ಹಾಸ್ಯ ನಟ, ನಿರ್ದೇಶಕ ಸಾಧು ಕೋಕಿಲಾ ನಿರ್ದೇಶನದ ಭಲೇ ಜೋಡಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯೂ' ಸರ್ಟಿಫಿಕೇಟ್ ನೀಡಿದ್ದು, ಚಿತ್ರದಲ್ಲಿ 2 ಕಡೆ ಕತ್ತರಿ ಪ್ರಯೋಗ ಮಾಡುವಂತೆ ಸೂಚಿಸಿರುವುದಕ್ಕೆ ಚಿತ್ರದ ನಿರ್ಮಾಪಕ ಶೈಲೇಂದ್ರ ಬಾಬು ಅವರು ಮಂಡಳಿ ವಿರುದ್ಧ ಗರಂ ಆಗಿದ್ದಾರೆ.
ಶೈಲೇಂದ್ರ ಬಾಬು ಅವರ ಪುತ್ರ ಸುಮಂತ್ ನಟಿಸಿರುವ ಭಲೇ ಜೋಡಿ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಸೋಮವಾರ ವೀಕ್ಷಿಸಿದ್ದು, ಪಕ್ಕಾ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಆಗಿರೋ ಭಲೇ ಜೋಡಿಗೆ ಮಂಡಳಿ ಯೂ ಸರ್ಟಿಫಿಕೇಟ್ ನೀಡಿದ್ದು, 2 ಕಡೆ ಕತ್ತರಿ ಪ್ರಯೋಗ ಮಾಡುವಂತೆ ಸೂಚಿಸಿದೆ. ಅಲ್ಲದೆ ಕತ್ತರಿ ಪ್ರಯೋಗ ಮಾಡೋಕೆ ಮಂಡಳಿ ಯಾವುದೇ ವಿವರಣೆ ನೀಡಿಲ್ಲ ಈ ಕಾರಣ ನಾವು ಮರು ಪರಿಶೀಲನಾ ಮಂಡಳಿಗೆ ಅರ್ಜಿ ಹಾಕಿರುವುದಾಗಿ ಶೈಲೆಂದ್ರ ಬಾಬು ತಿಳಿಸಿದ್ದಾರೆ.
ಈ ಸಂಬಂಧ ಸೆನ್ಸಾರ್ ಮಂಡಳಿ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಕೇಳಿದರೆ ಅವರಿಂದ ಸೂಕ್ತ ಉತ್ರರ ಸಿಕ್ಕಿಲ್ಲ. ಕೋಟಿಗಟ್ಟಲೆ ಬಂಡವಾಳ ಹಾಕಿ ಸಣ್ಣ ಪುಟ್ಟ ಸೀನ್ ಗಳಿಗೆ ಕತ್ತರಿ ಪ್ರಯೋಗ ಮಾಡುವುದು, ಬಿಪ್ ಸೌಂಡುಗಳನ್ನು ಹಾಕುವುದರಿಂದ ಪ್ರೇಕ್ಷಕರಲ್ಲಿ ದ್ವಂದ್ವ ಅಭಿಪ್ರಾಯ ಉಂಟಾಗುತ್ತದೆ. ನಾನು ಚಿತ್ರರಂಗ ಇತ್ತೀಚೆಗಷ್ಟೇ ಬಂದವನಲ್ಲ, ಸುಮಾರು 28 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಇದೇ ಮೊದಲ ಬಾರಿಗೆ ನನ್ನ ಚಿತ್ರ ಸೆನ್ಸಾರ್ ಮಂಡಳಿಯಿಂದ ಮರು ಪರಿಶೀಲನೆ ಮಂಡಳಿಗೆ ಹೋಗುತ್ತಿದೆ ಎಂದರು.
ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕನನ್ನ ಸಲಿಂಗಕಾಮಿಯಂತೆ ಚಿತ್ರಿಸಲಾಗಿದೆ. ಈ ಸಲಿಂಗಕಾಮದ ದೃಶ್ಯಾವಳಿಗಳನ್ನು ಕತ್ತರಿಸುವುದರ ಜೊತೆಗೆ ಗುಮ್ತಾಳೆ ಅನ್ನೋ ಪದವನ್ನ ಬಳಸಿರೋ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಕನ್ನಡದಲ್ಲಿ ಗುಮ್ತಾನೆ..ಗುಮ್..ಗುಮ್..ಗುಮ್ತಾನೆ ಅಂತ ಹಾಡಿದೆ ಅದಕ್ಕೆ ಸೆನ್ಸಾರ್ ಪ್ರಾಬ್ಲಂ ಆಗಿಲ್ಲ ಈಗ್ಯಾಕೆ ಅಂತ ಪ್ರಶ್ನೆ ಮಾಡುತ್ತಾರೆ.
ತೆಲುಗಿನ ಸೂಪರ್ ಹಿಟ್ ಚಿತ್ರ ಅಲಾ ಮೊದಲೈಂದಿ ಚಿತ್ರವನ್ನು ಕನ್ನಡದಲ್ಲಿ ಭಲೇ ಜೋಡಿಯಾಗಿ ತೆರೆ ಮೇಲೆ ತರಲಾಗುತ್ತಿದೆ. ಚಿತ್ರದಲ್ಲಿ ಸುಮಂತ್ ಶೈಲೇಂದ್ರ ನಾಯಕನಾಗಿದ್ದು, ಶಾನ್ವಿ ಶ್ರಿವಾತ್ಸವ್ ಸುಮಂತ್‌ಗೆ ಜೋಡಿಯಾಗಿ ನಟಿಸಿದ್ದಾರೆ.