ಒಂದಿಷ್ಟು ಸದ್ದು ಮಾಡುತ್ತ ಸೆಟ್ಟೇರಿದ ರಾಮ್ ಗೋಪಾಲ್ ವರ್ಮಾನ ಮತ್ತೊಂದು ಭೂಗತ ಕಥೆಯನ್ನು ಆಧರಿಸಿದ 'ಅಪ್ಪ' ಚಿತ್ರದ ಶೀರ್ಷಿಕೆ ಸದ್ದಿಲ್ಲದೆ ಬದಲಾಗಿದೆ.
ಹೌದು, ಬೆಂಗಳೂರು ಭೂಗತ ಜಗತ್ತಿನ ಕಥೆಯನ್ನು ಒಳಗೊಂಡಿರುವ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಂತರ ಕನ್ನಡ ಸೇರಿದಂತೆ ಆರ್‍ಜಿವಿ ನಿರ್ದೇಶನದ ಮತ್ತೊಂದು ಚಿತ್ರವಿದು. ಈ ಚಿತ್ರದಲ್ಲಿ ಮುತ್ತಪ್ಪ ರೈ ಹೇಳಿದ ಕಥೆಗಳೇ ಕೇಂದ್ರಬಿಂದು ಎನ್ನುವುದರ ಜತೆಗೆ ಸ್ವತಃ ರೈ ಜೀವನದ ಪುಟಗಳೂ ಸಿನಿಮಾದಲ್ಲಿ ಇವೆಯಂತೆ.
ಈ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು, ಅವರು ಮುತ್ತಪ್ಪ ರೈ ಪಾತ್ರ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನು ಸ್ವತಃ ವರ್ಮಾ ಹೇಳಿಕೊಂಡರು. ಕೆಲ ದಿನಗಳ ನಂತರ ಈ ಚಿತ್ರಕ್ಕೆ 'ಅಪ್ಪ' ಎನ್ನುವ ಶೀರ್ಷಿಕೆಯನ್ನು ಕಾಯಂ ಮಾಡಿದ ವರ್ಮಾ, ಈಗ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮುತ್ತಪ್ಪ ರೈ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿಯನ್ನು ಕೆಲವರು ಸುಳ್ಳು ಎಂದರು. ಆದರೆ, ಈಗ ಚಿತ್ರದ ಹೆಸರು ಬದಲಾಗಿರುವುದು ನೋಡಿದರೆ, ವರ್ಮಾರ ಈ ಭೂಗತ ಸಿನಿಮಾದ ಕಥೆಯ ಕೇಂದ್ರಬಿಂದು ಮುತ್ತಪ್ಪ ರೈ ಅವರೇ ಎನ್ನುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ.
ಅಂದಹಾಗೆ 'ಅಪ್ಪ' ಹೆಸರಿಗೆ ಬದಲಾಗಿ 'ರೈ' ಎನ್ನುವ ಹೆಸರು ಅಂತಿಮಗೊಳಿಸಿದ್ದು, ಎಂ.ಎನ್. ಕುಮಾರ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ವರ್ಮಾರ ಈ ಸಿನಿಮಾ ಮುತ್ತಪ್ಪ ರೈಗೆ ಸಂಬಂಧಿಸಿದ ಕಥೆ ಅಲ್ಲದಿದ್ದರೆ, 'ಅಪ್ಪ' ಬದಲಿಗೆ 'ರೈ' ಅಂತ ಬದಲಾಗಿದ್ದು ಯಾಕೆ? ಎನ್ನುವ ಪ್ರಶ್ನೆಗೆ ವರ್ಮಾ ಅವರೇ ಮುಂದೆ ಉತ್ತರಿಸುತ್ತಾರೆ. ಆದರೆ, ಈಗ ಹೆಸರು ಬದಲಾಗಿರುವುದಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಆಪ್ತರೊಬ್ಬರು ಒಂದಿಷ್ಟು ವಿವರಣೆ ಕೊಡುತ್ತಾರೆ.
'ಮೊದಲು ಅಪ್ಪ ಎನ್ನುವ ಹೆಸರಿಟ್ಟಿದ್ದು ನಿಜ. ಆದರೆ, ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಈ ಸಿನಿಮಾ ಮಾಡುತ್ತಿರುವುದರಿಂದ ಟೈಟಲ್‍ಗೆ ಪ್ರಾದೇಶಿಕತೆಯ ಬಣ್ಣ ಇದೆ. ಹೀಗಾಗಿ `ರೈ' ಅಂತ ಹೆಸರಿಟ್ಟರೆ ಎಲ್ಲ ಭಾಷೆಗೂ ಅನ್ವಯವಾಗುತ್ತದೆ ಎಂಬುದು ಅವರ ವಿವರಣೆ. ಅದರಲ್ಲೂ ಮುಖ್ಯವಾಗಿ ಬಾಲಿವುಡ್‍ಗೆ `ರೈ' ಎನ್ನುವ ಹೆಸರು ತುಂಬಾ ಸೂಕ್ತವಾಗುತ್ತದೆಂಬ ಕಾರಣಕ್ಕೆ `ಅಪ್ಪ' ಬದಲಾಗಿದೆ. ಇಲ್ಲಿ ಹೆಸರು ಮಾತ್ರ ಬದಲಾಗಿದೆ. ಉಳಿದಂತೆ ಸುದೀಪ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.