ಕೋಟಿಗೊಬ್ಬ2 ಸಿನೆಮಾದಲ್ಲಿ ನಟ ಸುದೀಪ್
ಬೆಂಗಳೂರು: ಬಹುನಿರೀಕ್ಷಿತ ಚಿತ್ರ ಸುದೀಪ್ ನಟನೆಯ ಕೋಟಿಗೊಬ್ಬ2 ಸಿನೆಮಾದ ಬಿಡುಗಡೆ ಸನಿಹವಾಗುತ್ತಿದ್ದು, ಅಭಿಮಾನಿಗಳ ಉತ್ಸಾಹ ಇಮ್ಮಡಿಸಿದೆ.
ಬಿಡುಗಡೆಯ ಸಂಭ್ರಮಕ್ಕೆ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಸೇನಾ ಸಮಿತಿ 7 ಲಕ್ಷ ರು ವ್ಯಯಿಸಲು ಮುಂದಾಗಿದೆ. ಇದರಲ್ಲಿ 5 ಲಕ್ಷ ರೂ, ಚಲನಚಿತ್ರ ಬಿಡುಗಡೆಯಾಗುತ್ತಿರುವ ಗಾಂಧಿನಗರದ ಸಂತೋಷ್ ಚಿತ್ರಮಂದರಕ್ಕೆ ಹೋಗುವ ರಸ್ತೆಯನ್ನು ಹೂವುಗಳಿಂದ ಸಿಂಗರಿಸಲು ಖರ್ಚು ಮಾಡಲಾಗುತ್ತಿದೆ. ಹಾಗೆಯೇ ಸುದೀಪ್ ಅವರ 70 ಅಡಿ ಕಟೌಟ್ ಕೂಡ ನಿರ್ಮಾಣವಾಗಲಿದೆ.
"ಶುಕ್ರವಾರ ಇಡೀ ಪ್ರದೇಶಕ್ಕೆ ಹಬ್ಬದ ವಾತಾವರಣ ಮೂಡಿಸಲಿದ್ದೇವೆ. ಸುದೀಪ್ ಅವರ ಕಟ್ಟಾ ಅಭಿಮಾನಿಗಳು ಮೊದಲ ದಿನದ ಮೊದಲ ಶೋ ನೋಡಲು ಬರಲಿದ್ದಾರೆ" ಎಂದು ಸಮಿತಿಯ ಸದಸ್ಯ ಜಗದೀಶ್ ಅಲಿಯಾಸ್ ಜಗ್ಗಿ ಹೇಳುತ್ತಾರೆ.
ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ದೊಡ್ಡಬಳ್ಳಾಪುರದಲ್ಲಿ ರಕ್ತದಾನ ಶಿಬಿರವನ್ನು ಕೂಡ ಏರ್ಪಡಿಸಿದ್ದು, ಕೆಲವು ಅಭಿಮಾನಿಗಳು ಸುದೀಪ್ ಅವರ ಈ ಸಿನೆಮಾದ ಪೋಸ್ಟರ್ ಗಳನ್ನು ತಮ್ಮ ಕಾರ್ ಗಳ ಮೇಲೆ ಹಾಕಿಕೊಂಡು ಸಿಂಗರಿಸಿಕೊಳ್ಳುತ್ತಿದ್ದಾರಂತೆ.
ಇಷ್ಟೊಂದು ಸಂಭ್ರಮಕ್ಕೆ ಕಾರಣವೇನು ಎಂದರೆ "ಸುದೀಪ್ ಅವರು ದಿನದಿಂದ ದಿನಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಮತ್ತು ನಾವು ಅವರೆಡೆಗೆ ಪ್ರೀತಿಯನ್ನು ಹರಿಸುತ್ತಿದ್ದೇವೆ" ಎನ್ನುತಾತರೆ ಜಗ್ಗಿ.
ಸುದೀಪ್ ಅವರು ತಮ್ಮ ಆಸಕ್ತಿಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡಿರುವುದಲ್ಲದೆ ಒಳ್ಳೆಯ ಜೀವನ ನಡೆಸಲು ಕೂಡ ಸಹಕಾರಿಯಾಗಿದ್ದಾರೆ ಎನ್ನುವ ಜಗ್ಗಿ "ನಾನು 13 ವರ್ಷಗಳಿಂದ ಅವರ ಅಭಿಮಾನಿ. ಅವರು ನನ್ನ ಶಕ್ತಿಯನ್ನು ಗುರುತಿಸಿ ನನ್ನ ಗುರಿಯನ್ನು ಈಡೇರಿಸಿಕೊಳ್ಳಲು ಸಹಾಯ ಮಾಡಿದರು. ನಾನು ಇಂದು ಒಂದು ಸಂಸ್ಥೆಯ ಒಡೆಯ - ಜಗ್ಗಿ ಡಿಜಿಟಲ್ ಸೈನ್ಸ್ - ಮತ್ತು 10 ಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ" ಎನ್ನುತ್ತಾರೆ.
ಸ್ಟಾರ್ ಗೆ ಛತ್ರಿ ಹಿಡಿಯುತಿದ್ದ ನವೀನ್ ಗೌಡ 14 ವರ್ಷಗಳಿಂದ ಅವರ ಅಭಿಮಾನಿ ಎನ್ನುವ ಅವರು "ಇಂದು ಅವರು ಸರಣಿ ದೊನ್ನೆ ಬಿರಿಯಾನಿ ಹೋಟೆಲ್ ಗಳ ಮಾಲೀಕ" ಎನ್ನುತ್ತಾರೆ.
ಕೆ ಎಸ್ ರವಿಕುಮಾರ್ ನಿರ್ದೇಶನದ, ಸುದೀಪ್ ಮತ್ತು ನಿತ್ಯ ಮೆನನ್ ಅಭಿನಯದ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಲಿದೆ.