿನ ಕಥೆಗಳೇ ಚಿತ್ರದ ಕೇಂದ್ರಬಿಂದುಗಳು.