ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸಿಗರೇಟ್ ಸೇದುವ ಶೈಲಿಯಿಂದ ಸಾಕಷ್ಟು ಜನರ ಮನಗೆದ್ದಿದ್ದರು. ಆದರೆ, ಇದೇ ಸಿಗರೇಟ್ ಸ್ಟೈಲ್ ಹಲವು ವರ್ಷಗಳ ಹಿಂದೆ ಹಲವರ ಕೆಂಗಣ್ಣಿಗೆ ಗುರಿಯಾಗಿ ಸಾಕಷ್ಟು ವಿವಾದಗಳು ಕೇಳಿಬಂದಿತ್ತು. ಇದೀಗ ಇದೇ ರೀತಿಯ ವಿವಾದ ಅವರ ಅಳಿಯ ಧನುಷ್ ಗೆ ಸುತ್ತ ಸುತ್ತಿಕೊಂಡಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಮಾರಿ ಚಿತ್ರದಲ್ಲಿ ಧನುಷ್ ಅವರು ವಿಭಿನ್ನ ರೀತಿಯಲ್ಲಿ ಸಿಗರೇಟ್ ಸೇದುವ ಶೈಲಿಯನ್ನು ತೋರಿಸಿಕೊಟ್ಟಿದ್ದು, ಸಿನಿಮಾ ನೋಡಿದ ಯುವಕರು ಅನುಕರಣೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಧನುಷ್ ವಿರುದ್ಧ ಹಲವು ವಿರೋಧಗಳು ಕೇಳಿಬರುತ್ತಿದ್ದು, ಪಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಕೇಂದ್ರ ಮಾಜಿ ಆರೋಗ್ಯ ಸಚಿವ ಅಂಬುಮಣಿ ರಾಮ್ ದಾಸ್ ಅವರು ಸಿನಿಮಾದಲ್ಲಿ ಧನುಷ್ ಸಿಗರೇಟ್ ಸೇದಿರುವ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತಂತೆ ನಟ ಧನುಷ್ ಗೆ ಬಹಿರಂಗ ಪತ್ರ ಬರೆದಿರುವ ಅವರು, ಸಿನಿಮಾದಲ್ಲಿ ಸಿಗರೇಟ್ ಸೇದುವ ಶೈಲಿ ಬಳಕೆ ಮಾಡಿರುವುದು ತಿಳಿಯದೇ ಏನಲ್ಲಾ. ಏಲ್ಲಾ ತಿಳಿದಿದ್ದು ಜನರನ್ನು ರಂಜಿಸಲು ಮಾಡಿದ್ದಾಗಿದೆ. ಧೂಮಪಾನ ಜಾಹೀರಾತುಗಳಿಗೆ ದೇಶದಾದ್ಯಂತ ನಿಷೇಧವೇರಿರುವುದರಿಂದ ಇದೀಗ ಜಾಹೀರಾತು ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪರೋಕ್ಷವಾಗಿ ಸಿನಿಮಾಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಹೀಗಾಗಿ ಇಂತಹ ದೃಶ್ಯಗಳಲ್ಲಿ ನಟಿಸಲು ನಟರು ನಿರಾಕರಿಸಬೇಕು ಎಂದು ಹೇಳಿದ್ದಾರೆ.
ತಮ್ಮ ಬಹಿರಂಗ ಪತ್ರದ ಕುರಿತಂತೆ ಇಂದು ಮಾತನಾಡಿರುವ ಅಂಬುಮಣಿ ರಾಮ್ ದಾಸ್, ಸಿಗರೇಟ್ ಸೇದುವ ಶೈಲಿಗಳನ್ನು ಸಿನಿಮಾಗಳಲ್ಲಿ ತೋರಿಸುವುದರಿಂದ ಅಭಿಮಾನಿಗಳು ಅವುಗಳನ್ನು ಅನುಕರಿಸುವ ಸಲುವಾಗಿ ಧೂಮಪಾನ ಚಟಕ್ಕೆ ಬೀಳುತ್ತಾರೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಈ ಹಿಂದೆ ಇದೇ ರೀತಿಯ ವಿವಾದಲ್ಲಿ ರಜನಿಕಾಂತ್ ಅವರು ಸಿಲುಕಿ ನಂತರ ಅಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಇದೇ ವಿವಾದದಲ್ಲಿ ಧನುಷ್ ಸಹ ಉದಾಹರಣೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಲಿವುಡ್ ನ್ನು ಆಳುತ್ತಿರುವ ಕಮಲ್ ಹಾಸನ್, ವಿಜಯ್, ಸೂರ್ಯ, ವಿಕ್ರಂ ಸೇರಿದಂತೆ ಎಲ್ಲಾ ನಟರಿಗೆ ಮನವಿ ಮಾಡಿರುವ ಅವರು, ಧೂಮಪಾನಗಳಿಗೆ ಪ್ರಚೋದನೆ ನೀಡುವ ದೃಶ್ಯಗಳಲ್ಲಿ ನಟಿಸದಿರುವಂತೆ ಹೇಳಿದ್ದಾರೆ. ಅಲ್ಲದೆ, ನಟ ಧನುಷ್ ತಮ್ಮ ಮುಂದಿನ ಚಿತ್ರಗಳಲ್ಲಿ ಈ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡುವಂತೆಯೂ ಆಗ್ರಹಿಸಿಸಿದ್ದಾರೆ. ಈಗಾಗಲೇ ಶೇ.52 ರಷ್ಟು ಮಂದಿ ಸಿನಿಮಾ ಮೂಲಕ ಪ್ರಚೋದನೆಗೊಂಡು ಧೂಮಪಾನ ಚಟಕ್ಕೆ ಬೀಳುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ದೇಶದಲ್ಲಿ ಶೇ.50 ರಷ್ಟು ಮಂದಿ ಈಗಾಗಲೇ ಈ ದುಷ್ಟಟಕ್ಕೆ ದಾಸರಾಗಿದ್ದಾರೆ ಎಂದು ಹೇಳಿದ್ದಾರೆ.
ಧನುಷ್ ನಟನೆಯ ಮಾರಿ ಚಿತ್ರ ಜು. 17 ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಧನುಷ್ ಅವರು ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಳ್ಳಲು ಕೆಲವು ದೃಶ್ಯಗಳಲ್ಲಿ ಸಿಗರೇಟ್ ಸೇದುವುದನ್ನು ತೋರಿಸಲಾಗಿತ್ತು.
ತಮಿಳುನಾಡಿನಲ್ಲಿ ಈ ಕ್ಷಣದವರೆಗೂ ರಜನಿಕಾಂತ್ ಅವರ ಸಿಗರೇಟ್ ಕುಡಿಯುವ ಶೈಲಿಯನ್ನೇ ಯುವಜನಾಂಗ ಅನುಸರಿಸುತ್ತಿದ್ದಾರೆ. ಆ ರೀತಿ ಕ್ರೇಜ್ ನೀಡಿದ ಸಿಗರೇಟ್ ಕುಡಿಯುವ ಸ್ಟೈಲ್ ನ್ನು ಧನುಷ್ ಸಹ ಅನುಸರಿಸಿದ್ದರು. ಆದರೆ, ಇದರಿಂದ ಹಲವಾರು ಬಾರಿ ಆರೋಗ್ಯದ ಸಮಸ್ಯೆಯನ್ನು ಎದುರಿಸಿದ್ದರು.