ಚೆನ್ನೈ: ಭಾರಿ ನಿರೀಕ್ಷೆಯೊಂದಿಗೆ ಕಳೆದವಾರ ಬಿಡುಗಡೆಯಾದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮಾತ್ರ ಕಬಾಲಿ ಹಿಂದೆ ಉಳಿದಿಲ್ಲ ಎಂಬ ಅಂಶ ಬಹಿರಂಗವಾಗಿದೆ.
ಮೂಲಗಳ ಪ್ರಕಾರ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ನಟನೆಯ ಚಿತ್ರ ಎಂಬ ಏಕೈಕ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಕಬಾಲಿ ಚಿತ್ರ ಬಿಡುಗಡೆಯಾದ ಕೇವಲ 4 ದಿನಗಳಲ್ಲಿ ಬರೊಬ್ಬರ 400 ಕೋಟಿ ಗಳಿಸಿದೆ ಎಂದು ತಿಳಿದುಬಂದಿದೆ. ಈ ಪೈಕಿ 200 ಕೋಟಿ ರು.ಗಳು ಚಿತ್ರಮಂದಿರಗಳ ಗಳಿಕೆಯಾಗಿದ್ದು, ಮತ್ತೆ 200 ಕೋಟಿ. ರು. ಚಿತ್ರದ ಆಡಿಯೋ ಹಕ್ಕು ಮಾರಾಟ ಮತ್ತು ಸ್ಯಾಟಲೈಟ್ ಹಕ್ಕು ಮಾರಾಟದಿಂದ ಬಂದ ಹಣವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಚಿತ್ರತಂಡದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಚಿತ್ರ ನಿರ್ಮಾಪಕ ಧನು ಅವರ ಕಬಾಲಿ ಚಿತ್ರ ವಿದೇಶಿ ಪ್ರದರ್ಶನದಿಂದಾಗಿ ಸುಮಾರು 90 ಕೋಟಿ ಗಳಿಕೆ ಮಾಡಿದ್ದು, ಅಮೆರಿಕ ದೇಶವೊಂದರಿಂದಲೇ ಸುಮಾರು 28 ಕೋಟಿ ಗಳಿಕೆಯಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಹಾಲಿವುಡ್ ನ 10 ಬಿಗ್ ಬಜೆಟ್ ಚಿತ್ರಗಳ ತೀವ್ರ ಸ್ಪರ್ಧೆಯ ನಡುವೆಯೂ ಭಾರತದ ಕಬಾಲಿ ಚಿತ್ರ ತೆರೆಕಂಡ ನಾಲ್ಕು ದಿನದಲ್ಲಿ 28 ಕೋಟಿ ಗಳಿಕೆ ಕಂಡಿರುವುದು ಇದೇ ಮೊದಲಂತೆ.
ಇನ್ನು ಭಾರತದಾದ್ಯಂತ ಕಬಾಲಿ ಚಿತ್ರದ ಗಳಿಕೆ ನಾಲ್ಕು ದಿನಕ್ಕೆ 100 ಕೋಟಿ ದಾಟಿದ್ದು, ಪ್ರಮುಖ ಚಿತ್ರ ಮಂದಿರಗಳಲ್ಲಿ ಮುಂದಿನ ವಾರಾಂತ್ಯದ ವೇಳೆಯವರೆಗೂ ಟಿಕೆಟ್ ಗಳು ಬುಕ್ ಆಗಿವೆಯಂತೆ. ಕಬಾಲಿ ಚಿತ್ರದ ಒಟ್ಟಾರೆ ಬಜೆಟ್ ಸುಮಾರು 75 ಕೋಟಿ ರುಗಳಾಗಿದ್ದು, ಚಿತ್ರದಲ್ಲಿ ನಟಿಸಲು ವಿಶ್ವದ ಎರಡನೇ ಅತ್ಯಂತ ದುಬಾರಿ ನಟ ರಜಿನಿಕಾಂತ್ 50-60 ಕೋಟಿ ರು. ಹಣ ಪಡೆದಿದ್ದಾರಂತೆ. ಇನ್ನು ಚಿತ್ರವನ್ನು ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ ಹೀಗಾಗಿ ಚಿತ್ರೀಕರಣಕ್ಕೆ ಭಾರಿ ವೆಚ್ಚವಾಗಿರಬಹುದು ಎಂದು ಎಲ್ಲರೂ ಭಾವಿಸಿದ್ದಾರೆ.
ಆದರೆ ಸತ್ಯಾಂಶವೆಂದರೆ ಅನಿವಾರ್ಯ ಎಂಬ ಸೀನ್ ಗಳನ್ನು ಮಾತ್ರ ಮಲೇಷ್ಯಾದಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದಂತೆ ಬಹುತೇಕ ಸೀನ್ ಗಳನ್ನು ಗ್ರೀನ್ ಮ್ಯಾಟ್ ಬಳಕೆ ಮಾಡಿ ಚೆನ್ನೈನಲ್ಲಿರುವ ಸ್ಟುಡಿಯೋದಲ್ಲಿಯೇ ಚಿತ್ರೀಕರಿಸಲಾಗಿದೆ. ಗ್ರಾಫಿಕ್ಸ್ ಬಳಕೆ ಮಾಡಿ ಅದನ್ನು ಮಲೇಷ್ಯಾ ಎಂಬಂತೆ ಬದಲಾವಣೆ ಮಾಡಲಾಗಿದೆ. ಇನ್ನು ಚಿತ್ರದಲ್ಲಿ ಬಳಸಲಾಗಿರುವ ದುಬಾರಿ ಕಾರುಗಳು ಮತ್ತು ಆ್ಯಕ್ಷನ್ ಸೀಕ್ವೆನ್ಸ್ ಗಳಲ್ಲಿ ಬಳಸಲಾಗಿರುವ ಭಾರಿ ವಾಹನಗಳನ್ನು ಮಲೇಷ್ಯಾದಲ್ಲಿರುವ ರಜಿನಿಕಾಂತ್ ಅಭಿಮಾನಿಗಳು ಉಚಿತವಾಗಿ ಚಿತ್ರೀಕರಣಕ್ಕೆ ನೀಡಿದ್ದಾರಂತೆ. ಹೀಗಾಗಿ ಚಿತ್ರದ ಚಿತ್ರೀಕರಣ ಅಷ್ಟೇನೂ ದುಬಾರಿಯಾಗಿರಲಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ.
"ಕಬಾಲಿ ಚಿತ್ರವನ್ನು ನಾನು ನನ್ನ ಜೀವನದಲ್ಲಿಯೇ ಮರೆಯುವುದಿಲ್ಲ. ಕಬಾಲಿ ಚಿತ್ರದ ಅಭೂತಪೂರ್ವ ಯಶಸ್ಸು 100 ವರ್ಷಗಳ ಭಾರತೀಯ ಚಿತ್ರರಂಗದ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.