ಬೆಂಗಳೂರು: ಅತಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ ಎಂದೇ ಪ್ರಚಾರ ಪಡೆದಿರುವ ರಾಜಮೌಳಿ ನಿರ್ದೇಶನದ ತೆಲುಗು ಸಿನೆಮಾ 'ಬಾಹುಬಲಿ' ನಿಜವಾಗಿಯೂ ಯಶಸ್ಸು ಕಾಣುವುದೇ? ಪ್ರಭಾಸ್ ಮುಖ್ಯಭೂಮಿಕೆಯಲ್ಲಿರುವ ಐತಿಹಾಸಿಕ ಕಥಾಹಂದರವುಳ್ಳ ಈ ಸಿನೆಮಾದ ಟ್ರೇಲರ್ ಜೂನ್ ೧ರಂದು ಬಿಡುಗಡೆಯಾಗಿತ್ತು.
ಬಾಹುಬಲಿ ಟ್ರೇಲರ್ ನ ವೀಕ್ಷಣೆ ೨೨ ಲಕ್ಷ ದಾಟಿದ್ದರೂ ಇದು ನಿರೀಕ್ಷಿತ ಮಟ್ಟದಲ್ಲಿಲ್ಲ ಮತ್ತು ನಿರೀಕ್ಷೆಯಂತೆ ವೈರಲ್ ಆಗಲಿಲ್ಲ ಎಂಬುದು ಸಿನೆಮಾ ಪಂಡಿತರ ಅಭಿಮತ. ಇದಕ್ಕೆ ಹೋಲಿಸಿದರೆ ಈಗಾಗಲೇ ಹಲವಾರು ಭಾಷೆಗಳಲ್ಲಿ ನಿರ್ಮಾಣಗೊಂಡು ಬಿಡುಗಡೆಯಾಗಿದ್ದರು ಈಗ ಅಜಯ್ ದೇವಗನ್ ನಟನೆಯಲ್ಲಿ ಬರಲಿರುವ ದೃಶ್ಯಂ ಹಿಂದಿ ಅವತರಿಣಿಕೆಯ ಟ್ರೇಲರ್ ವೀಕ್ಷಣೆ ಐದು ದಿನಗಳಲ್ಲಿ ೧೬ ಲಕ್ಷ ದಾಟಿದೆ.
ಅಲ್ಲದೆ ಈ ಟ್ರೇಲರ್ ನೋಡಿದ ಮೇಲೆ ವೀಕ್ಷಕರು ಚಲನಚಿತ್ರದಲ್ಲಿ ಬಳಸಿರುವ ಅತೀವ ಗ್ರಾಫಿಕ್ಸ್ ಐತಿಹಾಸಿಕ ಕಥೆಯ ನೈಜತೆಗೆ ಎಲ್ಲೋ ಕುಂದಾಗಲಿದೆ ಎಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ.
ಅಲ್ಲದೆ ಇತ್ತೀಚಿಗೆ ಅತಿ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣಗೊಂಡು ಪ್ರಚಾರದ ಭರಾಟೆಯಲ್ಲಿ ಬಿಡುಗಡೆಯಾದ ರಜನೀಕಾಂತ್ ಅಭಿನಯದ ಲಿಂಗಾ, ಅನುರಾಗ್ ಕಶ್ಯಪ್ ನಿರ್ದೇಶನದ ಬಾಂಬೆ ವೆಲ್ವೆಟ್, ಕಮಲಾ ಹಾಸನ್ ಅಭಿನಯದ ಉತ್ತಮ ವಿಲನ್, ಶಂಕರ್ ನಿರ್ದೇಶನದ, ವಿಕ್ರಮ್ ನಟನೆಯ 'ಐ' ಸಿನೆಮಾಗಳು ನೆಲಕಚ್ಚಿ ಮಕಾಡೆ ಮಲಗಿದೆ ಉದಾಹರಣೆಗಳು ಕಣ್ಮುಂದೆಯೇ ಇವೆ. ಇತ್ತೀಚಿನ ಬಾಲಿವುಡ್ ಸಿನೆಮಾ 'ದಿಲ್ ಧಡ್ಕನೆ ದೋ' ಕೂಡ ಇದೇ ಹಾದಿ ಹಿಡಿದಿದೆ ಎನ್ನುತ್ತವೆ ವಿಮರ್ಶೆಗಳು.
ಆಡಿಯೋ ಹಕ್ಕುಗಳು, ಸಟಲ್ಲೈಟ್ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎಂದು ಪ್ರಚಾರ ಮಾಡಿಕೊಂಡಿದ್ದರು ವಿತರಕರಿಗೆ ಬಾಹುಬಲಿ ಸಿನೆಮಾ ಹೊರೆಯಾಗಲಿದೆಯೇ ಎಂಬ ಆತಂಕವಂತೂ ಇದ್ದೇ ಇದೆ.