ಕಬಾಲಿ ಚಿತ್ರದಲ್ಲಿ ರಜನಿಕಾಂತ್ (ಸಂಗ್ರಹ)
ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಏರ್ ಏಷಿಯಾ ವಿಮಾನ ಕಬಾಲಿ ಚಿತ್ರದ ಪೋಸ್ಟರ್ ನ್ನು ವಿಮಾನದಲ್ಲಿ ಅಂಟಿಸಿ ಅನಾವರಣಗೊಳಿಸಿತ್ತು. ಕಬಾಲಿ ಚಿತ್ರ ಬಿಡುಗಡೆ ದಿನ ಚೆನ್ನೈಗೆ ಪ್ರಯಾಣಿಕರಿಗೆ ರಿಯಾಯಿತಿಯಲ್ಲಿ ವಿಮಾನ ಹಾರಾಟವನ್ನೂ ನೀಡಲಿದೆ.
ಇದೀಗ ಭಾರ್ತಿ ಏರ್ ಟೆಲ್ ಕಂಪೆನಿ ಸರದಿ. ಚಿತ್ರ ನಿರ್ಮಾಪಕರ ಜೊತೆ ಸಹಭಾಗಿತ್ವ ಮಾಡಿಕೊಂಡಿರುವುದಾಗಿ ಅದು ಘೋಷಿಸಿಕೊಂಡಿದೆ. ಇದರ ಅಂಗವಾಗಿ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಕೂಪನ್ ನ್ನು ನೀಡಲಿದೆ. ಅದರಲ್ಲಿ ಅನಿಯಮಿತ 2ಜಿ ಇಂಟರ್ನೆಟ್, ಕಬಾಲಿ ಹಲೋ ಟ್ಯೂನ್ ಮತ್ತು ಕಬಾಲಿ ಬ್ರಾಂಡೆಡ್ ಸಿಮ್ ಕಾರ್ಡ್ ಪ್ಯಾಕ್ ಸಿಗಲಿದೆ. ಇದನ್ನು ಬಳಸಿದವರು ವಿಶೇಷ ಸಂದೇಶ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಗೆ ನೇರವಾಗಿ ಶುಭಾಶಯ ತಿಳಿಸಬಹುದು.
ಗ್ರಾಹಕರಿಂದ ಬಂದ ಎಸ್ಎಂಎಸ್ ಗಳನ್ನು ಪುಸ್ತಕವೊಂದರಲ್ಲಿ
ಕ್ರೋಢೀಕರಿಸಿ ರಜನಿಕಾಂತ್ ಅವರಿಗೆ ನೆನಪಿನ ಕಾಣಿಕೆಯಾಗಿ ಏರ್ ಟೆಲ್ ಕಂಪೆನಿ ನೀಡಲಿದೆ.
ಏರ್ ಟೆಲ್ ಕಂಪೆನಿ ಇದರ ಜೊತೆಗೆ 3ಡಿ ಹೊಲೊಗ್ರಾಫಿಕ್ ಕಬಾಲಿ ವ್ಯಾನ್ ನ್ನು ಬಿಡುಗಡೆ ಮಾಡಲಿದ್ದು, ಅದರಲ್ಲಿ ಸಿನಿಮಾದ ಟೀಸರ್ ಮತ್ತು ಕಲಾವಿದರು ಮಾತನಾಡಿದ ಬೈಟ್ ಗಳನ್ನು ಒಳಗೊಂಡ ವ್ಯಾನು ತಮಿಳು ನಾಡಿನಾದ್ಯಂತ ಸಂಚರಿಸಲಿದೆ.
ಚಿತ್ರ ಬಿಡುಗಡೆಯಾಗುವ ಒಂದು ವಾರಕ್ಕೆ ಮುಂಚೆ 3ಡಿ ಹೊಲೊಗ್ರಾಫಿಕ್ ಕಬಾಲಿ ವ್ಯಾನ್ ತನ್ನ ಪ್ರಯಾಣ ಆರಂಭಿಸಲಿದ್ದು, ಒಂದು ತಿಂಗಳವರೆಗೆ ಸಾಗಲಿದೆ. ''ರಜನಿಗೆ ಶುಭಾಶಯ'' ಪ್ರಚಾರವನ್ನು ರಾಜ್ಯಾದ್ಯಂತ ಕಬಾಲಿ ಹೋರ್ಡಿಂಗ್ಸ್ ಗಳ ಮೂಲಕ ಮತ್ತು ರೇಡಿಯೋ ಕೇಂದ್ರಗಳಲ್ಲಿ ಮಾಡಲು ಭಾರ್ತಿ ಏರ್ ಟೆಲ್ ಕಂಪೆನಿ ಯೋಜನೆ ಹಾಕಿಕೊಂಡಿದೆ.