ಸಿನಿಮಾ ಸುದ್ದಿ

'ಯಶೋಗಾಥೆ' ಹೊಸ ಅಲೆಯ ಹಾರರ್ ಸಿನೆಮಾ: ವಿನೋದ್ ಆರ್ ರಾಜ್

Guruprasad Narayana

ಬೆಂಗಳೂರು: ಇದೇ ತಿಂಗಳು ಹೊಸ ಅಲೆಯ ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಿಗೂಢ, ಭಯ, ಸ್ವಾತಂತ್ರ್ಯಪೂರ್ವದ ಕಥೆಯುಳ್ಳ 'ಯಶೋಗಾಥೆ'ಯ ನಿರ್ದೇಶಕ ವಿನೋದ್ ಜೆ ರಾಜ್.

ಈ ಸಿನೆಮಾದಲ್ಲಿ ಕಲ್ಪನೆ ಮತ್ತು ವಾಸ್ತವ ಒಂದಕ್ಕೊಂದು ಬೆಸೆದುಕೊಂಡಿದೆ ಎನ್ನುವ ನಿರ್ದೇಶಕ "ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಬರೀ ಮಹಿಳೆಯರಿರುವ ಕುಟುಂಬದ ಉಳಿವಿನ ಕಥಾಹಂದರವಿದೆ. ಆ ಕುಟುಂಬಕ್ಕೆ ಬಾಲಕನೊಬ್ಬ ಬಂದಾಗ ಆ ಮನೆಯವರು ಅನುಭವಿಸುವ ಅಲೌಖಿಕ ಭಯಾನಕ ಅನುಭವಗಳೇ ಕಥೆಯ ಜೀವಾಳ. ಇದಕ್ಕೆ ಉತ್ತರ ಕಂಡುಹಿಡಿಯಲು ಬಹಳ ನಿಗೂಢವಾಗಿರುವ ರಹಸ್ಯದ ಅನಾವರಣವಾಗುತ್ತದೆ" ಎನ್ನುತ್ತಾರೆ ವಿನೋದ್.

ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕ ಹರಿ ಸುಧನ್ ತಿವಾರಿ ಕುಪ್ಪಂನಲ್ಲಿ ಸಾಕ್ಷ್ಯಚಿತ್ರವೊಂದನ್ನು ಚಿತ್ರೀಕರಣ ಮಾಡುವಾಗ ಮಹಿಳೆಯೊಬ್ಬರನ್ನು ಭೇಟಿ ಮಾಡಿದ ಫಲವೇ 'ಯಶೋಗಾಥೆ' ಚಿತ್ರದ ಕಥೆಯಂತೆ. "ಅವರು ತಮ್ಮ ಹಿಂದಿನ ಜೀವನದ ಕಥೆಯನ್ನು ವಿವರಿಸಿದರು. ಅದು ಬಹಳ ನಿಗೂಢವಾಗಿತ್ತು. ಆ ಕಥೆ ನಿರ್ಮಾಪಕ ಮತ್ತು ನನನ್ನು ಬಹಳ ಸೆಳೆಯಿತು. ಆದುದರಿಂದ ನಮ್ಮ ಸಂಶೋಧನೆಗೆ ಹಚ್ಚಿಕೊಂಡು ಬರವಣಿಗೆ ಮುಗಿಸಿ ೨೦೧೫ರಲ್ಲಿ ಚಿತ್ರೀಕರಣವನ್ನೂ ಮುಗಿಸಿದೆವು" ಎನ್ನುತ್ತಾರೆ ವಿನೋದ್.

ಕ್ಯಾಮರಾದ ಮುಂದೆ ಮತ್ತು ಹಿಂದೆ ದುಡಿದವರೆಲ್ಲ ಹೊಸ ಮುಖಗಳೇ ಎನ್ನುವ ವಿನೋದ್ "ಸಾಮಾನ್ಯವಾಗಿ ಕನ್ನಡ ಚಿತ್ರಗಳು ನಿಭಾಯಿಸುವ ಒಂದು ರೀತಿಯ ಸಿನೆಮಾ ಇದಲ್ಲ. ವಿಭಿನ್ನವಾಗಿರುವ ಈ ಸಿನೆಮಾಗೆ ಜೀವಂತಿಕೆ ಮೂಡಿಸಲು ರವಿವರ್ಮ ಕಲಾಕೃತಿಗಳನ್ನು ಬಳಸಿದ್ದೇವೆ" ಎನ್ನುತ್ತಾರೆ.

ಮಾನಸಾ ಜೋಶಿ, ಪವಿತ್ರಾ ಬೆಳ್ಳಿಯಪ್ಪ, ಲೋಹಿತ್ ಸುರಿಯಾ ಮುಂತಾದವರು ಸಿನೆಮಾದಲ್ಲಿ ನಟಿಸಿದ್ದಾರೆ.

SCROLL FOR NEXT