ಜಯಲಲಿತಾ ಮತ್ತು ನಟಿ ಶ್ರೀದೇವಿ ಹಳೆಯ ಚಿತ್ರವೊಂದರಲ್ಲಿ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನಕ್ಕೆ ಕೇವಲ ರಾಜಕೀಯ ಗಣ್ಯರು ಮಾತ್ರವಲ್ಲದೆ ಖ್ಯಾತ ಸಿನಿಮಾ ನಟ, ನಟಿಯರು ಕೂಡ ಸಂತಾಪ ಸೂಚಿಸಿದ್ದಾರೆ.
ಹಿರಿಯ ನಟಿ ಶ್ರೀದೇವಿ ತಾವು ಬಾಲ್ಯದಲ್ಲಿ ಜಯಲಲಿತಾ ಅವರ ಜೊತೆ ನಟಿಸಿದ ಸಿನಿಮಾವೊಂದರ ಚಿತ್ರ ಹಾಕಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ನ ಹಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀದೇವಿ ಜಯಲಲಿತಾ ಅವರ ಜೊತೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಅದು 1971ರಲ್ಲಿ ತೆರೆಕಂಡ ತಮಿಳಿನ ಭಕ್ತಿ ಪ್ರಧಾನ ಚಿತ್ರ ಆತಿ ಪರಾಶಕ್ತಿ. ಅದರಲ್ಲಿ ಜಯಲಲಿತಾ ಅವರು ಜೆಮಿನಿ ಗಣೇಶನ್ ಅವರ ಶಿವನ ಪಾತ್ರಕ್ಕೆ ಜೋಡಿಯಾಗಿ ಶಕ್ತಿ ದೇವತೆಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಆಗ ಬಾಲನಟಿಯಾಗಿದ್ದ ಶ್ರೀದೇವಿ ಮುರುಗನ್ ದೇವರಾಗಿ ಅಭಿನಯಿಸಿದ್ದರು.
53ರ ಹರೆಯದಲ್ಲಿರುವ ಶ್ರೀದೇವಿ ಇಂದು ಜಯಲಲಿತಾ ಅವರನ್ನು ಸ್ಫುಟ ಗಂಭೀರ, ಸುಸಂಸ್ಕೃತ ಮತ್ತು ಕಾಳಜಿಯುಳ್ಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಖ್ಯಾತ ನಟರಾದ ಅಮಿತಾಬ್ ಬಚ್ಚನ್, ರಿಶಿ ಕಪೂರ್, ರಜನಿಕಾಂತ್, ಹೇಮ ಮಾಲಿನಿ ಮೊದಲಾದವರು ಕೂಡ ಜಯಲಲಿತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.