ಸಿನಿಮಾ ಸುದ್ದಿ

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ನಟ ಶಾರೂಕ್ ಖಾನ್

Sumana Upadhyaya
ಹೈದರಾಬಾದ್: ಇಲ್ಲಿನ ಮೌಲಾನ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಬಾಲಿವುಡ್ ನಟ ಶಾರೂಕ್ ಖಾನ್ ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಅವರು ತಮ್ಮ  ಚಿತ್ರಗಳಲ್ಲಿ ಉರ್ದು ಭಾಷೆಯನ್ನು ಬಳಸಿ ಪ್ರಚಾರ ಮಾಡಲು ನೆರವಾಗುವುದಕ್ಕೆ ಈ ಗೌರವ ನೀಡಲಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಝಫರ್ ಸರೇಶ್ ವಾಲಾ ಶಾರೂಕ್ ಖಾನ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಘಟಿಕೋತ್ಸವದ ಗೌನ್ ಧರಿಸಿ, ಸನ್ ಗ್ಲಾಸ್ ತೊಟ್ಟು ಶಾರೂಕ್ ಕಂಗೊಳಿಸುತ್ತಿದ್ದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಮ್ಮುಖದಲ್ಲಿ ಪದವಿ ಪ್ರದಾನ ಮಾಡಲಾಯಿತು. 
ನನ್ನ ತಾಯಿಯ ಜನ್ಮಸ್ಥಳ ಹೈದರಾಬಾದ್. ಹಾಗಾಗಿ ಇಂದು ನನ್ನ ಅಮ್ಮ ಇರುತ್ತಿದ್ದರೆ ಬಹಳ ಸಂತೋಷಪಡುತ್ತಿದ್ದಳು ಎಂದು ಪದವಿ ಸ್ವೀಕರಿಸಿ ಮಾತನಾಡಿದ ಶಾರೂಕ್ ನೆನಪಿಸಿಕೊಂಡರು. ತಮ್ಮ ತಂದೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಅನುಯಾಯಿ ಎಂದರು.
ತಮ್ಮ ತಂದೆ ಉರ್ದು ಮತ್ತು ಪರ್ಶಿಯಾ ಭಾಷೆಗಳನ್ನು ಸೊಗಸಾಗಿ ಮಾತನಾಡುತ್ತಿದ್ದರು.ಇಂದು ನನಗೆ ಸ್ವಲ್ಪ ಮಟ್ಟಿಗೆ ಉರ್ದು ಭಾಷೆ ಬಗ್ಗೆ ಜ್ಞಾನವಿದೆ ಎಂದಾದರೆ ಅದಕ್ಕೆ ತಮ್ಮ ತಂದೆಯೇ ಕಾರಣ ಎಂದು ಹೇಳಿದರು. ನನಗಿಂದು ಈ ಗೌರವ ನೀಡಿ ಸನ್ಮಾನಿಸಿರುವುದು ನನ್ನ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನನಗೆ ಸಾಧ್ಯವಾದಷ್ಟು ಮಟ್ಟಿಗೆ ಉರ್ದು ಭಾಷೆಯ ಬೆಳವಣಿಗೆಗೆ ಸಹಾಯ ಮಾಡುತ್ತೇನೆ ಎಂದರು.
ಶಾರೂಕ್ ಅವರಿಗೆ ಈಗಾಗಲೇ ವಿದೇಶದ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸಿಕ್ಕಿತ್ತು.
SCROLL FOR NEXT