ಬೆಂಗಳೂರು: ಕನ್ನಡ ಚಿತ್ರಂಗದಲ್ಲಿ ನಟನಾಗಿ ಹುಟ್ಟಿ ಬೇರೆ ಚಿತ್ರರಂಗಕ್ಕೂ ತಮ್ಮ ಕೈಚಾಚಿ ಇಷ್ಟು ಜನಪ್ರಿಯತೆ ಪಡೆದ ನಟ ಇವರೊಬ್ಬರೇ ಇರಬೇಕು. ಹೌದು ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ಡಿನ ಫೂಂಕ್, ರಣ್, ತೆಲುಗಿನ ಈಗ, ಬಾಹುಬಲಿ ಮತ್ತು ಇನ್ನು ಬಿಡುಗಡೆಯಾಗಬೇಕಿರುವ ತಮಿಳಿನ ಪುಲಿ ಸಿನೆಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುದೀಪ್, ಕನ್ನಡ ಚಿತ್ರೋದ್ಯಮದಲ್ಲಂತೂ ಮುಟ್ಟಿದ್ದೆಲ್ಲಾ ಚಿನ್ನ. ಇತ್ತೀಚೆಗಷ್ಟೇ ತೆಲುಗಿನ ರಿಮೇಕ್ 'ರನ್ನ' ಕೂಡ ಉತ್ತಮ ಪ್ರದರ್ಶನ ಕಂಡ ವರದಿಯಾಗಿದೆ.
ಈಗ ಸೂರಪ್ಪ ಬಾಬು ನಿರ್ಮಿಸುತ್ತಿರುವ ಕೆ ಎಸ್ ರವಿಶಂಕರ್ ನಿರ್ದೇಶನದ ಇನ್ನು ಹೆಸರಿಡದ ದ್ವಿಭಾಷಾ ಚಲನಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಕಿ 'ಅನ್ನದಾತರ ಅನ್ನದಾತ' ಎಂಬ ಅಡಿಶೀರ್ಷಿಕೆಯುಳ್ಳ ೨೭ ಸೆಕಂಡುಗಳ ಟೀಸರ್ ಅನ್ನು ಸೂರಪ್ಪ ಬಾಬು ಬಿಡುಗಡೆ ಮಾಡಿದ್ದಾರೆ.
ನಿತ್ಯಾ ಮೆನನ್ ಜೊತೆ ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಹಂತ ಸೆಪ್ಟಂಬರ್ ೨೧ರಿಂದ ಪ್ರಾರಂಭವಾಗಲಿದೆ. "ನಮ್ಮ ಎರಡನೆ ಹಂತದ ಚಿತ್ರೀಕರಣ ಬೆಂಗಳೂರು, ಚೆನ್ನೈ ಮತ್ತು ಇನ್ನಿತರ ಪ್ರದೇಶಗಲ್ಲಿ ೮೦ ದಿನಗಳು ನಡೆಯಲಿದೆ. ಡಿಸೆಂಬರ್ ನಲ್ಲಿ ವಿದೇಶದಲ್ಲಿ ಚಿತ್ರೀಕರಣ ನಡೆಸಲಿದ್ದೇವೆ" ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಸರಣಿ, ಬಿಗ್ ಬಾಸ್ ಮೂರನೆ ಆವೃತ್ತಿ ಹೀಗೆ ಹತ್ತು ಹಲವು ಸಿನೆಮಾಗಳಲ್ಲೂ ನಿರತರಾಗಿರುವ ಸುದೀಪ್ ಅವರ ಕಾಲ್ ಶೀಟ್ ಗಾಗಿ ನಿರ್ದೇಶಕರು ಸರತಿಯಲ್ಲಿ ನಿಂತಿದ್ದಾರಂತೆ.
ಸದ್ಯಕ್ಕೆ ಸುದೀಪ್ ನಿರತರಾಗಿರುವ ಸಿನೆಮಾ ಪಟ್ಟಿ ಇಂತಿದೆ.
* ದ್ವಿಭಾಷಾ ಚಲನಚಿತ್ರದ ನಂತರ, ನವೆಂಬರ್ ನಲ್ಲಿ 'ಹೆಬ್ಬುಲಿ' ಚಿತ್ರೀಕರಣ ಪ್ರಾರಂಭ. ನಿರ್ದೇಶಕ ಎಸ್ ಕೃಷ್ಣ.
* ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಹೊಸ ಚಿತ್ರ
* ನಿರ್ದೇಶಕ ಪ್ರೇಮ್ ಜೊತೆಗೊಂದು ಚಿತ್ರ
* ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಅಪ್ಪ' ಸಿನೆಮಾದಲ್ಲಿ ನಟನೆ. ಇದು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಾಣವಾಗಲಿದೆ ಎಂಬ ಸುದ್ದಿಯಿದೆ.