ಲಾಸೇಂಜಲಿಸ್: ಜೇಮ್ಸ್ ಕ್ಯಾಮರಾನ್ ಅವರ 'ಅವತಾರ್' ಮತ್ತು 'ಟೈಟಾನಿಕ್' ನಂತರ 'ಜುರಾಸಿಕ್ ವರ್ಲ್ಡ್' ವಿಶ್ವ ಸಿನೆಮಾ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾಗಳಲ್ಲಿ ಮೂರನೆ ಸ್ಥಾನಕ್ಕೆ ಜಿಗಿದಿದೆ.
ಡೈನೋಸಾರ್ ಥ್ರಿಲ್ಲರ್ ಸಿನೆಮಾ ೧.೫೩ ಬಿಲಿಯನ್ ಡಾಲರ್ ಗಳಿಗೆ ಕಂಡು 'ಅವೆಂಜರ್ಸ್' ಸಿನೆಮಾವನ್ನು ಹಿಂದಿಕ್ಕಿದೆ. 'ಜುರಾಸಿಕ್ ವರ್ಲ್ಡ್' ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಸ್ಟುಡಿಯೋ ವಿಶ್ವದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಐದು ಸಿನೆಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಕೂಡ ದಾಖಲಿಸಿದೆ. ಇದೆ ವರ್ಷ ಈ ಸಂಸ್ಥೆ ನಿರ್ಮಿಸಿದ 'ಫ್ಯೂರಿಯಸ್ ೭' ಕೂಡ ಜಾಗತಿಕವಾಗಿ ೧.೫೧ ಬಿಲಿಯನ್ ಡಾಲರ್ ಗಳಿಕೆ ಕಂಡಿತ್ತು.
ಕಾಲಿನ್ ಟ್ರೆವೊರ್ರೋ ನಿರ್ದೇಶನದ 'ಜುರಾಸಿಕ್ ವರ್ಲ್ಡ್', 'ಜುರಾಸಿಕ್ ಪಾರ್ಕ್' ಸಿನೆಮಾಗಳ ಸರಣಿಯಲ್ಲಿ ನಾಲ್ಕನೆಯದು. ಕ್ರಿಸ್ ಪ್ಯಾಟ್, ಬ್ರೈಸ್ ಡಲ್ಲಾಸ್ ಮತ್ತು ಭಾರತೀಯ ತಾರೆ ಇರ್ಫಾನ್ ಕಾನ್ ಸಿನೆಮಾದ ಮುಖ್ಯ ನಟರು.
'ಜುರಾಸಿಕ್ ವರ್ಲ್ಡ್' ಜಪಾನಿನಲ್ಲಿ ಆಗಸ್ಟ್ ೫ ರಂದು ಬಿಡುಗಡೆಯಾಗಲಿದೆ. ಅತಿ ದೊಡ್ಡ ಸಿನೆಮಾ ಮಾರುಕಟ್ಟೆಗಳಾದ ಅಮೇರಿಕಾ ಮತ್ತು ಚೈನಾದಲ್ಲಿ ಟಿಕೆಟ್ ಮಾರಾಟ ಕುಂಠಿತವಾಗಿರುವುದರಿಂದ ಇದು ಟೈಟಾನಿಕ್ ದಾಖಲೆ (೨.೧೮ ಬಿಲಿಯನ್ ಡಾಲರ್) ಅಥವಾ ಅವತಾರ್ ಗಳಿಕೆಗಳನ್ನು (೨.೭೯ ಬಿಲಿಯನ್ ಡಾಲರ್) ಮುರಿಯುವುದು ಕಷ್ಟ ಎನ್ನಲಾಗಿದೆ.