ಸಿನಿಮಾ ಸುದ್ದಿ

ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ನಿಧನ

Srinivasamurthy VN

ಬೆಂಗಳೂರು: ಬಂಗಾರದ ಮುನಷ್ಯ ಚಿತ್ರ ಖ್ಯಾತಿಯ ಹಿರಿಯ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ ಅವರನ್ನು ಇತ್ತೀಚೆಗಷ್ಟೇ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಸುಗುಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಇತ್ತೀಚಿಗೆ ಮಾರಕ ಎಚ್ 1 ಎನ್ 1 ತಗುಲಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಿದ್ದಲಿಂಗಯ್ಯ ನಿಧನರಾಗಿದ್ದಾರೆ. ಕನ್ನಡದಲ್ಲಿ ಸುಮಾರು 23 ಚಿತ್ರಗಳನ್ನು ಸಿದ್ದಲಿಂಗಯ್ಯ ಅವರು ನಿರ್ದೇಶಿಸಿದ್ದು,  1972ರಲ್ಲಿ ತೆರೆಕಂಡ ಡಾ. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದಿಂದ ಖ್ಯಾತಿ ಗಳಿಸಿದರು.

1969 ಇದೇ ಡಾ.ರಾಜ್ ಕುಮಾರ್ ಅವರ ಮೇಯರ್ ಮುತ್ತಣ್ಣ ಚಿತ್ರವನ್ನು ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡುವ ಮೂಲಕ ನಿರ್ದೇಶಕ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಹೇಮಾವತಿ, ಭೂಲೋಕದಲ್ಲಿ ಯಮರಾಜ, ಕೂಡಿ ಬಾಳಿದರೆ ಸ್ವರ್ಗ ಸುಖ, ಬಾರೆ ನನ್ನ ಮುದ್ದಿನ ರಾಣಿ, ಪ್ರೇಮ ಪ್ರೇಮ ಪ್ರೇಮ ಸೇರಿದಂತೆ 23 ಚಿತ್ರಗಳನ್ನು ಸಿದ್ದಲಿಂಗಯ್ಯ ನಿರ್ದೇಶಿಸಿದ್ದರು.

ಇನ್ನು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಸಿದ್ದಲಿಂಗಯ್ಯ ಅವರು, ಬಂಗಾರದ ಮನುಷ್ಯ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ಪ್ರಶಸ್ತಿ, ಭೂತಯ್ಯನ ಮಗ ಅಯ್ಯು ಚಿತ್ರಕ್ಕಾಗಿ ಉತ್ತಮ ಚಿತ್ರ ವಿಭಾಗದಲ್ಲಿ ಮತ್ತು ಉತ್ತಮ ಚಿತ್ರಕಥೆ ವಿಭಾಗದಕ್ಕೆ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ಇನ್ನು ತಮಿಳು ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದ ಸಿದ್ದಲಿಂಗಯ್ಯ ಅವರು, ಕನ್ನಡದಲ್ಲಿ ನಿರ್ದೇಶನ ಮಾಡಿದ್ದ ಅಜೇಯ ಚಿತ್ರವನ್ನು ತಮಿಳಿನಲ್ಲಿ ಕೂಡ ನಿರ್ದೇಶಿಸಿ ಅಲ್ಲಿಯೂ ಯಶಸ್ಸು ಕಂಡಿದ್ದರು.

ಇನ್ನು ಚಿತ್ರರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅವರಿಗೆ 1993-94ನೇ ಸಾಲಿನಲ್ಲಿ ಪುಟ್ಣಣ ಕಣಗಾಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದಲ್ಲದೆ 2010ರಲ್ಲಿ ಬಿ ಸರೋಜಾ ದೇವಿ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.

ಸಿದ್ದಲಿಂಗಯ್ಯ ಅವರ ದಿಢೀರ್ ಸಾವಿನ ಸುದ್ದಿಯಿಂದ ಕನ್ನಡ ಚಿತ್ರರಂಗ ಆಘಾತಕ್ಕೊಳಗಾಗಿದ್ದು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

SCROLL FOR NEXT