ಸಿನಿಮಾ ಸುದ್ದಿ

ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿಗಳನ್ನು ಬೆಂಬಲಿಸಿದ ಮಹೇಶ್ ಭಟ್

Guruprasad Narayana

ಮುಂಬೈ: ದೇಶದಲ್ಲಿ ಕೋಮು ದಳ್ಳುರಿ ಹೆಚ್ಚುತ್ತಿರುವುದು ಹಾಗು ಅಸಹನೆಯಿಂದ ಕೂಡಿದ ಘಟನೆಗಳು ಮರುಕಳಿಸುತ್ತಿರುವುದನ್ನು ವಿರೋಧಿಸಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಸಾಹಿತಿಗಳ ಬೆಂಬಲಕ್ಕೆ ಬಾಲಿವುಡ್ ಹಿರಿಯ ಜನಪ್ರಿಯ ನಿರ್ದೇಶಕ ಮಹೇಶ್ ಭಟ್ ನಿಂತಿದ್ದಾರೆ.

"ಹಲವು ಗಣ್ಯ ವ್ಯಕ್ತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿರುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಮತ್ತು ಅವರ ಪ್ರತಿಭಟನೆಗೆ ಸರಿಯಾದ ಕಾರಣಗಳಿವೆ. ಅವರ ಈ ನಿಲುವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ" ಎಂದು ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರ ಜನ್ಮ ದಿನಾಚರಣೆಯ ಸಂದರ್ಭದ ಕಾರ್ಯಕ್ರಮದ ಸಮಯದಲ್ಲಿ ಹೇಳಿದ್ದಾರೆ.

"ಎಲ್ಲ ಸೃಜನಶೀಲ ಕಲೆಗಳು ಸ್ಥಾಪಿತ ಪರಿಸರದಲ್ಲಿ ಕಲೆಗಾರ ಅನುಭವಿಸುವ ಅಸಮಧಾನದಿಂದಲೇ ಹುಟ್ಟುವುದು ಹಾಗು ಸರ್ಕಾರಗಳು ಈ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಪ್ರಯತ್ನಿಸುವುದು ಸಾಮಾನ್ಯ" ಎಂದು ಕೂಡ ಅವರು ಹೇಳಿದ್ದಾರೆ.

ಸಂಶೋಧಕ ಕಲ್ಬುರ್ಗಿ ಹತ್ಯೆ, ದಾಧ್ರಿ ಪ್ರಕರಣ ಮತ್ತು ಹೆಚ್ಚುತ್ತಿರುವ ಕೋಮು ದ್ವೇಷವನ್ನು ವಿರೋಧಿಸಿ ಕನ್ನಡ, ಹಿಂದಿ, ಮಲಯಾಳಮ್, ಮರಾಠಿ, ಪಂಜಾಬಿ, ಬೆಂಗಾಲಿ, ಉರ್ದು, ತಮಿಳು ಮತ್ತು ಗುಜರಾತಿ ಭಾಷೆಯ ೪೦ಕ್ಕೂ ಹೆಚ್ಚು ಲೇಖಕರು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.


SCROLL FOR NEXT