ಬೆಂಗಳೂರು: ಬೆಳ್ಳಿತೆರೆಯಲ್ಲಿ ಕೆಲವು ಜೋಡಿಗಳಿಗೆ ಇನ್ನಿಲ್ಲದ ಮಹತ್ವ ಬಂದುಬಿಡುತ್ತದೆ. ತೆರೆಯ ಮೇಲಿನ ಅವರ ಕೆಮಿಸ್ಟ್ರಿಗೆ ಜನ ಆ ಜೋಡಿಯನ್ನು ಹೆಚ್ಚೆಚ್ಚು ನೋಡುವ ತವಕ ವ್ಯಕ್ತಪಡಿಸುತ್ತಾರೆ. ಇಂತಹ ಒಂದು ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್.
ಮೊದಲ ಸಿನೆಮಾ ಮೊಗ್ಗಿನ ಮನಸ್ಸಿನಿಂದ ಹಿಡಿದು, ನಂತರ ಡ್ರಾಮ, ಆನಂತರ ಮಿ ಅಂಡ್ ಮಿಸೆಸ್ ರಾಮಾಚಾರಿ ಹೀಗೆ ಈ ಜೋಡಿ ನಟನೆಯ ಸಿನೆಮಾಗಳು ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡಿ ಒಳ್ಳೆಯ ಗಳಿಕೆ ಕಂಡಿರುವಂತಹವು. ಬಲ್ಲ ಮೂಲಗಳ ಪ್ರಕಾರ ಕೆ ಮಂಜು ನಿರ್ಮಾಣದಲ್ಲಿ, ಹಾಗು ಮಹೇಶ್ ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇನ್ನೂ ಹೆಸರಿಡದ ಸಿನೆಮಾಗೆ ಯಶ್ ಮತ್ತು ರಾಧಿಕಾ ಇಬ್ಬರೂ ಆಯ್ಕೆಯಾಗಿದ್ದಾರಂತೆ.
ಆದರೆ ಈ ಯೋಜನೆಗೆ ರಾಧಿಕಾ ಪಂಡಿತ್ ಅವರಿಂದ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ನಿರ್ದೇಶಕ ಮಹೇಶ್ ರಾವ್ ಅವರನ್ನು ಸಂಪರ್ಕಿಸಿದಾಗ "ಸದ್ಯಕ್ಕೆ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಎಲ್ಲ ನಟ ನಟಿಯರು ಆಯ್ಕೆಯಾದ ನಂತರವಷ್ಟೇ ಮಾಹಿತಿ ನೀಡಲು ಸಾಧ್ಯ" ಎಂದಿದ್ದಾರೆ.
ಈ ಮಧ್ಯೆ ಯಶ್ ಅವರ 'ಮಾಸ್ಟರ್ ಪೀಸ್' ಚಲನಚಿತ್ರದ ಚಿತ್ರೀಕರಣ ಮುಗಿಯುವತ್ತ ಸಾಗಿದೆ. ರಾಧಿಕಾ ಅವರು ಗಣೇಶ್ ಅವರೊಂದಿಗೆ 'ಜೂಮ್' ಮುಗಿಸಿದ್ದು, ಸೂರಿ ನಿರ್ದೇಶನದಲ್ಲಿ ಪುನೀತ್ ಅವರೊಂದಿಗೆ 'ದೊಡ್ಮನೆ ಹುಡುಗ' ನಟನೆಯಲ್ಲೂ ಬ್ಯುಸಿಯಾಗಿದ್ದಾರೆ.