ಬೆಂಗಳೂರು: ಕಿರುತೆರೆಯಲ್ಲಿ ಜೆಕೆ ಎಂದೆ ಪ್ರಸಿದ್ಧನಾದ ನಟ ಜಯರಾಂ, ಟಿವಿ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದ ಮೂಲಕ ಜನಪ್ರಿಯರಾದವರು. ಬೆಳ್ಳಿತೆರೆಗೆ ಬಂದರೂ ಅದು ಯಾಕೋ ನಿರೀಕ್ಷಿತ ಮಟ್ಟದ ಯಶಸ್ಸು ಇವರನ್ನು ಅರಸಿ ಬರಲಿಲ್ಲ.
ಅಕ್ಟೋಬರ್ ಕೊನೆಗೆ 'ಅಶ್ವಿನಿ ನಕ್ಷತ್ರ' ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದ್ದು, ಜೆಕೆ ಹಿಂದಿ ಧಾರಾವಾಹಿಗೆ ಜಿಗಿದಿದ್ದಾರಂತೆ. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗಲಿರುವ ನೂತನ ರಾಮಾಯಣ 'ಸಿಯ ಕೆ ರಾಮ್' ನಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರಂತೆ.
"ಧಾರಾವಾಹಿ ನಿರ್ಮಾಪಕರು ಮತ್ತು ನಿರ್ದೇಶಕ ಹೇಳುವಂತೆ ರಾವಣ ಪಾತ್ರಕ್ಕೆ ೯೦೦೦ ಜನರನ್ನು ಆಡಿಶನ್ ಮಾಡಿದರಂತೆ. ನಾನು ಆಡಿಶನ್ ನಲ್ಲಿ ಕಷ್ಟ ಪಟ್ಟಿದ್ದಕ್ಕೆ ಆಯ್ಕೆಯಾದೆ" ಎನ್ನುತ್ತಾರೆ ಹಿಂದಿ ಕೂಡ ಚೆನ್ನಾಗಿ ಮಾತನಾಡಬಲ್ಲಿ ಜೆಕೆ.
ಈ ಟಿವಿ ಧಾರಾವಾಹಿಯ ಚಿತ್ರೀಕರಣ ಆಗಲೇ ಪ್ರಾರಂಭವಾಗಿದ್ದು, ತಂಡವನ್ನು ಜೆಕೆ ನವೆಂಬರ್ ನಲ್ಲಿ ಸೇರಲಿದ್ದಾರಂತೆ. "ಒಂದು ವರ್ಷದ ಸಮಯವನ್ನು ಮೀಸಲಿಡಬೇಕು. ಆದರೆ ನನಗೆ ವಿಷಯ ಚೆನ್ನಾಗಿ ತಿಳಿದಿರುವುದರಿಂದ ನನಗೆ ತೊಂದರೆಯಿಲ್ಲ" ಎನ್ನುತ್ತಾರೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಧಾರಾವಾಹಿ ಚಿತ್ರೀಕರಣವಾಗುತ್ತಿದ್ದು, ತಿಂಗಳಲ್ಲಿ ೧೦-೧೨ ದಿನ ಈ ನಟ ಚಿತ್ರೀಕರಣಕ್ಕೆ ಮೀಸಲಿಡಬೇಕೆಂತೆ. ಅಲ್ಲದೆ ಸದ್ಯಕ್ಕೆ ಕೆಲವು ಕನ್ನಡ, ತೆಲುಗು, ತಮಿಳು ಸಿನೆಮಾಗಳ ಅವಕಾಶಗಳು ಕೂಡ ಇವೆ ಎನ್ನುತ್ತಾರೆ ನಟ ಜೆಕೆ.