ಬೆಂಗಳೂರು: ಗೋವಾ ಚಿತ್ರದ ಪ್ರಚಾರಕ್ಕೆ ನಟ ಕೋಮಲ್ ಬರುತ್ತಿಲ್ಲ ಎಂದು ಚಿತ್ರದ ನಿರ್ಮಾಪಕ ಶಂಕರೇಗೌಡ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಗೋವಾ ಚಿತ್ರದಲ್ಲಿ ಕೋಮಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಪ್ರಚಾರಕ್ಕೆ ಆಗಮಿಸದೆ ಅಸಹಕಾರ ನೀಡಿದ್ದಾರೆಂದು ಶಂಕರೇಗೌಡರ ಅಳಲಾಗಿದೆ.
ಇದೇ ಶುಕ್ರವಾರದಂದು 'ಗೋವಾ' ಚಿತ್ರ ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದ್ದು, ಟೆಲಿವಿಜನ್ ಹಾಗೂ ರೇಡಿಯೋ ಪ್ರಚಾರದ ವೇಳೆ ನಟ ಕೋಮಲ್ ಅವರಿಗೆ ಪಾಲ್ಗೊಳ್ಳುವಂತೆ ಆನೇಕ ಬಾರಿ ಫೋನ್ ಮಾಡಿದರೂ ಅದಕ್ಕೆ ಸ್ಪಂದಿಸಿಲ್ಲವೆಂದು ಹೇಳಿರುವ ಶಂಕರೇಗೌಡ, 'ಗೋವಾ' ಚಿತ್ರ ಸೋತರೆ ಅದಕ್ಕೆ ನಟ ಕೋಮಲ್ ಅವರೇ ಹೊಣೆಗಾರರೆಂದು ಹೇಳಿದ್ದಾರೆ.
ತಮಿಳು ಚಿತ್ರದ ರಿಮೇಕ್ ಆಗಿರುವ 'ಗೋವಾ' ಅದೇ ಹೆಸರಿನಲ್ಲಿ ಕನ್ನಡದಲ್ಲಿ ನಿರ್ಮಾಣವಾಗಿದ್ದು, ಕೋಮಲ್ , ತರುಣ್ ಚಂದ್ರ, ಶ್ರೀಕಿ ಹಾಗೂ ಸೋನಾ ಪ್ರಮುಖ ಪಾತ್ರ ವರ್ಗದಲ್ಲಿದ್ದಾರೆ. ಕೋಮಲ್ ಸದ್ಯ ಸ್ಟಾರ್ ವ್ಯಾಲ್ಯೂ ಹೊಂದಿರುವ ಕಾರಣ ಅವರು ಪ್ರಚಾರಕ್ಕೆ ಬಂದರೆ ಅನುಕೂಲವಾಗುತ್ತದೆ ಎಂಬುದು ನಿರ್ಮಾಪಕ ಶಂಕರೇಗೌಡರ ಲೆಕ್ಕಾಚಾರವಾಗಿತ್ತು. ಆದರೆ ಕೋಮಲ್ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುದರಿಂದ ಪ್ರಚಾರಕ್ಕೆ ಬರುತ್ತಿಲ್ಲ ಎನ್ನಲಾಗಿದೆ.