ಬೆಂಗಳೂರು: ಕರ್ನಾಟಕ ಹೊರಗೆ ಸುಮಾರು ೫೦ ರಿಂದ ೬೦ ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಬಿಡುಗಡೆ ಕಾಣಲಿದೆ ಎಂದು ವಿತರಣಾ ಜವಾಬ್ದಾರಿ ಹೊತ್ತಿರುವ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಧೃಢೀಕರಿಸಿದೆ. ದೇಶದ ಪ್ರತಿ ಮೂಲೆಗೂ ಈ ಸಿನೆಮಾ ಕೊಂಡೊಯ್ಯೊಲು ಆ ಸಂಸ್ಥೆ ಸಿದ್ಧವಾಗಿದೆ. ರಿಲಾಯನ್ಸ್ ನ ಸಹ ನಿರ್ವಾಹಕ ಅಧಿಕಾರಿ ಎಸ್ ಯತೀಶ್ ಬಾಬು ಅವರ ಪ್ರಕಾರ, ಈ ಸಿನೆಮಾವನ್ನು ಏಕಕಾಲಕ್ಕೆ ಮುಂಬೈ, ಚೆನ್ನೈ, ಪುಣೆ, ಗೋವಾ, ಕೊಚಿ, ದೆಹಲಿಯಂತಹ ದೊಡ್ಡ ನಗರಗಳಲ್ಲಿ ಹಾಗು ಸೇಲಂ, ಕೊಯಂಬತ್ತೂರು, ಕೃಷ್ಣಗಿರಿ, ಹೊಸೂರು ಮತ್ತು ಊಟಿಯಂತಹ ಸಣ್ಣ ನಗರಗಳಲ್ಲೂ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಬಿಡುಗಡೆ ದಿನ ಹತ್ತಿರವಾದಂತೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಬಹುದು ಎಂದು ಅವರು ತಿಳಿಸಿದ್ದಾರೆ.
"ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರವೊಂದು ಏಕಕಾಲಕ್ಕೆ ರಾಷ್ಟ್ರಾದ್ಯಂತ ಬಿಡುಗಡೆ ಕಾಣುತ್ತಿದೆ" ಎಂದು ಅವರು ತಿಳಿಸಿದ್ದಾರೆ. ಭಾರತದ ಹೊರಗೂ ಕೂಡ ಈ ಸಿನೆಮಾ ಬಿಡುಗಡೆ ಮಾಡುವ ಚಿಂತನೆಯಿದೆ ಎಂದಿದ್ದಾರೆ. ಈ ವಾರದಲ್ಲಿ ಸಿನೆಮಾಗೆ ಸೆನ್ಸಾರ್ ಪ್ರಮಾಣಪತ್ರ ದೊರಕುವ ಸಾಧ್ಯತೆ ಇದ್ದು, ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ನಿರ್ಮಾಪಕರು. ವಿದೇಶದಲ್ಲೂ ಹೆಚ್ಚಿನ ಚಿತ್ರಮಂದಿರಗಳನ್ನಿ ಸಿನೆಮಾ ಬಿಡುಗಡೆ ಮಾಡಲು ಪ್ರತ್ಯೇಕ ಸೆನ್ಸಾರ್ ಆಡಿಟ್ ಬಗ್ಗೆಯೂ ಚಿಂತನೆ ನಡೆದಿದೆ ಎಂದಿದ್ದಾರೆ.