ಸಿನಿಮಾ ಸುದ್ದಿ

ಪುಲಿ ಚಿತ್ರ ನಿರ್ಮಾಪಕರ ವಿರುದ್ಧ ನಟಿ ಶ್ರೀದೇವಿ ದೂರು

Manjula VN

ಚೆನ್ನೈ: ಎರಡು ದಶಕಗಳ ನಂತರ ಮತ್ತೆ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ರೀದೇವಿ ಅವರ ಆಗಮನಕ್ಕೆ ಗ್ರಹಣ ಬಂದಂತಾಗಿದ್ದು, ಶ್ರೀದೇವಿ ಅವರು ಇದೀಗ ಪುಲಿ ಚಿತ್ರದ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.

ಶ್ರೀದೇವಿ ಅವರು ಪುಲಿ ಚಿತ್ರದ ನಿರ್ಮಾಪಕರಾದ ಪಿ.ಟಿ.ಸೆಲ್ವ ಕುಮಾರ್ ಹಾಗೂ ಶಿಬು ಥಮೀನ್ಸ್ ಅವರ ವಿರುದ್ಧ ಮುಂಬೈ ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ನಿರ್ಮಾಪಕರು ತಮಗೆ ನೀಡಬೇಕಿದ್ದ ರು.50 ಲಕ್ಷ ಸಂಭಾವನೆಯನ್ನು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಪುಲಿ ಚಿತ್ರದ ನಟನೆಗಾಗಿ ಶ್ರೀದೇವಿ ಅವರು ರು.5 ಕೋಟಿ ಸಂಭಾವನೆಯನ್ನು ಕೇಳಿದ್ದರು. ಈಗಾಗಲೇ ನಿರ್ಮಾಪಕರು 4.5 ಲಕ್ಷ ಹಣವನ್ನು ಶ್ರೀದೇವಿಯವರಿಗೆ ನೀಡಿದ್ದು, ಇನ್ನು 50 ಲಕ್ಷ ಹಣವನ್ನು ನೀಡಬೇಕಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪುಲಿ ಚಿತ್ರ ಬಿಡುಗಡೆಯಾಗುವುದಕ್ಕೂ ಹಿಂದಿನ ದಿನ ತೆರಿಗೆ ಇಲಾಖೆಯು ಪುಲಿ ಚಿತ್ರದ ನಿರ್ಮಾಪಕ ಹಾಗೂ ನಟ ವಿಜಯ್ ಅವರ ಮನೆಯ ಮೇಲೆ ದಾಳಿ ಮಾಡಿದ್ದರು. ವರದಿಗಳ ಪ್ರಕಾರ ದಾಳಿ ವೇಳೆ ತೆರಿಗೆ ಇಲಾಖಾ ಅಧಿಕಾರಿಗಳು ನಿರ್ಮಾಪಕರ ಬ್ಯಾಂಕ್ ಖಾತೆ ಹಾಗೂ ಕೆಲವು ಹಣಕಾಸು ವ್ಯವಹಾರಗಳ ಮೇಲೆ ಕಡಿವಾಣ ಹಾಕಿದ್ದು, ಶ್ರೀದೇವಿ ಅವರಿಗೆ ಸಂಭಾವನೆ ನೀಡಲು ಇದೊಂದು ರೀತಿಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಶ್ರೀದೇವಿ ಅವರ ದೂರನ್ನು ಪರಿಗಣಿಸಿರುವ ತಮಿಳುನಾಡು ಚಿತ್ರ ನಿರ್ಮಾಪಕರ ಮಂಡಳಿಯು ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಶಿಬು ಥಮೀನ್ಸ್ ಅವರು ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ದೂರು ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಶ್ರೀದೇವಿ ಅವರೊಂದಿಗಿನ ಹಣಕಾಸು ವ್ಯವಹಾರವನ್ನು ಇತ್ಯರ್ಥಪಡಿಸಿಕೊಳ್ಳುತ್ತೇನೆಂದು ಹೇಳಿಕೊಂಡಿದ್ದಾರೆ.

SCROLL FOR NEXT