ಬೆಂಗಳೂರು: ನಟ ರವಿಚಂದ್ರನ್ ಪುತ್ರ ಉದಯೋನ್ಮುಖ ನಟ ಮನೋರಂಜನ್ ಅವರ ಹುಟ್ಟುಹಬ್ಬದ ದಿನ ಅವರ ನಟನೆಯ ಚೊಚ್ಚಲ ಚಿತ್ರ 'ಸಾಹೇಬ'ನ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಡಿಸೆಂಬರ್ ೧೧ ಕ್ಕೆ ನಟನ ಹುಟ್ಟುಹಬ್ಬ.
ನಟನ ಆಕ್ಷನ್ ದೃಶ್ಯಗಳು ಮತ್ತು ನೃತ್ಯದ ತುಣುಕುಗಳನ್ನು ಒಳಗೊಳ್ಳಲಿರುವ ಟೀಸರ್ ಸದ್ಯಕ್ಕೆ ತಯಾರಾಗುತ್ತಿದೆ. ಜಯಣ್ಣ ಕಂಬೈನ್ಸ್ ನಿರ್ಮಾಣದ 'ಸಾಹೇಬ' ಚಿತ್ರವನ್ನು 'ಕಂಠಿ' ಖ್ಯಾತಿಯ ಭರತ್ ನಿರ್ದೇಶಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಟನಿಗೆ, ಚಿತ್ರತಂಡ ನೀಡುತ್ತಿರುವ ಉಡುಗೊರೆಯಾಗಿ ಟೀಸರ್ ಹೊರಹೊಮ್ಮಲಿದೆಯಂತೆ. ಶಾನ್ವಿ ಶ್ರೀವಾಸ್ತವ ನಾಯಕನಟಿಯಾಗಿ ನಟಿಸುತ್ತಿದ್ದು, ರವಿಚಂದ್ರನ್ ಅವರ ಒಂದು ಪ್ರಖ್ಯಾತ ಹಾಡು 'ಯಾರೇ ನೀನು ರೋಜಾ ಹೂವೆ' ಎಂಬ ಹಾಡಿಗೆ ಇಬ್ಬರೂ ಹೆಜ್ಜೆ ಹಾಕುತ್ತಿರವುದು ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದು.
ವಿ ಹರಿಕೃಷ್ಣ ಸಂಗೀತ ನೀಡಿದ್ದು, ಜಿ ಎಸ್ ವಿ ಸೀತಾರಾಮ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. ಈ ಮಧ್ಯೆ ನಂದ ಕಿಶೋರ್ ನಿರ್ದೇಶನದ ಚಿತ್ರದಲ್ಲಿ ಮನೋರಂಜನ್ ತಮ್ಮ ಎರಡನೇ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದು ಧನುಷ್ ಅವರ ತಮಿಳು ಸಿನೆಮಾ ವಿಐಪಿ ರಿಮೇಕ್.