ಬೆಂಗಳೂರು: ಕೆಲವು ಸಿನೆಮಾಗಳು ಇಂದಿನ ಮುಂಚೂಣಿ ನಟರ ಮೇಲೆ ಅವಲಂಬಿತವಾಗಿರುತ್ತದೆ. ಇನ್ನು ಕೆಲವು ಸಿನೆಮಾಗಳನ್ನು ಮೇಲೆತ್ತುವವರು ಹಿಂದಿನ ತಲೆಮಾರಿನ ನಾಯಕನಟರು. ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿರುವ ಹೇಮಂತ್ ಎಂ ರಾವ್ ಅವರ 'ಗೋಧಿ ಬಣ್ಣ ಸಾಧರಾಣ ಮೈಕಟ್ಟು' ಸಿನೆಮಾದಲ್ಲಿ ಅನಂತನಾಗ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
"'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಅನಂತ ನಾಗ್ ನಟಿಸುತ್ತಿರುವುದು ಕೆಲವೊಮ್ಮೆ ಭಯ ಹುಟ್ಟಿಸುತ್ತದೆ. ಅಷ್ಟು ಜನಪ್ರಿಯ ಶ್ರೇಷ್ಠ ನಟನನ್ನು ನಿರ್ದೇಶಿಸುವುದು ನಡುಕ ಹುಟ್ಟಿಸುತ್ತದೆ. ಆದರೆ ಅವರು ನನ್ನನು ನಿರಾಳಗೊಳಿಸಿದರು. ಸಿನೆಮಾದ ಇತರ ಪಾತ್ರಗಳು ಅವರ ಸುತ್ತ ಕೆಲಸ ಮಾಡಿದ್ದಾರೆ" ಎನ್ನುತ್ತಾರೆ ಹೇಮಂತ್.
ಅನಂತ ನಾಗ್ ಅವರ ಬಹುತೇಕ ದೃಶ್ಯಾವಳಿಗಳು ಭಾವನಾತ್ಮಕವಾಗಿದ್ದು ನಟ ರಕ್ಷಿತ್ ಶೆಟ್ಟಿ ಮತ್ತು ಅವರ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿದೆ. ರಕ್ಷಿತ್ ಶೆಟ್ಟಿ ಅನಂತ ನಾಗ್ ಅವರ ಮಗನ ಪಾತ್ರ ಪೋಷಿಸುತ್ತಿದ್ದಾರೆ. "ಚಿತ್ರೀಕರಣದ ವೇಳೆ ಕೆಲವು ದೃಶ್ಯಾವಳಿಗಳಲ್ಲಿ ಅನಂತ ನಾಗ್ ಅವರ ನಟನೆಗೆ ಮನಸೋತು ಕಟ್ ಹೇಳುವುದನ್ನೇ ಮರೆತುಬಿಟ್ಟೆ. ಶ್ರುತಿ ಹರಿಹರನ್ ಅವರನ್ನು ಒಳಗೊಂಡಂತೆ ಒಳ್ಳೆಯ ನಟರು ಸಿನೆಮಾದಲ್ಲಿ ನಟಿಸುತ್ತಿರುವುದರಿಂದ ನನ್ನ ಕೆಲಸ ಅತ್ಯಂತ ಸುಲಭವಾಯಿತು" ಎನ್ನುತ್ತಾರೆ ನಿರ್ದೇಶಕ.
ಈ ಹಿರಿಯ ನಟ ಹೇಂಮತ್ ಅವರ ಈ ಕೆಲಸವನ್ನು ಶ್ಲಾಘಿಸಿದ್ದಾರೆ ಎಂದು ಕೂಡ ನಿರ್ದೇಶಕ ತಿಳಿಸಿದ್ದಾರೆ. "ಅವರು ನಟಿಸಿರುವ ಸಿನೆಮಾಗಳಲ್ಲಿ ಇದೊಂದು ಅತ್ಯುತ್ತಮ ಸಿನೆಮಾವಾಗಲಿದೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ಈಗ ಅವರ ಮಾತುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ" ಎಂದಿದ್ದಾರೆ ಹೇಮಂತ್.
ಜುಲೈ ಅಂತ್ಯದ ವೇಳೆ ಚಿತ್ರೀಕರಣ ಸಂಪೂರ್ಣವಾಗಲಿದೆ ಎಂದಿದ್ದಾರೆ ಹೇಮಂತ್. "ಚಿತ್ರಮಂದಿರಗಳ ಲಭ್ಯತೆ ಮತ್ತಿತರ ಸಂಗತಿಗಳ ಮೇಲೆ ಬಿಡುಗಡೆ ದಿನಾಂಕ ನಿಗದಿಯಾಗುತ್ತದೆ. ಅದು ಮತ್ತೊಂದು ಪರ್ವತ ಏರಿದಂತೆ ಮತ್ತು ಅದಕ್ಕಿನ್ನೂ ಸ್ವಲ್ಪ ಸಮಯವಿದೆ. ಚಿತ್ರೀಕರಣ ನಂತರದ ಕೆಲಸಗಳ ಮೇಲೆ ನಾನು ಗಮನ ಕೇಂದ್ರೀಕರಿಸಿದ್ದೇನೆ" ಎನ್ನುತ್ತಾರೆ.
ಕಾಣೆಯಾದ ವ್ಯಕ್ತಿಯ ಕಥೆಯನ್ನು 'ಗೋಧಿ ಬಣ್ಣ ಸಾಧರಾಣ ಮೈಕಟ್ಟು' ಸಿನೆಮಾದಲ್ಲಿ ನಿರ್ವಹಿಸಲಾಗಿದೆ.