ಸಿನಿಮಾ ಸುದ್ದಿ

ನನ್ನ ತಂದೆಗೆ ದಯಾಮರಣ ಕೊಡಿಸುವ ಬಗ್ಗೆ ಚಿಂತಿಸಿದ್ದೆ: ನಿರ್ದೇಶಕ ಶೇಷಾದ್ರಿ

Srinivas Rao BV

ದಯಾಮರಣ  ಕುರಿತಾದ 'ವಿದಾಯ' ಚಿತ್ರ ನಿರ್ದೇಶಕ  ಪಿ.ಶೇಷಾದ್ರಿ  ಅವರೂ ಸಹ ದಯಾಮರಣವನ್ನು ಕೊಡಿಸುವ  ಬಗ್ಗೆ ಆಲೋಚನೆ ಮಾಡಿದ್ದರಂತೆ!

ಮೆಲ್ಬರ್ನ್ ಮತ್ತು ಫಿಜಿ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ತಮ್ಮ ಚಿತ್ರದ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಶೇಷಾದ್ರಿ, ದಯಾಮರಣ ವಿಷಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು  ಚರ್ಚೆ ನಡೆಯಬೇಕೆಂಬ ಉದ್ದೇಶದಿಂದ ವಿದಾಯ ಚಿತ್ರವನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ 12  ವರ್ಷದ ಹಿಂದೆ ಸ್ವತಃ ತಾವೇ ದಯಾಮರಣ  ಕೊಡಿಸುವ ಬಗ್ಗೆ  ಚಿಂತಿಸಿದ್ದರಂತೆ. ತಮ್ಮ ತಂದೆ ಪಾರ್ಕಿನ್‌ಸನ್ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದುದ್ದನ್ನು ನೋಡಲಾಗದೇ ದಯಾಮರಣ ಕೊಡಿಸುವ ಬಗ್ಗೆ ಚಿಂತನೆ ನಡೆಸಿ ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ  ಚರ್ಚೆ ನಡೆಸಿದ್ದೆ ಎಂದಿದ್ದಾರೆ ಶೇಷಾದ್ರಿ.

ಅನಾರೋಗ್ಯಕ್ಕೀಡಾಗಿದ್ದ ತಂದೆಯನ್ನು ನೋಡಿಕೊಳ್ಳಲು ತಮ್ಮ ಮೂವರು ಸಹೋದರರಿಗೆ ಕಷ್ಟವಾದರೆ, ತಾವೇ ನೋಡಿಕೊಳ್ಳುವುದಾಗಿ ವೃತ್ತಿ ನಿರತ ವೈದ್ಯೆಯೂ ಆಗಿದ್ದ ಸಹೋದರಿ ಹೇಳಿದ್ದರಿಂದ ದಯಾಮರಣ ನೀಡುವ  ಪ್ರಸ್ತಾವನೆಗೆ ಅಡ್ಡಿ ಉಂಟಾಗಿತ್ತು. ತಂದೆಗೆ ದಯಾಮರಣ ಕೊಡಿಸುವ ಬಗ್ಗೆ ಯೋಚನೆ ಮಾಡಿದ್ದಕ್ಕಾಗಿ ಈಗಲೂ ಅಪರಾಧಿ ಭಾವನೆ ಕಾಡುತ್ತಿದೆ. ಆದರೆ ತಮ್ಮ ಹೆಚ್ಚು ನೋವುಪಡದೇ ಇರಲಿ ಎಂಬ  ಕಾರಣಕ್ಕೆ ದಯಾಮರಣ ಕೊಡಿಸುವ ಬಗ್ಗೆ ಯೋಚನೆ ಮಾಡಿದ್ದೆ ಎಂದು ಶೇಷಾದ್ರಿ ಹೇಳಿದ್ದಾರೆ.

ಅರುಣಾ ಶಾನಭಾಗ್ ಗೆ ದಯಾಮರಣ ನೀಡುವಂತೆ ಪಿಂಕಿ ವಿರಾನಿ ನಡೆಸಿದ್ದ ಕಾನೂನು ಹೋರಾಟದಿಂದ  ದಯಾಮರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿತು. ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ತಮ್ಮನ್ನು ನೋಡಿಕೊಳ್ಳುವವರಿಲ್ಲದೇ ಎಷ್ಟೋ ಮಂದಿ ದಯಾಮರಣಕ್ಕೆ ಅರ್ಜಿ ಹಾಕಿರುತ್ತಾರೆ ಆದರೆ ನ್ಯಾಯಾಲಯಗಳಿಂದ  ಅನುಮತಿ ದೊರೆಯುವುದಿಲ್ಲ ಎಂದು ಶೇಷಾದ್ರಿ  ತಿಳಿಸಿದ್ದಾರೆ.

ದೀರ್ಘಾವಧಿಯಿಂದ ಅನಾರೋಗ್ಯಕ್ಕೀಡಾದ ವ್ಯಕ್ತಿ ವೇಗವಾಗಿ ಸಾಯುವುದಕ್ಕೆ  ಅನುಕೂಲವಾಗಲು ಜೀವಾಧಾರಕವನ್ನು ತೆಗೆಯುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಚಿತ್ರರಂಗದಲ್ಲಿಯೂ ಅನೇಕ ಖ್ಯಾತನಾಮರು, ಔಷಧ ಸೇವಿಸದೇ  ನಿಧನರಾಗಿದ್ದಾರೆ.  ದಯಾಮರಣಕ್ಕೆ ಮಹಾತ್ಮಾ ಗಾಂಧಿ ಸಹ ಸಹಮತ ಸೂಚಿಸಿದ್ದರು. ಅತೀವ ನೋವು ಅನುಭವಿಸುವ  ಪ್ರತಿಯೊಬ್ಬ ವ್ಯಕ್ತಿಯೂ ಶಾಂತಿಯಿಂದ ಕೊನೆಯುಸಿರೆಳೆಯಲು  ಬಯಸುತ್ತಾನೆ.  ತಮ್ಮ ವಿದಾಯ ಚಿತ್ರದ ಮೂಲಕ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆದು ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಬದಲಾವಣೆಯಾಗಬೇಕಿದೆ ಎಂದು ಶೇಷಾದ್ರಿ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT