ಬೆಂಗಳೂರು: ಸದ್ಯಕ್ಕೆ ಶಿವಕಾರ್ತಿಕೇಯನ್ ನಟನೆಯ 'ರಜನಿ ಮುರುಗನ್' ಸಿನೆಮಾದ ರಿಮೇಕ್ 'ರಾಜ್-ವಿಷ್ಣು' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಶರಣ್ ಮತ್ತೊಂದು ತಮಿಳು ಸಿನೆಮಾ 'ನಾನುಂ ರೌಡಿ ಧಾನ್' ರಿಮೇಕ್ ನಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.
ಈ ಸಿನೆಮಾದ ರಿಮೇಕ್ ಹಕ್ಕುಗಳನ್ನು ಕೊಂಡಿರುವ ನಿರ್ಮಾಣ ಸಂಸ್ಥೆ ಶರಣ್ ಅವರನ್ನು ಮುಖ್ಯಪಾತ್ರದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ತೋರಿದೆ. ಅವರು ನಟನನ್ನು ಕೇಳಿಕೊಂಡಿದ್ದು ನಟ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಈ ನಿರ್ಮಾಣ ಸಂಸ್ಥೆ ನಿರ್ದೇಶಕನ ಹುಡುಕಾಟದಲ್ಲಿದೆ.
ಮೂಲ 'ನಾನುಂ ರೌಡಿ ಧಾನ್' ಸಿನೆಮಾದ ನಿರ್ದೇಶಕ ವಿಜ್ಞೇಶ್ ಶಿವಂ ಮತ್ತು ವಂಡರ್ಬಾರ್ ಬ್ಯಾನರ್ ಅಡಿ ಇದನ್ನು ನಟ-ನಿರ್ಮಾಪಕ ಧನುಶ್ ನಿರ್ಮಿಸಿದ್ದರು. ವಿಜಯ್ ಸೇತುಪತಿ ಮತ್ತು ನಯನತಾರಾ ನಟಿಸಿದ್ದ ಈ ಸಿನೆಮಾ ಅಕ್ಟೊಬರ್ 2015 ರಲ್ಲಿ ಬಿಡುಗಡೆಯಾಗಿತ್ತು.
ಇನ್ನು ಅಧಿಕೃತ ಘೋಷಣೆ ಆಗಬೇಕಿರುವುದರಿಂದ 'ರಾಜ್-ವಿಷ್ಣು' ನಂತರ ಶರಣ್ ಅವರ ಮುಂದಿನ ಚಿತ್ರ ಇದಾಗಲಿದೆಯೇ ಎಂಬುದನ್ನು ಕಾಡು ನೋಡಬೇಕಿದೆ.
ಈಮಧ್ಯೆ ಶರಣ್ ಮತ್ತು ಮಯೂರಿ ನಟನೆಯ 'ನಟರಾಜ ಸರ್ವಿಸ್' ಸಿನೆಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ ನಟ. ಪುನೀತ್ ರಾಜಕುಮಾರ್ ಅರ್ಪಿಸಿ, ಎನ್ ಎಸ್ ರಾಜಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.